ಬಿಜೆಪಿಯಲ್ಲಿ ಸೀಟು ಪಡೆಯಲು ಹಿಂದುತ್ವ ಒಂದೇ ಮಾನದಂಡ ಅಲ್ಲವಂತೆ.!

ಕರಾವಳಿ

ಯೂಸ್ ಅಂಡ್ ತ್ರೊ ಆಗಿಬಿಟ್ಟರಾ ಸತ್ಯಜಿತ್ ಸುರತ್ಕಲ್.?

ಭಾರತೀಯ ಜನತಾ ಪಕ್ಷದಲ್ಲಿ ಹೇಳುವುದೊಂದು, ಮಾಡುವುದೊಂದು ಅನ್ನುವುದಕ್ಕೆ ಪ್ರತ್ಯಕ್ಷ ಸಾಕ್ಷಿ ಕಣ್ಣ ಮುಂದಿದೆ.. ಅದು ಬೇರಾರೂ ಅಲ್ಲ. ಹಿಂದುತ್ವದ ಹಾರ್ಡ್ ಕೋರ್ ನಾಯಕ ಸತ್ಯಜಿತ್ ಸುರತ್ಕಲ್.

ಬಿಜೆಪಿಯಲ್ಲಿ ಚುನಾವಣೆ ಗೆಲ್ಲಲು ಹಿಂದುತ್ವದ ಕಾರ್ಯಕರ್ತರು ಬೇಕು. ಆದರೆ ಅಧಿಕಾರ ಪಡೆಯಲು ಅಂತಹ ಕಾರ್ಯಕರ್ತರಿಗೆ ಅವಕಾಶವೇ ಇಲ್ಲ ಅನ್ನುವ ಪರಿಸ್ಥಿತಿ ಬಿಜೆಪಿಯಲ್ಲಿದೆ ಎಂದು ಇತ್ತೀಚೆಗೆ ಬಂಟರ ಭವನದಲ್ಲಿ ಜರುಗಿದ ಜನಾಗ್ರಹ ಸಮಾವೇಶದಲ್ಲಿ ಸತ್ಯಜಿತ್ ಸುರತ್ಕಲ್ ಮನದಾಳದಲ್ಲಿ ಅದುಮಿಟ್ಟ ಮಾತುಗಳನ್ನು ಹೇಳಿರುವುದು ಇದೀಗ ವ್ಯಾಪಕ ಚರ್ಚೆಗೆ ಗ್ರಾಸವಾಗಿದೆ.

ಸತ್ಯಜಿತ್ ಸುರತ್ಕಲ್ ಕಳೆದ ಮೂವತ್ತು ವರ್ಷಗಳಿಂದ ಹಿಂದುತ್ವಕ್ಕಾಗಿ ದುಡಿದವರು. ತಳಮಟ್ಟದಲ್ಲಿ ಹಿಂದುತ್ವಕ್ಕಾಗಿ ಕಾರ್ಯಕರ್ತರನ್ನು ಸಜ್ಜುಗೊಳಿಸಿದವರು. ಕೇಸ್, ಜೈಲು ಎಂದು ಯಾವುದಕ್ಕೂ ಬೆದರದೆ ಹಿಂದುತ್ವಕ್ಕಾಗಿ ಪ್ರಾಣ ಒತ್ತೆ ಇಟ್ಟು ಕೆಲಸ ಮಾಡಿದವರು. ಹಿಂದುತ್ವದ ಕಾರ್ಯಕರ್ತರೆಡೆಯಲ್ಲಿ ಸತ್ಯಣ್ಣ ಎಂದೇ ಗುರುತಿಸಿಕೊಂಡವರು. ಇಂತಹ ಹಿನ್ನೆಲೆಯ ಸತ್ಯಜಿತ್ ಸುರತ್ಕಲ್ ರನ್ನು ಬಿಜೆಪಿ ನಡೆಸಿಕೊಂಡ ರೀತಿಯ ಬಗ್ಗೆ ಹಿಂದುತ್ವದ ಕಾರ್ಯಕರ್ತರೆಡೆಯಲ್ಲಿ ಅಸಮಾಧಾನವಿದೆ. ಹಿಂದುತ್ವಕ್ಕಾಗಿ ದುಡಿದಿದ್ದ ಸತ್ಯಜಿತ್ ಶಾಸಕ ಸ್ಥಾನ ನೀಡುವಂತೆ ಪರಿವಾರದ ಮುಖಂಡರಲ್ಲಿ ಕೇಳಿಕೊಂಡಾಗ, ಅದು ತಮ್ಮಿಂದ ಸಾಧ್ಯವಿಲ್ಲ. ಪಕ್ಷದ ಜವಾಬ್ದಾರಿ ವಹಿಸಿಕೊಳ್ಳುವಂತೆ ಹೇಳಿ ನುಣುಚಿಕೊಂಡರಂತೆ. ಇನ್ನು ಪಕ್ಷ ಇಷ್ಟು ವರ್ಷ ಹಿಂದುತ್ವದ ಸೇವೆ ಮಾಡಿದ್ದಕ್ಕಾಗಿ ಕೊಟ್ಟದ್ದು ಜುಜುಬಿ ಹಿಂದುಳಿದ ವರ್ಗದ ಅಧ್ಯಕ್ಷ ಸ್ಥಾನ. ಪಕ್ಷಕ್ಕಾಗಿ ಭಾರವಾದ ಮನಸ್ಸಿನಿಂದ ಒಪ್ಪಿಕೊಂಡು ಅಧ್ಯಕ್ಷ ಸ್ಥಾನವನ್ನು ಪ್ರಾಮಾಣಿಕವಾಗಿ ನಿರ್ವಹಿಸಿ ಮಂಗಳೂರು ಉತ್ತರದಿಂದ ಸ್ಪರ್ಧಿಸಲು ಅವಕಾಶ ನೀಡುವಂತೆ ಮತ್ತೊಮ್ಮೆ ಕೇಳಿಕೊಂಡಾಗ ಅದು ಸಾಧ್ಯವೇ ಇಲ್ಲ. ಟಿಕೆಟ್ ಪಡೆಯಲು ಹಿಂದುತ್ವ ಒಂದೇ ಮಾನದಂಡ ಅಲ್ಲ ಎಂದು ಹೇಳಿ ಕಳುಹಿಸಿದ್ದಾರಂತೆ. ಇದನ್ನು ಸ್ವತಹ ಸತ್ಯಜಿತ್ ಸುರತ್ಕಲ್ ರವರೇ ಸಭೆಯೊಂದರಲ್ಲಿ ಹೇಳಿದ್ದು, ಬಿಜೆಪಿಯಲ್ಲಿ ಮೇಲ್ನೋಟಕ್ಕೆ ಕಾಣುವ ರೀತಿಯ ಪರಿಸ್ಥಿತಿ ಅಲ್ಲಿ ಇಲ್ಲ. ಹಿಂದುತ್ವಕ್ಕಾಗಿ ಹೋರಾಡುವವರು ಅಧಿಕಾರ ಕೇಳಬಾರದು ಅನ್ನುವ ರೀತಿಯ ಕಟ್ಟಾಳೆಗಳು ಇವೆ. ಅದರಲ್ಲೂ ಹಿಂದುಳಿದ ವರ್ಗದ ನಾಯಕ ಎಷ್ಟೇ ಹಾರ್ಡ್ ಕೋರ್ ಆಗಿ ಹಿಂದುತ್ವಕ್ಕಾಗಿ ದುಡಿದರೂ ಅವರನ್ನು ಕ್ಯಾರೇ ಮಾಡುವವರು ಇಲ್ಲ. ಇದು ಕೇವಲ ಸತ್ಯಜಿತ್ ಸುರತ್ಕಲ್ ಒಬ್ಬರ ಕಥೆಯಲ್ಲ. ದಶಕಗಳ ಹಿಂದೆ ಹಿಂದುತ್ವದ ಹುಲಿಯಾಗಿ ಘರ್ಜಿಸಿದ ಪ್ರವೀಣ್ ವಾಲ್ಕೆ ಪರಿಸ್ಥಿತಿ ಈಗ ಹೇಗಿದೆ. ಹಿಂದುತ್ವಕ್ಕಾಗಿ ದಶಕಗಳ ಕಾಲ ಹೋರಾಡಿದ್ದ ಮಹೇಂದ್ರ ಕುಮಾರ್ ಸಂಘಟನೆ ಬಿಟ್ಟು ಹೊರಬಂದು, ನಿಗೂಢವಾಗಿ ಸಾವನ್ನಪ್ಪಿರುವ ಪ್ರಕರಣ. ಅತ್ತ ರಘು ಎಂಬುವವರನ್ನು ಬಳಸಿಕೊಂಡು ಅರ್ಧ ದಾರಿಯಲ್ಲಿ ಕೈ ಬಿಟ್ಟ ಪ್ರಕರಣ. ವಿನಯ, ಪ್ರಸಾದ್ ಅತ್ತಾವರ ಮುಂತಾದವರ ಪರಿಸ್ಥಿತಿಯು ಇದೆ ಆಗಿದೆ. ಒಂದಾ..ಎರಡಾ.. ಹಿಂದುತ್ವಕ್ಕಾಗಿ ಪ್ರಾಣ ಕೊಡಲು ಇವರು, ಆದರೆ ಅಧಿಕಾರ ಬೇರೆಯವರಿಗೆ.

ಬಿಜೆಪಿಯಲ್ಲಿ ಹೊರಗಿನಿಂದ ಬಂದವರಿಗೆ ಸೀಟು ಸಲೀಸಾಗಿ ಸಿಗುತ್ತದೆ. ಆದರೆ ಹಿಂದುತ್ವಕ್ಕಾಗಿ ದುಡಿದವರಿಗೆ ಮೀನಮೇಷ ಎಣಿಸಲಾಗುತ್ತದೆ. ಕಳೆದ ಲೋಕಸಭಾ ಚುನಾವಣಾ ಸಮಯದಲ್ಲಿ ಮುಂದಿನ ಅಭ್ಯರ್ಥಿ ಸತ್ಯಜಿತ್ ಸುರತ್ಕಲ್ ಎಂದು ಕಾರ್ಯಕರ್ತರು ಗಲ್ಲಿ ಗಲ್ಲಿಗಳಲ್ಲಿ 300 ಕ್ಕೂ ಅಧಿಕ ಪ್ಲೆಕ್ಸ್ ಹಾಕಿದ್ದರು. ಬಿಜೆಪಿ ಹಿರಿಯ ನಾಯಕ ಯಡಿಯೂರಪ್ಪ ರವರು ಪಕ್ಷಕ್ಕೆ ಮುಜುಗರವಾಗುತ್ತದೆ. ಪ್ಲೆಕ್ಸ್ ತೆಗೆಯುವಂತೆ ಮನವಿ ಮಾಡಿದ್ದಾರಂತೆ. ತಮಗೆ ಬಿಜೆಪಿಯಲ್ಲಿ ಒಳ್ಳೆಯ ಅವಕಾಶ ನೀಡುವುದಾಗಿ ಭರವಸೆ ನೀಡಿದ್ದಾರಂತೆ. ಯಡಿಯೂರಪ್ಪ ಮಾತಿಗೆ ಬೆಲೆ ಕೊಟ್ಟು ಸತ್ಯಜಿತ್ ತನ್ನ ಹೆಸರಿನಲ್ಲಿ ಗಲ್ಲಿ ಗಲ್ಲಿಗಳಲ್ಲಿ ರಾರಾಜಿಸಿದ್ದ ಪ್ಲೆಕ್ಸ್ ತೆಗೆಸಿದ್ದರು. ಚುನಾವಣಾ ಮುಗಿದ ನಂತರ ಸತ್ಯಜಿತ್ ರನ್ನು ಕೇಳುವವರೇ ಇಲ್ಲವಂತೆ. ಅವಕಾಶ ನೀಡುತ್ತೇವೆ ಅಂದಿದ್ದ ಬಿಜೆಪಿಯಿಂದ ಬಂದಿದ್ದ ಉತ್ತರ ರಾಜಕೀಯವಾಗಿ ಮುಗಿಸಿದ್ದೇವೆ ಎಂದು.

ಬಹುಶಃ ಕರಾವಳಿಯಲ್ಲಿ ಹಿಂದುತ್ವಕ್ಕಾಗಿ ಸತ್ಯಜಿತ್ ಸುರತ್ಕಲ್ ರವರಷ್ಟು ಕೆಲಸ ಮಾಡಿದವರು ಇನ್ನೊಬ್ಬರು ಇರಲಾರರು. ಹಿಂದುತ್ವವೇ ಉಸಿರು ಅಂದಿದ್ದ ಸತ್ಯಜಿತ್ ಗೆ ಹಿಂದುತ್ವದ ಸರಕಾರವೇ ಇರುವಾಗ ರಕ್ಷಣೆಗಿದ್ದ ಗನ್ ಮ್ಯಾನ್ ಭದ್ರತೆಯನ್ನು ವಾಪಾಸು ಪಡೆದಿದ್ದರು. ಸತ್ಯಜಿತ್ ಸುರತ್ಕಲ್ ರಿಗೆ ಇಂತಹ ಅನುಭವವಾದರೆ ಇನ್ನು ಸಾಮಾನ್ಯ ಕಾರ್ಯಕರ್ತರ ಪಾಡೇನು.?