ಇತ್ತೀಚೆಗೆ ನಡೆದ ರಾಜ್ಯಸಭೆ ಚುನಾವಣೆಯಲ್ಲಿ ಕಾಂಗ್ರೆಸಿನ 6 ಶಾಸಕರು ಅಡ್ಡಮತದಾನ ಮಾಡಿದ ಕಾರಣ ಹಿಮಾಚಲ ಪ್ರದೇಶದ ಕಾಂಗ್ರೆಸ್ ಸರ್ಕಾರ ಪತನವಾಗುವ ಭೀತಿ ಎದುರಿಸುತಿತ್ತು. 68 ಸದಸ್ಯರ ಹಿಮಾಚಲ ಅಸೆಂಬ್ಲಿಯಲ್ಲಿ ಕಾಂಗ್ರೆಸ್ ಸಂಖ್ಯೆ 34ಕ್ಕೆ ಕುಸಿದಿತ್ತು. ಸರಳ ಬಹುಮತಕ್ಕೆ 35 ಸಂಖ್ಯೆಗಳ ಅಗತ್ಯವಿದೆ. ಅಲ್ಲದೇ, ಇದೆ ವೇಳೆ ಮಾಜಿ ಮುಖ್ಯಮಂತ್ರಿ ದಿ. ವೀರಭದ್ರಸಿಂಗ್ ಪುತ್ರ ಸಚಿವ ವಿಕ್ರಮಾದಿತ್ಯ ಸಿಂಗ್ ಕೂಡ ಸುಖವಿಂದರ್ ಸಿಂಗ್ ಸುಖು ನೇತೃತ್ವದ ಸಚಿವ ಸಂಪುಟಕ್ಕೆ ರಾಜೀನಾಮೆ ನೀಡಿದ್ದರು. ಈ ಬೆಳವಣಿಗೆ ಕಾಂಗ್ರಸ್ ಹೈಕಮಾಂಡ್ ಅನ್ನು ಇಕ್ಕಟ್ಟಿಗೆ ಸಿಲುಕಿಸಿತ್ತು. ಆದರೇ ಈವೇಳೆ ಮಧ್ಯ ಪ್ರವೇಶಿಸಿ ಸರ್ಕಾರವನ್ನು ಪಾರು ಮಾಡುವಲ್ಲಿ ಕಾಂಗ್ರೆಸ್ ‘ಟ್ರಬಲ್ ಶೂಟರ್’ ಎಂದೇ ಖ್ಯಾತರಾಗಿರುವ ಕನಕಪುರದ ಬಂಡೆ ಡಿ.ಕೆ. ಶಿವಕುಮಾರ್ ಪ್ರಧಾನ ಪಾತ್ರ ವಹಿಸಿ, ಸರ್ಕಾರ ಕಾಪಾಡಿದರು.
ಹೈಕಮಾಂಡ್ ಬುಲಾವ್ ಮೇರೆಗೆ ಹಿಮಾಚಲಕ್ಕೆ ತನ್ನ ಚಾಣಕ್ಯ ತಂತ್ರದೊಂದಿಗೆ ತೆರಳಿದ ಡಿಕೆಶಿ, ಮೊದಲಿಗೆ ರಾಜೀನಾಮೆ ನೀಡಿದ್ದ ಸಚಿವ ವಿಕ್ರಮಾದಿತ್ಯ ಸಿಂಗ್ ಅವರ ಮನವೊಲಿಸಿ ರಾಜೀನಾಮೆ ಹಿಂಪಡೆದು ಸರ್ಕಾರದ ಮೊದಲ ಗಂಡಾಂತರವನ್ನು ತಪ್ಪಿಸುವಲ್ಲಿ ಯಶಸ್ವಿಯಾದರು. ಎರಡನೇದಾಗಿ ಪಕ್ಷದ ಶಾಸಕರೊಂದಿಗೆ ಉಪಹಾರ ಕೂಟ ನಡೆಸಿ ಒಗ್ಗಟ್ಟಿನ ಪ್ರದರ್ಶನ ಮಾಡಿಸಿದರು. ಸಭೆಯಲ್ಲಿದ್ದ ಡಿಕೆಶಿ ಸರ್ಕಾರಕ್ಕೆ ಯಾವುದೇ ತೊಂದರೆ ಇಲ್ಲ ಎಂಬ ಭರವಸೆ ನೀಡಿದರು. ಬಳಿಕ ಬಿಜೆಪಿ ಅಭ್ಯರ್ಥಿಗೆ ಮತ ಹಾಕಿದ್ದ 6 ಕಾಂಗ್ರೆಸ್ ಶಾಸಕರನ್ನು ಹಿಮಾಚಲ ಪ್ರದೇಶದ ವಿಧಾನಸಭೆಯ ಸ್ಪೀಕರ್ ಗುರುವಾರ ಅನರ್ಹ ಮಾಡಿದ್ದಾರೆ. ಇದರೊಂದಿಗೆ ರಾಜ್ಯ ವಿಧಾನಸಭೆಯಲ್ಲಿ ಬಹುಮತ ಕಳೆದುಕೊಂಡಿದ್ದ ಕಾಂಗ್ರೆಸ್, ಮರಳಿ ಬಹುಮತ ಪಡೆದಿದೆ. ಹೀಗಾಗಿ ತಕ್ಷಣಕ್ಕೆ ಪತನದ ಭೀತಿಯಿಂದ ಮುಖ್ಯಮಂತ್ರಿ ಸುಖವಿಂದರ್ ಸಿಂಗ್ ಸುಖು ನೇತೃತ್ವದ ಕಾಂಗ್ರೆಸ್ ಸರ್ಕಾರ ಬಚಾವ್ ಆಗಿದೆ. ಇದರ ಹಿಂದೆ ಕಾಂಗ್ರೆಸ್ ಬಿಕ್ಕಟ್ಟು ಪರಿಹರಿಸಲು ವೀಕ್ಷಕರಾಗಿ ಎಐಸಿಸಿಯಿಂದ ನಿಯೋಜಿತರಾಗಿದ್ದ ಡಿ.ಕೆ.ಶಿವಕುಮಾರ್ ಅವರ ರಣತಂತ್ರ ಪ್ರಧಾನ ಪಾತ್ರ ವಹಿಸಿದೆ.
ಈ ಡಿಕೆಶಿ ಬೆದರಿಕೆಗೆ ಜಗ್ಗುವ ಮಗ ಅಲ್ಲ. ಕೆಲವರು ನನ್ನನ್ನು ಕನಕಪುರ ಬಂಡೆ ಎಂದು ಕರೆಯುತ್ತಾರೆ. ಕಲ್ಲು ಪ್ರಕೃತಿ, ಕೆತ್ತಿದರೆ ಆಕೃತಿ, ತ್ಯಜಿಸಿದರೆ ಸಂಸ್ಕ್ರತಿ. ನಾನು ಕೇವಲ ಶಿಲೆಯಾಗಲು ಬಯಸುವುದಿಲ್ಲ. ವಿಧಾನಸೌಧದ ಮೆಟ್ಟಿಲ ಚಪ್ಪಡಿ ಕಲ್ಲಾಗುತ್ತೇನೆ. ಎಲ್ಲರನ್ನೂ ಒಗ್ಗೂಡಿಸಿಕೊಂಡು ಪಕ್ಷವನ್ನು ಮತ್ತೆ ಅಧಿಕಾರಕ್ಕೆ ತರಲು ಪ್ರಯತ್ನಿಸುತ್ತೇನೆ.” ಕೆಪಿಸಿಸಿ ಅಧ್ಯಕ್ಷ ಸ್ಥಾನ ವಹಿಸಿಕೊಂಡಾಗ ಹೇಳಿದ ಮಾತು. ಡಿಕೆಸಿಗೆ ಒಲಿತಾಗಲಿ.
