ಬಾಂಬ್ ಹೇಗೆ ಮತ್ತು ಎಲ್ಲಿ ತಯಾರಾಗುತ್ತದೆ.? ಪೊಲೀಸ್ ದಾಖಲೆಗಳಲ್ಲಿದೆ ಬಾಂಬ್ ಸ್ಪೋಟದ ಅಸಲೀ ಸತ್ಯ !

ರಾಷ್ಟ್ರೀಯ

✍️. ನವೀನ್ ಸೂರಿಂಜೆ,ಪತ್ರಕರ್ತ

ಏಪ್ರಿಲ್ 12, 2023 ರ ಮಂಗಳವಾರ ರಾತ್ರಿ ಕೇರಳದ ಕಣ್ಣೂರು ಜಿಲ್ಲೆಯ ಎರಂಜೋಲಿಪಾಲಂ ಬಳಿ ಬಾಂಬ್ ತಯಾರಿಕೆ ವೇಳೆ ಸ್ಫೋಟ ಸಂಭವಿಸಿ ರಾಷ್ಟ್ರೀಯ ಸ್ವಯಂಸೇವಕ ಸಂಘ (ಆರ್‌ಎಸ್‌ಎಸ್)ಗೆ ಸೇರಿದ ಯುವಕ ತೀವ್ರ ಗಾಯಗೊಂಡಿದ್ದ. ಆತನನ್ನು ವಿಷ್ಣು (20) ಎಂದು ಗುರುತಿಸಲಾಗಿದ್ದು ಆತನ ಅಂಗೈ ಒಡೆದು ಚೆಲ್ಲಾಪಿಲ್ಲಿಯಾಗಿತ್ತು.‌ ಈ ಬಗ್ಗೆ ಪೊಲೀಸರು ಎಫ್ಐಆರ್ ದಾಖಲಿಸಿಕೊಂಡಿದ್ದಾರೆ.

ಮಂಗಳವಾರ ರಾತ್ರಿ 12 ಗಂಟೆ ಸುಮಾರಿಗೆ ವಿಷ್ಣು, ಆತನ ಮನೆಯ ಸಮೀಪದ ಹೊಲವೊಂದರಲ್ಲಿ ಬಾಂಬ್ ತಯಾರಿಸುವ ಕಾರ್ಯದಲ್ಲಿ ತೊಡಗಿದ್ದಾಗ ಸ್ಫೋಟ ಸಂಭವಿಸಿದೆ.
ಕಣ್ಣೂರು ಚಾಲಾ ಬೇಬಿ ಮೆಮೋರಿಯಲ್ ಆಸ್ಪತ್ರೆಯಲ್ಲಿ ಪ್ರಥಮ ಚಿಕಿತ್ಸೆ ನೀಡಲಾಯಿತು. ಕೈ ಮತ್ತು ದೇಹದ ಮೇಲೆ ಮಾರಣಾಂತಿಕ ಗಾಯಗಳಾಗಿದ್ದರಿಂದ ವಿಷ್ಣುವನ್ನು ಕೋಝಿಕ್ಕೋಡ್‌ಗೆ ವರ್ಗಾಯಿಸಲಾಯಿತು.

ಮಾರ್ಚ್ 2023, ಕಣ್ಣೂರಿನ ಕಕ್ಕಯಂಗಡ ಎಂಬಲ್ಲಿ ಭಾರತೀಯ ಜನತಾ ಪಕ್ಷದ ಕಾರ್ಯಕರ್ತ ಸಂತೋಷ್ ಅವರು ತಮ್ಮ ಮನೆಯಲ್ಲಿಯೇ ಇಟ್ಟಿದ್ದ ಸ್ಫೋಟಕ ಬಾಂಬ್‌ನಿಂದ ಉಂಟಾದ ಸ್ಫೋಟದಲ್ಲಿ ಗಾಯಗೊಂಡಿದ್ದಾರೆ ಎಂದು ಮಝಕ್ಕುನ್ನು ಪೊಲೀಸ್ ಠಾಣೆಯಲ್ಲಿ ಎಫ್ಐಅರ್ ದಾಖಲಾಗಿದೆ. ಸ್ಫೋಟದಲ್ಲಿ ಸಂತೋಷ್ ಅವರ ಪತ್ನಿ ಲಸಿತಾ ಕೂಡ ಗಾಯಗೊಂಡಿದ್ದಾರೆ. ಸಂತೋಷ್ ಬಾಂಬ್ ತಯಾರಿಸುತ್ತಿದ್ದ ವೇಳೆ ಅದು ಸ್ಫೋಟಗೊಂಡಿದ್ದು, ಆತನಿಗೆ ಹಾಗೂ ಆತನ ಪತ್ನಿಗೆ ಗಾಯಗಳಾಗಿವೆ. ಸ್ಫೋಟದ ಸಮಯದಲ್ಲಿ ಮತ್ತೊಂದು ಕೋಣೆಯಲ್ಲಿದ್ದ ಅವರ ತಾಯಿ ಮತ್ತು ಮಕ್ಕಳಿಗೆ ಗಾಯವಾಗಿಲ್ಲ ಎಂದು ಪೊಲೀಸ್ ವರದಿ ಹೇಳುತ್ತದೆ.

ನವೆಂಬರ್ 2017, ಕಣ್ಣೂರಿನ ಕೂತುಪರಂಬ ಎಂಬಲ್ಲಿ ರಾಷ್ಟ್ರೀಯ ಸ್ವಯಂಸೇವಕ ಸಂಘದ (ಆರ್‌ಎಸ್‌ಎಸ್) ಕಾರ್ಯಕರ್ತ ವಲಯಂಗಡನ್ ರಘು ಎಂಬಾತನಿಗೆ ಸೇರಿದ ಶೆಡ್ ನಲ್ಲಿ ಬಾಂಬ್ ತಯಾರಿಸುತ್ತಿದ್ದ ವೇಳೆ ಸ್ಫೋಟ ಸಂಭವಿಸಿದೆ.
ಸ್ಫೋಟಗೊಂಡ ಸ್ಫೋಟಕ ದೇಶಿಯ ನಿರ್ಮಿತ ಬಾಂಬ್ ಆಗಿತ್ತು.

ಆರ್ ಎಸ್ ಎಸ್ ಕಾರ್ಯಕರ್ತ ರಘು, ಬಾಂಬ್ ತಯಾರಿಸಲೆಂದೇ ಶೆಡ್ ನಿರ್ಮಿಸಿದ್ದ. ಬಾಂಬ್ ತಯಾರಿಸಲು ಬಳಸುತ್ತಿದ್ದ ಗನ್ ಪೌಡರ್ ಕೂಡ ಪೊಲೀಸರು ವಶಪಡಿಸಿಕೊಂಡಿದ್ದಾರೆ.ರಘು ವಿರುದ್ಧ ಪ್ರಕರಣ ದಾಖಲಾದ ಬಳಿಕ ರಘು ಮತ್ತು ಅತನ ಮಗ ಪರಾರಿಯಾಗಿದ್ದರು.

2016 ರಲ್ಲಿ ಕೂತುಪರಂಬದಲ್ಲಿ ದೇಶಿಯ ನಿರ್ಮಿತ ಬಾಂಬ್‌ಗಳನ್ನು ತಯಾರಿಸುತ್ತಿದ್ದಾಗ ಸ್ಫೋಟಗೊಂಡು ಬಿಜೆಪಿ ಕಾರ್ಯಕರ್ತನೊಬ್ಬ ಮೃತಪಟ್ಟಿದ್ದ.

ಡಿಸೆಂಬರ್ 2023, ಕೇರಳದ ಪೆರಿಂಗೋಮ್ ಪೊಲೀಸ್ ಠಾಣಾ ವ್ಯಾಪ್ತಿಯ ಆರ್ ಎಸ್ ಎಸ್ ಕಾರ್ಯಕರ್ತ ಕೆ ಎಂ ಬಿಜು ಎಂಬಾತನ ಮನೆಯಲ್ಲಿ ಬಾಂಬ್ ಸ್ಪೋಟ ನಡೆದಿತ್ತು. ಆತನ ಮನೆಯಲ್ಲಿ ಸಿದ್ದಪಡಿಸಿ ಶೇಖರಿಸಿಟ್ಟಿದ್ದ ಬಾಂಬ್ ಅನ್ನು ಆತನ ಮನೆಯ ನಾಯಿ ಕಚ್ಚಿದ್ದರಿಂದ ಸ್ಪೋಟಗೊಂಡು ಬಾಂಬ್ ತಯಾರಿಕಾ ಕೃತ್ಯ ಬಯಲಾಗಿತ್ತು. ಬಾಂಬ್ ತಯಾರಿಕಾ ಘಟಕ ಮತ್ತು ಬಾಂಬ್ ಸ್ಪೋಟವನ್ನು ಮರೆಮಾಚುವ ಉದ್ದೇಶದಿಂದ ಸ್ಪೋಟದಲ್ಲಿ ಸತ್ತ ನಾಯಿಯನ್ನು ತಕ್ಷಣ ಬಾವಿಗೆ ಎಸೆದಿದ್ದ. ಸ್ಥಳೀಯರು ಸ್ಪೋಟದ ಸದ್ದು ಕೇಳಿ ಪೊಲೀಸರಿಗೆ ದೂರು ನೀಡಿದಾಗ ಬಾಂಬ್ ತಯಾರಿಕಾ ಘಟಕ ಪತ್ತೆಯಾಗಿದ್ದು, ಆರ್ ಎಸ್ ಎಸ್ ಕಾರ್ಯಕರ್ತ ಕೆ ಎಂ ಬಿಜು ವಿರುದ್ದ ಪ್ರಕರಣ ದಾಖಲಿಸಲಾಗಿತ್ತು.

ಜನವರಿ 2020 ರಲ್ಲಿ ಕೇರಳದ ಕಣ್ಣೂರಿನಲ್ಲಿರುವ ಆರ್ ಎಸ್ ಎಸ್ ಕಚೇರಿ ಮೇಲೆಯೇ ಬಾಂಬ್ ಎಸೆಯಲಾಗಿತ್ತು. ಕಣ್ಣೂರಿನಲ್ಲಿ “ಮನೋಜ್ ಸ್ಮೃತಿ” ಎಂಬುದು ಆರ್ ಎಸ್ ಎಸ್ ಅಧಿಕೃತ ಕಚೇರಿಯ ಹೆಸರು.

ಆರ್‌ಎಸ್‌ಎಸ್ ಮೇಲೆ ಕಚ್ಚಾ ಬಾಂಬ್ ಎಸೆದು ಕೋಮುಗಲಭೆ ಸೃಷ್ಟಿಸಲು ಯತ್ನಿಸಿದ ಆರೋಪದ ಮೇಲೆ ರಾಷ್ಟ್ರೀಯ ಸ್ವಯಂಸೇವಕ ಸಂಘ (ಆರ್‌ಎಸ್‌ಎಸ್) ಕಾರ್ಯಕರ್ತ ಪ್ರಬೇಸ್ ಎಂಬಾತನನ್ನು ತಮಿಳುನಾಡಿನ ಕೊಯಮತ್ತೂರಿನಲ್ಲಿ ಬಂಧಿಸಲಾಗಿತ್ತು.

“ಜನವರಿ 16ರ ಬೆಳಗಿನ ಜಾವ ಬಾಂಬ್‌ಗಳನ್ನು ಎಸೆದಿದ್ದಾನೆ. ಬಂಧನದ ನಂತರ ಆತ ತನ್ನ ಗುರಿ ಆರ್‌ಎಸ್‌ಎಸ್ ಕಚೇರಿ ಎಂದು ತಪ್ಪೊಪ್ಪಿಕೊಂಡಿದ್ದಾನೆ. ಕಣ್ಣೂರು ರಾಜಕೀಯವಾಗಿ ಸೂಕ್ಷ್ಮ ಪ್ರದೇಶವಾಗಿರುವುದರಿಂದ ಕೋಮುಗಲಭೆ ಸೃಷ್ಟಿಸಲು ಆರ್ ಎಸ್ ಎಸ್ ಕಾರ್ಯಕರ್ತನೇ ಆರ್ ಎಸ್ ಎಸ್ ಕಚೇರಿ ಮೇಲೆ ಬಾಂಬ್ ಎಸೆದಿದ್ದಾನೆ. ಸಿಸಿಟಿವಿ ದೃಶ್ಯಾವಳಿ ಆಧರಿಸಿ ತನಿಖೆ ಕೈಗೆತ್ತಿಕೊಂಡಾಗ ಆರೋಪಿಯ ಪತ್ತೆಯಾಗಿತ್ತು. ಆತನನ್ನು ಕೊಯಮತ್ತೂರಿನಲ್ಲಿ ಬಂಧಿಸಲಾಗಿದ್ದು ತಪ್ಪು ಒಪ್ಪಿಕೊಂಡಿದ್ದಾನೆ” ಎಂದು ತನಿಖಾಧಿಕಾರಿಯಾಗಿದ್ದ ಕತಿರೂರು ಠಾಣೆಯ ಪೊಲೀಸ್ ಅಧಿಕಾರಿ ನಿಜೇಶ್ ಹೇಳಿಕೆ ನೀಡಿದ್ದರು.

ಇಂತಹ ಘಟನೆಗಳು ದೇಶದಾದ್ಯಂತ ಹಲವಾರು ಪೊಲೀಸ್ ಠಾಣೆಗಳಲ್ಲಿ ದಾಖಲಾಗಿದೆ‌. ಬಾಂಬ್ ದಾಳಿ, ಬಾಂಬ್ ಸ್ಪೋಟ ಎಂದು ಸುದ್ದಿಯಾಗಿ ಒಂದು ಸಮುದಾಯವನ್ನು ಅನುಮಾನಿಸಲಾಗುತ್ತದೆ. ವಾಸ್ತವವಾಗಿ ಬಾಂಬ್ ತಯಾರಿಕಾ ಘಟಕಗಳು ಯಾರದ್ದು ಎಂಬ ಬಗ್ಗೆ ಚರ್ಚೆಯೇ ನಡೆಯಬೇಕಿದೆ.

(ಈ ಎಲ್ಲಾ ಘಟನೆಗಳು ಪೊಲೀಸ್ ಎಫ್ಐಅರ್ ಆಧರಿತವಾಗಿ ಬರೆಯಲಾಗಿದೆ)