ಡಿವೈಎಫ್ಐ 12ನೇ ರಾಜ್ಯ ಸಮ್ಮೇಳನದಲ್ಲಿ ಪೌರತ್ವ ತಿದ್ದುಪಡಿ ಕಾಯ್ದೆ (ಸಿಎಎ) ಹಾಗೂ ಏಕರೂಪ ನಾಗರೀಕ ಸಂಹಿತೆ (ಯುಸಿಸಿ) ಜಾರಿ ವಿರೋಧಿಸಿ ನಿರ್ಣಯ

ರಾಜ್ಯ

ಮಂಗಳೂರು: ನರೇಂದ್ರ ಮೋದಿ ಸರ್ಕಾರದ ಪೌರತ್ವ ತಿದ್ದುಪಡಿ ಕಾಯ್ದೆ 2019 (ಸಿಎಎ) ಹಾಗೂ ಬಿಜೆಪಿ ನೇತೃತ್ವದ ಉತ್ತರಾಖಂಡ ರಾಜ್ಯ ಸರ್ಕಾರದ ಏಕರೂಪ ನಾಗರಿಕ ಸಂಹಿತೆ ಕಾಯ್ದೆ(ಯುಸಿಸಿ) ಕಾಯ್ದೆಗಳು, ದೇಶದ ಐಕ್ಯತೆ ಮತ್ತು ಸಮಗ್ರತೆಗೆ ಗಂಭೀರ ಧಕ್ಕೆ ಹಾಗೂ ಅಪಾಯವನ್ನು ಉಂಟು ಮಾಡುವ ಕಾಯ್ದೆಗಳಾಗಿವೆ. ಈ ಕಾಯ್ದೆಗಳ ಸಾರಾಂಶ ಮತ್ತು ಉದ್ದೇಶವು ಅಸಾಂವಿಧಾನಿಕ ಮಾತ್ರವಲ್ಲ ಸಂವಿಧಾನ ವಿರೋಧಿಯಾಗಿವೆ. ಈ ಕಾಯ್ದೆಗಳನ್ನು ರದ್ದುಪಡಿಸಲು ಡಿವೈಎಫ್‍ಐ 12 ನೇ ರಾಜ್ಯ ಸಮ್ಮೇಳನ ಆಗ್ರಹಿಸುತ್ತದೆ.

ಸಿಎಎ ಕಾಯ್ದೆಯು ಪೌರತ್ವವನ್ನು ನಿರ್ಧರಿಸಲು, ಮತ ಧರ್ಮವನ್ನು ಆಧಾರವಾಗಿ ಇಟ್ಟುಕೊಂಡಿದೆ. ಯಾವುದೇ ನಾಗರಿಕರನ್ನು ಜಾತಿ, ಮತ ಧರ್ಮ, ವರ್ಗ, ಲಿಂಗ ಸೇರಿದಂತೆ ಯಾವುದೇ ನೆಲೆಯಲ್ಲಿ ತಾರತಮ್ಯ ಮಾಡದಿರುವ ನಮ್ಮ ಸಂವಿಧಾನದ ಉದ್ದೇಶ ಮತ್ತು ಆಶಯಗಳಿಗೆ ಸಂಪೂರ್ಣ ವಿರುದ್ದವಾಗಿದೆ. ನಾಗರಿಕರನ್ನು ಮತ ಧರ್ಮ, ದೇಶ, ಭಾಷೆಗಳ ಆಧಾರದಲ್ಲಿ ಅಸಮಾನತೆ ಮತ್ತು ತಾರತಮ್ಯ ಮಾನದಂಡಗಳ ಮೂಲಕ ವರ್ಗೀಕರಣ ಮಾಡುವ ಈ ಕಾಯ್ದೆಯು ಭಾರತದ ಸಂವಿಧಾನದ ಮೇಲೆ ನಡೆಸಿರುವ ಗಂಭೀರ ಹಲ್ಲೆಯಾಗಿದೆ ಹಾಗೂ ನಮ್ಮ ಸಂವಿಧಾನದ ಮೂಲಭೂತ ಆಧಾರಸ್ಥಂಭವಾದ ಧರ್ಮನಿರಪೇಕ್ಷ (ಜಾತ್ಯತೀತ) ಪರಿಕಲ್ಪನೆಯನ್ನು ಸಂಪೂರ್ಣವಾಗಿ ಉಲ್ಲಂಘಿಸಿರುವಂತಹದ್ದಾಗಿದೆ ಎಂದು ಡಿವೈಎಫ್ ಐ ನ 12 ನೇ ರಾಜ್ಯ ಸಮ್ಮೇಳನ ಅಭಿಪ್ರಾಯ ಪಡುತ್ತದೆ.

ಲೋಕಸಭಾ ಚುನಾವಣೆಗೆ ಮುನ್ನ ಸಿಎಎ ಕಾಯ್ದೆಯನ್ನು ಜಾರಿಗೊಳಿಸುವುದಾಗಿ ಕೇಂದ್ರ ಗೃಹ ಮಂತ್ರಿ ಅಮಿತ್ ಶಾ ರವರ ಹೇಳಿಕೆಯು ಸಮಾಜವನ್ನು ಕೋಮು ಆಧಾರದಲ್ಲಿ ವಿಭಜಿಸುವ ದುರುದ್ದೇಶದಿಂದ ಕೂಡಿದೆ. ಸಿಎಎ ಕಾಯ್ದೆಯನ್ನು ಎನ್‍ಆರ್‍ಸಿ ಮತ್ತು ಎನ್‍ಪಿಆರ್ ಜೊತೆ ಇಟ್ಟು ನೋಡಿದಾಗ, ಇಡೀ ದೇಶದ ನಾಗರಿಕರು ತಮ್ಮ ನಾಗರಿಕತ್ವ ಸಾಬೀತು ಪಡಿಸಬೇಕಾದ ಪರಿಸ್ಥಿತಿ ಮತ್ತು ಒತ್ತಡ ವನ್ನು ಅನುಭವಿಸಬೇಕಾಗುತ್ತದೆ. ನೋಟು ರದ್ದತಿ ರೀತಿಯಲ್ಲಿ ಇಡೀ ದೇಶದ ನಾಗರಿಕರ ನಾಗರಿಕತ್ವವನ್ನೇ ರದ್ದುಗೊಳಿಸುವ, ಕೋಮು ಆಧಾರದಲ್ಲಿ ಅಶಾಂತಿ ಸೃಷ್ಟಿ ಮಾಡುವ ಕಸರತ್ತಾಗಿದೆ. ಅಲ್ಲದೇ ಇದು ಮಾನವ ಹಕ್ಕು ಹಾಗೂ ನಾಗರಿಕ ಹಕ್ಕುಗಳಿಗೆ ಸಂಪೂರ್ಣ ವಿರುದ್ಧವಾಗಿದೆ. ಈ ಕಾಯ್ದೆ ಜಾರಿಯನ್ನು ಡಿವೈಎಫ್‍ಐ 12 ನೇ ರಾಜ್ಯ ಸಮ್ಮೇಳನ ವಿರೋಧಿಸುತ್ತದೆ.

ಬಿಜೆಪಿ ನೇತೃತ್ವದ ಉತ್ತರಾಖಂಡ ರಾಜ್ಯ ಸರ್ಕಾರ, ಆದಿವಾಸಿ ಸಮುದಾಯಗಳನ್ನು ಹೊರಗಿಟ್ಟು ತಂದಿರುವ ಏಕರೂಪ ನಾಗರಿಕ ಸಂಹಿತೆ (ಯುಸಿಸಿ) ಕಾಯ್ದೆಯು, ವಿವಿಧ ಮತ ಧರ್ಮಗಳ ಜನತೆಯ ಮೇಲೆ ಹಿಂದೂ ಮತ ಧರ್ಮದ ಸಂಹಿತೆಯನ್ನು ಏಕರೂಪವಾಗಿ ಅನ್ವಯಿಸುವ ಅಸಂವಿಧಾನಿಕ ಹಾಗೂ ಸಂವಿಧಾನ ವಿರೋಧಿ ಕಾಯ್ದೆಯಾಗಿದೆ ಎಂದು ಡಿವೈಎಫ್ ಐ 12 ನೇ ರಾಜ್ಯ ಸಮ್ಮೇಳನ ಟೀಕಿಸುತ್ತದೆ.

ಇತ್ತೀಚಿನ ಕಾನೂನು ಆಯೋಗ, ಏಕರೂಪ ನಾಗರಿಕ ಸಂಹಿತೆಯ ಜಾರಿ ಅನಗತ್ಯ ಮತ್ತು ಅನಪೇಕ್ಷಿತ ಎಂದು ಬಹಳ ಸ್ಪಷ್ಟವಾಗಿ ತಿರಸ್ಕರಿಸಿದೆ. ವಿವಿಧತೆಯಲ್ಲಿ ಏಕತೆ ಸಾಧಿಸಿರುವ ಭಾರತೀಯರು, ಮದುವೆ, ವಿಚ್ಛೇದನ, ಆಸ್ತಿ ವಾರಸುದಾರಿಕೆ, ದತ್ತು ಪದ್ದತಿ, ಜೀವಾನಾಂಶ ಮುಂತಾದ ಕೌಟುಂಬಿಕ ವಿಷಯಗಳಲ್ಲಿ ತಮ್ಮದೇ ಆದ ರೀತಿ ರಿವಾಜು ಪದ್ದತಿಗಳನ್ನು ಅನುಸರಿಸುತ್ತಿವೆ. ಧಾರ್ಮಿಕ ಸ್ವಾತಂತ್ರ್ಯದ ಮೂಲಭೂತ ಹಕ್ಕಿನಲ್ಲಿ ಇಂತಹ ಪದ್ದತಿ-ಆಚರಣೆಗೆ ಸಂವಿಧಾನ ರಕ್ಷಣೆ ಒದಗಿಸಿದೆ. ಸಂವಿಧಾನದ ನಿರ್ದೇಶಕ ತತ್ವದ 44 ನೇ ಆರ್ಟಿಕಲ್ ನಲ್ಲಿ ಪ್ರಸ್ತಾಪಿಸಿರುವ ”ಪ್ರಭುತ್ವವು ತನ್ನ ನಾಗರಿಕರಿಗೆ ದೇಶದಾದ್ಯಂತ ಸಮಾನ ನಾಗರಿಕ ಸಂಹಿತೆಯ ಭದ್ರತೆ ಒದಗಿಸಲು ಪ್ರಯತ್ನಿಸುತ್ತದೆ” ಎಂಬ ಗುರಿಯನ್ನು ಬಿಜೆಪಿ-ಆರ್ ಎಸ್ ಎಸ್ ವಿರೂಪಗೊಳಿಸಿ, ಮತೀಯ ಹಾಗೂ ಧಾರ್ಮಿಕ ಬಹುಸಂಖ್ಯಾತವಾದದ ಕಣ್ಣೋಟದಲ್ಲಿ ಅಪವಾಖ್ಯಾನಗೊಳಿಸಿದೆ. ಈ ಸಂವಿಧಾನ ವಿರೋಧಿ ಬಿಜೆಪಿ-ಆರ್‍ಎಸ್‍ಎಸ್ ಕಣ್ಣೋಟವನ್ನು ಡಿವೈಎಫ್‍ಐ 12 ನೇ ರಾಜ್ಯ ಸಮ್ಮೇಳನ ತಿರಸ್ಕರಿಸುತ್ತದೆ.

ವಿವಿಧ ಧಾರ್ಮಿಕ ಹಾಗೂ ಸಂಸ್ಕøತಿ ಆಚರಣೆಯ ಸಮುದಾಯಗಳಲ್ಲಿ ಧಾರ್ಮಿಕ ಸುಧಾರಣೆಗಳು ಹಾಗೂ ವೈಜ್ಞಾನಿಕ ಮನೋಭಾವಗಳು, ತಾರತಮ್ಯದ ಹಾಗೂ ಧಾರ್ಮಿಕ ಹಕ್ಕು ನಿರಾಕರಣೆಯ ಭಾವನೆಗಳು ಉಂಟಾಗದಂತೆ ಸಮ್ಮತಿಯಿಂದ ಸಾಧಿಸಬೇಕಾದ ಬಹು ಸೂಕ್ಷ್ಮ ಹಾಗೂ ಜಟಿಲ ಸಂಗತಿಗಳಾಗಿವೆ. ಸಂಪ್ರದಾಯ-ಪರಂಪರೆ ಹೆಸರಿನಲ್ಲಿ ಧಾರ್ಮಿಕ ಸುಧಾರಣೆಗಳನ್ನು ಹಾಗೂ ವೈಜ್ಞಾನಿಕ ಮನೋಭಾವಗಳನ್ನು ವಿರೋಧಿಸುವ ಬಿಜೆಪಿ-ಆರ್‍ಎಸ್‍ಎಸ್ ಗಳಿಗೆ ಸಮಾನ ನಾಗರಿಕ ಹಕ್ಕುಗಳ ಬಗ್ಗೆ ಮಾತನಾಡುವ ಯಾವುದೇ ನೈತಿಕತೆ ಇಲ್ಲ. ಏಕರೂಪ ನಾಗರಿಕ ಸಂಹಿತೆ ಹೆಸರಿನಲ್ಲಿ ವಿವಿಧ ಧರ್ಮಗಳ ಜನರ ನಡುವೆ ಕೋಮು ವಿಭಜನೆ ಉಂಟು ಮಾಡುವ ಮೂಲಕ ಸಾಮಾಜಿಕ ಸಾಮರಸ್ಯ ಹಾಗೂ ಸೌಹಾರ್ದತೆಯನ್ನು ಹಾಳು ಮಾಡುವ ಕೆಲಸದಲ್ಲಿ ತೊಡಗಿಕೊಂಡಿವೆ. ಡಿವೈಎಪ್‍ಐ ಇಂತಹ ದುಷ್ಟ ಪ್ರಯತ್ನಗಳನ್ನು ದೃಢವಾಗಿ ಹಿಮ್ಮೆಟ್ಟಿಸಲು ಶ್ರಮಿಸುತ್ತದೆ ಎಂದು ಡಿವೈಎಫ್‍ಐ ನ 12 ನೇ ರಾಜ್ಯ ಸಮ್ಮೇಳನ ನಿರ್ಣಯವನ್ನು ಕೈಗೊಳ್ಳುತ್ತದೆ.