ಗಂಜಿಮಠ ಗ್ರಾಮ ಪಂಚಾಯತ್ ಗೆ ಬಿಗ್ ಬ್ಯಾಗ್ ನಿಂದ ಬೃಹತ್ ಮೊತ್ತದ ಬಾಕಿ ತೆರಿಗೆ ಪಾವತಿ

ಕರಾವಳಿ

ಗುರುಪುರ ಭಾಗದಲ್ಲಿ ಅತ್ಯಂತ ಹೆಚ್ಚು ಆದಾಯದ ಮೂಲ ಹೊಂದಿರುವ ಪಂಚಾಯತ್ ಗಳಲ್ಲಿ ಗಂಜಿಮಠ ಗ್ರಾಮ ಪಂಚಾಯತ್ ಪ್ರಮುಖವಾದುದು.ಇದಕ್ಕೆ
ಪ್ರಮುಖ ಕಾರಣ ಈ ಪಂಚಾಯತ್ ವ್ಯಾಪ್ತಿಯಲ್ಲಿ ಕಾರ್ಯಾಚರಿಸುತ್ತಿರುವ ಗಂಜಿಮಠ ಕೈಗಾರಿಕಾ ವಲಯಗಳಿಂದಲೇ ವರ್ಷಕ್ಕೆ ಕೋಟಿ ಗಟ್ಟಲೆ ತೆರಿಗೆ ಪಂಚಾಯತ್ ಗೆ ಬರುವಂತದ್ದು. ಆದರೆ ಗಂಜಿಮಠ ಕೈಗಾರಿಕಾ ವಲಯದ ಬಿಗ್ ಬ್ಯಾಗ್ ಇಂಟರ್ ನ್ಯಾಶನಲ್ ಪ್ರೈವೇಟ್ ಲಿಮಿಟೆಡ್ ಒಂದರಿಂದಲೇ ಎರಡು ಕೋಟಿಗೂ ಅಧಿಕ ತೆರಿಗೆ ಪಂಚಾಯತ್ ಗೆ ಬರಲು ಬಾಕಿ ಇದೆ. ಈ ಬಗ್ಗೆ ಪಂಚಾಯತ್ ಅಧಿಕಾರಿಗಳು ಹಲವು ಬಾರಿ ಈ ಕಂಪನಿಗೆ ನೋಟಿಸ್ ಮೇಲೆ ನೋಟಿಸ್ ಇಶ್ಯೂ ಮಾಡಿ, ಕಂಪೆನಿಗೆ ಖಡಕ್ ಅವಾಜ್ ಹಾಕಿದರೂ ಕಂಪೆನಿಯವರು ತೆರಿಗೆ ಕಟ್ಟದೆ ಬಾಕಿ ಉಳಿಸಿದ್ದರು. ಈ ಬಗ್ಗೆ ಸ್ಪೆಷಲ್ ನ್ಯೂಸ್ ಮೀಡಿಯಾ ಸಮಗ್ರ ವರದಿಯನ್ನು ಬಿತ್ತರಿಸಿ ಪಂಚಾಯತ್ ಕಣ್ಣು ತೆರೆಸುವ ಕೆಲಸ ಮಾಡಿತ್ತು.

ಇತ್ತೀಚೆಗೆ ಗಂಜಿಮಠ ಗ್ರಾಮ ಪಂಚಾಯತ್ ತರಾತುರಿಯಲ್ಲಿ ಮೀಟಿಂಗ್ ನಡೆಸಿ ಕಂಪೆನಿಯಿಂದ ಕೋಟಿಗಟ್ಟಲೆ ತೆರಿಗೆ ಬಾಕಿ ಇರುವಾಗಲೇ ಕೆಲವು ಸದಸ್ಯರ ವಿರೋಧದ ನಡುವೆ, ಕೆಲವು ಸದಸ್ಯರ ಮದ್ಯಸ್ಥಿಕೆಯಲ್ಲಿ ಬಾಂಡ್ ಪಡೆದು 9/11 ದಾಖಲೆ ನೀಡಲು ನಿರ್ಣಯಿಸಿತ್ತು. ಪಂಚಾಯತ್ ನಿಂದ ಬಡವರಿಗೊಂದು ನ್ಯಾಯ? ಶ್ರೀಮಂತರಿಗೊಂದು ನ್ಯಾಯದ ಬಗ್ಗೆ ವ್ಯಾಪಕ ಆಕ್ರೋಶ ಕೇಳಿಬಂದಿತ್ತು. ಕುರುಡು ಕಾಂಚಾಣಕ್ಕೆ ಪಂಚಾಯತ್ ಬಲಿಯಾಯಿತೋ ಅನ್ನುವ ಮಾತುಗಳು ಕೇಳಿ ಬರಲಾರಂಭಿಸಿತು. ಇದರ ಗಂಭೀರತೆಯನ್ನು ಅರಿತ ಈಗಿನ ಪಿಡಿಓ ಸಾಹೇಬರು ಕಂಪೆನಿಯೊಂದಿಗೆ ಖಡಕ್ಕಾಗಿ ವ್ಯವಹರಿಸಿ ಮೈನಸ್ 9/11 ನೀಡಿದರು. ಇದು ಕಂಪೆನಿಗೆ ನುಂಗಲಾರದ ತುತ್ತಾಯಿತು.

ಆದರೆ ಇದೀಗ ಗಂಜಿಮಠ ಗ್ರಾಮ ಪಂಚಾಯತ್ ವ್ಯಾಪ್ತಿಯ 1 ನೇ ವಾರ್ಡಿನ ಕೈಗಾರಿಕ ಪ್ರದೇಶದಲ್ಲಿರುವ ಬಿಗ್ ಬ್ಯಾಗ್ ಕಂಪೆನಿಯು 2012 ರಿಂದ 2024 ಮಾರ್ಚ್ ತನಕ ಬಾಕಿ ಇದ್ದ ಎಲ್ಲಾ ತೆರಿಗೆಯನ್ನು ದಿನಾಂಕ 05/03/2024 ರಂದು ನಿಖರ ಮೊತ್ತ 1,00,44,073 ರೂ ಗಳನ್ನು ಕಂಪೆನಿಯವರು ಪಾವತಿಸಿದ್ದಾರೆ.