ವಿರೋಧ ಪಕ್ಷದ ನಾಯಕ ಆರ್ ಅಶೋಕ್ ಅವರು ವಿಧಾನಸಭೆಯಲ್ಲಿ ನೀಡಿದ ಹೇಳಿಕೆಯಿಂದ ಭಜರಂಗದಳ ಕಲಿಯಬೇಕಾಗಿರೋದು ಸಾಕಷ್ಟಿದೆ.

ರಾಜ್ಯ

ಭಜರಂಗದಳದ ಯುವಕರೇ ಓದಿ… ಇದು ನಿಮ್ಮದೇ ಆತ್ಮಕತೆ..!

✍️. ನವೀನ್ ಸೂರಿಂಜೆ, ಪತ್ರಕರ್ತ

“ನಾನು ಗೃಹ ಸಚಿವನಾಗಿದ್ದಾಗ ನನಗೂ ಇಂತದ್ದೇ ಪರಿಸ್ಥಿತಿ ಬಂದಿತ್ತು. ಮಂಗಳೂರಿನ ಪಬ್ ನಲ್ಲಿ ಭಜರಂಗದಳದ ಕಾರ್ಯಕರ್ತರು ನುಗ್ಗಿ ಹೆಣ್ಣು ಮಕ್ಕಳಿಗೆ ಹೊಡೆದ್ರು ಅಂತ ಇದೇ ಸದನದಲ್ಲಿ ದೊಡ್ಡ ಗಲಾಟೆಯಾಯಿತು. ವಿಧಾನಸಭೆ, ವಿಧಾನಪರಿಷತ್ ನೊಳಗೆ ಧರಣಿ ಆಯ್ತು. ಆ ಸಂದರ್ಭದಲ್ಲಿ ನಾನು ಹಿಂದೆ ಮುಂದೆ ನೋಡಲಿಲ್ಲ. ನನಗೂ ಬಹಳ ಒತ್ತಡ ಇತ್ತು. ಆದರೂ ಭಜರಂಗದಳದ ಕಾರ್ಯಕರ್ತರ ಮೇಲೆ ಗೂಂಡಾ ಅ್ಯಕ್ಟ್ ಹಾಕಿದೆ. ಆ ರೀತಿಯ ನಿಲುವನ್ನು ನೀವೂ ತಗೋಬೇಕು” ಎಂದು ವಿಪಕ್ಷ ನಾಯಕ ಆರ್ ಅಶೋಕ್ ಫೆಬ್ರವರಿ 21 ರಂದು ವಿಧಾನಸಭೆಯಲ್ಲಿ ಭಾಷಣ ಮಾಡಿದ್ದಾರೆ.

2009 ಜನವರಿ 24 ರಂದು ಮಂಗಳೂರಿನ ಅಮ್ನೇಶಿಯಾ ಪಬ್ ಮೇಲೆ ದಾಳಿ ನಡೆದಿತ್ತು. ದಾಳಿಯ ಸಂದರ್ಭದಲ್ಲಿ ಹುಡುಗ ಹುಡುಗಿಯರ ಮೇಲೆ ಹಲ್ಲೆ ನಡೆಸಲಾಗಿತ್ತು. ಈ ದಾಳಿ ಅಂತರರಾಷ್ಟ್ರೀಯ ಮಟ್ಟದಲ್ಲಿ ಚರ್ಚೆಯಾಗಿ ರಾಜ್ಯದಲ್ಲಿದ್ದ ಬಿಜೆಪಿ ಸರ್ಕಾರವನ್ನು ಅಡಕತ್ತರಿಗೆ ಸಿಲುಕಿಸಿತ್ತು. ಈ ದಾಳಿಯನ್ನು ನಡೆಸಿದ್ದು ಪ್ರಮೋದ್ ಮುತಾಲಿಕ್ ನೇತೃತ್ವದ ಶ್ರೀರಾಮ ಸೇನೆ. ಆದರೆ ‘ಗೂಂಡಾ ಅ್ಯಕ್ಟ್’ ವಿಷಯ ಬಂದಾಗ ಭಜರಂಗದಳದ ಹೆಸರನ್ನೇ ಯಾಕೆ ಪ್ರಸ್ತಾಪ ಮಾಡಲಾಯಿತು ? ಭಜರಂಗದಳದಲ್ಲಿ ಇರುವುದು ಹಿಂದುಳಿದ ವರ್ಗದ ಹುಡುಗರು ! ಶ್ರೀರಾಮ ಸೇನೆಯ ಅಧ್ಯಕ್ಷ ಪ್ರಮೋದ್ ಮುತಾಲಿಕ್ ಬ್ರಾಹ್ಮಣರು !

2012 ಜುಲೈ 28 ರಂದು ಮಂಗಳೂರಿನ ಪಡೀಲ್ ನಲ್ಲಿರುವ ಹೋಂ ಸ್ಟೇ ಮೇಲೆ ದಾಳಿ ನಡೆಸಲಾಯಿತು. ಈ ದಾಳಿಯೂ ಅಂತರರಾಷ್ಟ್ರೀಯ ಮಟ್ಟದಲ್ಲಿ ಚರ್ಚೆಯಾಗಿತ್ತು. ಈ ದಾಳಿಯನ್ನು ಮಾಡಿದ್ದು ಜಗದೀಶ್ ಕಾರಂತ್ ನೇತೃತ್ವ ಹಿಂದೂ ಜಾಗರಣಾ ವೇದಿಕೆ ! ಆದರೆ ಆರ್ ಅಶೋಕ್ ಅವರು ಹಿಂದೂ ಜಾಗರಣಾ ವೇದಿಕೆಯ ಹೆಸರು ಹೇಳದೇ ಭಜರಂಗದಳದ ಹೆಸರು ಹೇಳಿದ್ದು ಯಾಕೆ ? ಯಾಕೆಂದರೆ ಹಿಂದೂ ಜಾಗರಣಾ ವೇದಿಕೆಯ ಅಧ್ಯಕ್ಷ ಜಗದೀಶ್ ಕಾರಂತ್ ಬ್ರಾಹ್ಮಣರು !

ಹೋಗಲಿ, ಆರ್ ಅಶೋಕ್ ಗೆ ಗೂಂಡಾ ಕಾಯ್ದೆಗೆ ಉದಾಹರಣೆಯಾಗಿ ಕೊಡಲು ವಿಶ್ವ ಹಿಂದೂ ಪರಿಷತ್ತಿನ ಹೆಸರು ಯಾಕೆ ಜ್ಞಾಪಕಕ್ಕೆ ಬಂದಿಲ್ಲ ? ಯಾಕೆಂದರೆ ಅದರ ನಾಯಕರೆಲ್ಲರೂ ಬ್ರಾಹ್ಮಣರೇ ! ಸಂಚಾಲಕ(ಅಧ್ಯಕ್ಷ)ರಿಂದ ಹಿಡಿದು ಕಾಲಾಳುಗಳವರೆಗೆ ಶೂದ್ರರೇ ತುಂಬಿರುವ ಆರ್ ಎಸ್ ಎಸ್ ನ ಏಕೈಕ ಸಂಘಟನೆ ಭಜರಂಗದಳ ! ಹಾಗಾಗಿ ಗೂಂಡಾ ಕಾಯ್ದೆಗೆ ಉದಾಹರಣೆಯಾಗಿ ಬಿಜೆಪಿಯೂ ಭಜರಂಗದಳದ ಹೆಸರೇ ಹೇಳುತ್ತಾರೆ.

ಚರ್ಚ್ ದಾಳಿ ಸಂದರ್ಭದಲ್ಲಿ ಭಜರಂಗದಳದ ರಾಜ್ಯ ಸಂಚಾಲಕ ಮಹೇಂದ್ರ ಕುಮಾರ್ ಮತ್ತು ವಿಶ್ವ ಹಿಂದೂ ಪರಿಷತ್ ನಾಯಕ ಎಂ ಬಿ ಪುರಾಣಿಕ್ ಜತೆಯಾಗಿ ಪ್ರೆಸ್ ಮೀಟ್ ಮಾಡಿ ಇಬ್ಬರೂ ದಾಳಿಯನ್ನು ಒಪ್ಪಿ – ಸಮರ್ಥಿಸಿದರೂ, ಕೇವಲ ಒಕ್ಕಲಿಗ/ಬಂಟನಾಗಿದ್ದ ಮಹೇಂದ್ರ ಕುಮಾರ್ ರನ್ನು ಬಂಧಿಸಲಾಯಿತು. ಬ್ರಾಹ್ಮಣ ಎಂ ಬಿ ಪುರಾಣಿಕ್ ರನ್ನು ಬಂಧಿಸುವುದು ಬಿಡಿ, ಕನಿಷ್ಟ ಪಿಟ್ಟಿ ಕೇಸೂ ದಾಖಲಿಸಲಿಲ್ಲ.

ಭಜರಂಗದಳದ ಕಾರ್ಯಕರ್ತರು ಇದನ್ನು ಅರ್ಥ ಮಾಡಿಕೊಳ್ಳಬೇಕು. ಅದಕ್ಕಾಗಿಯೇ “ಮಹೇಂದ್ರ ಕುಮಾರ್ ನಡು ಬಗ್ಗಿಸದ ಎದೆಯ ದನಿ – ಹಿಂದುತ್ವವಾದಿಯ ಒಳ ಹೊರಗಿನ ಅನುಭವ ಕಥನ” ಪುಸ್ತಕವನ್ನು ಪ್ರಕಟಿಸಲಾಗಿದೆ. ಪುಸ್ತಕಕ್ಕಾಗಿ ಲಡಾಯಿ ಪ್ರಕಾಶನದ ದೂರವಾಣಿ ಸಂಖ್ಯೆ 9480286844 ಯನ್ನು ಸಂಪರ್ಕಿಸಿ. ಭಜರಂಗದಳದ ಯುವಕರೇ ಓದಿ… ಇದು ನಿಮ್ಮದೇ ಆತ್ಮಕತೆ..!