ಆಸರೆ ಆಸ್ಪತ್ರೆಯಲ್ಲಿ 74 ಹೆಣ್ಣು ಭ್ರೂಣದ ಹತ್ಯೆ.! ಆಸರೆ ನೀಡಬೇಕಾದವರೇ ಪಾಪಿಗಳಾದರೇ.?

ರಾಜ್ಯ

ನೆಲಮಂಗಲದ ಆಸ್ಪತ್ರೆಯೊಂದರಲ್ಲಿ ಒಬ್ಬನೇ ವೈದ್ಯ 74 ಹೆಣ್ಣು ಭ್ರೂಣಗಳ ಹತ್ಯೆ ಮಾಡಿರುವುದು ಬೆಳಕಿಗೆ ಬಂದಿದೆ. ಇಲ್ಲಿನ ಆಸರೆ ಆಸ್ಪತ್ರೆ ಮಕ್ಕಳ ಕೊಲೆ ಮಾಡುವ ತಾಣವಾಗಿ ಮಾರ್ಪಟ್ಟಿರುವುದು ಸ್ಪಷ್ಟವಾಗಿದೆ. ಇಡೀ ದೇಶದಲ್ಲಿ ಭ್ರೂಣ ಹತ್ಯೆಗೆ ನಿಷೇಧವಿದೆ, ಅಲ್ಟ್ರಾಸೌಂಡ್‌ ಸೇರಿದಂತೆ ಯಾವುದೇ ತಂತ್ರಜ್ಞಾನಗಳ ಮೂಲಕ ಮಕ್ಕಳ ಲಿಂಗ ಪತ್ತೆ ಹಚ್ಚಿ ಹೆತ್ತವರಿಗೆ ತಿಳಿಸಬಾರದು ಎಂಬ ನಿಯಮವಿದೆ. ಆದರೆ, ಇವುಗಳನ್ನು ಗಾಳಿಗೆ ತೂರಿ ಲಿಂಗಪತ್ತೆಯನ್ನೇ ಪ್ರಧಾನ ಕಸುಬನ್ನಾಗಿ ಮಾಡಿಕೊಂಡು, ಹೆತ್ತವರ ಜತೆ ಸೇರಿ ಭ್ರೂಣ ಹತ್ಯೆ ಮಾಡುವ ಕೆಲಸ ನೆಲಮಂಗಲದ ಆಸರೆ ಆಸ್ಪತ್ರೆಯಲ್ಲಿ ಮಾಡಲಾಗುತ್ತಿದೆ. ಈ ಆಸ್ಪತ್ರೆಯಲ್ಲಿ ಕಳೆದ ಮೂರು ವರ್ಷಗಳಲ್ಲಿ 74 ಭ್ರೂಣಗಳ ಹತ್ಯೆ ನಡೆಸಲಾಗಿದೆ ಎಂದು ಸ್ವತಃ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯೇ ಈ ಆಸ್ಪತ್ರೆಗೆ ನೋಟಿಸ್‌ ನೀಡಿದೆ.

ಇಲ್ಲಿನ ಮುಖ್ಯ ವೈದ್ಯ ಡಾ. ರವಿಕುಮಾರ್‌ ಈತನೇ ಪ್ರಧಾನ ಆರೋಪಿಯಾಗಿದ್ದು, ಇತರ ವೈದ್ಯರು ಮತ್ತು ಸಿಬ್ಬಂದಿ ಕೂಡಾ ಇದರಲ್ಲಿ ಶಾಮೀಲಾಗಿ ಹೆಣ್ಣು ಭ್ರೂಣ ಹತ್ಯೆಯಲ್ಲಿ ಶಾಮೀಲಾಗಿದ್ದಾರೆ ಎಂದು ಆರೋಪಿಸಲಾಗಿದೆ.

ಡಿಹೆಚ್ಓ ಅವರೇ ನೆಲಮಂಗಲ ಟೌನ್ ಪೊಲೀಸ್ ಠಾಣೆಯಲ್ಲಿ ಈ ಸಂಬಂಧ ದೂರು ದಾಖಲಿಸಿದ್ದಾರೆ. ಆಸ್ಪತ್ರೆಯಲ್ಲಿ ಬಹುತೇಕ‌ ಗರ್ಭಪಾತಗಳ ಅಲ್ಟ್ರಾಸೌಂಡ್ ರಿಪೋರ್ಟ್ ನಾಪತ್ತೆಯಾಗಿದೆ ಎನ್ನಲಾಗಿದೆ. ಆಪರೇಷನ್ ಥಿಯೇಟರ್ ನಲ್ಲಿ ಮಾತ್ರ ಗರ್ಭಪಾತದ ರಿಜಿಸ್ಟರ್ ನಲ್ಲಿ ಗರ್ಭಪಾತ ಮಾಡಿರೋದು ಉಲ್ಲೇಖವಾಗಿದೆ ಎಂದು ದೂರಿನಲ್ಲಿ ಉಲ್ಲೇಖವಾಗಿದೆ. ಇತ್ತ ಎಫ್ಐಆರ್ ದಾಖಲಾಗುತ್ತಿದ್ದಂತೆ ಆಸರೆ ಆಸ್ಪತ್ರೆಯ ಮಾಲೀಕ ರವಿಕುಮಾರ್ ನಾಪತ್ತೆಯಾಗಿದ್ದು, ಪೊಲೀಸರು ಹುಡುಕಾಟ ನಡೆಸಿದ್ದಾರೆ.

ಆಸರೆ ಆಸ್ಪತ್ರೆಯು ಎಂಟಿಪಿ ಕಾಯ್ದೆ ಅಡಿಯಲ್ಲಿ ಪರವಾನಿಗೆಯನ್ನು ಪಡೆಯದೇ 2021ನೇ ಇಸವಿಯಿಂದ ಇಲ್ಲಿಯವರೆಗೆ 74 ಗರ್ಭಪಾತಗಳನ್ನು ನಡೆಸಿರುತ್ತಾರೆ. ಇದು ವೈದ್ಯಕೀಯ ಗರ್ಭಪಾತ ಕಾಯ್ದೆ 1971ರ ನಿಯಮದ ಉಪ ಕಲಂ (ಬಿ) ಯ ಉಲ್ಲಂಘನೆಯಾಗಿರುತ್ತದೆ.

ಸದರಿ ಆಸ್ಪತ್ರೆಯವರು ತಮ್ಮ ಸಂಸ್ಥೆಯಲ್ಲಿ ನಡೆಸಿದ ಗರ್ಭಪಾತಗಳಿಗೆ ಸಂಬಂಧಿಸಿದ MTP ನಿರ್ವಹಣೆ ಮಾಡಿರುವುದಿಲ್ಲ. ಇದರ ಬದಲಿಗೆ ಗರ್ಭಪಾತಕ್ಕೆ ಸಂಬಂಧಿಸಿದ ಎಲ್ಲಾ ವಿವರಗಳನ್ನು ತಮ್ಮ ಸಂಸ್ಥೆಯ ಶಸ್ತ್ರಚಿಕಿತ್ಸಾ ಕೊಠಡಿ ಯ ರಿಜಿಸ್ಟರ್​​ನಲ್ಲಿ ನಮೂದಿಸಿರುತ್ತಾರೆ. ಇದು ವೈದ್ಯಕೀಯ ಗರ್ಭಪಾತ ಕಾಯ್ದೆ 1971, 2023ರ ವಿಧೇಯಯ ನಿಯಮ 5ರ ಉಪಕಲಂ (1), 2, (3) ಮತ್ತು ನಿಯಮವನ್ನು ಸ್ಪಷ್ಟವಾಗಿ ಉಲ್ಲಂಘನೆಯಾಗುತ್ತದೆ.

ಗರ್ಭಪಾತಗಳಿಗೆ ಪೂರಕ ದಾಖಲೆಗಳಾದ ಅಲ್ಟ್ರಾ ಸೌಂಡ್ ರಿಪೋರ್ಟ್​ಗಳಿ ಬಹುತೇಕ ಪ್ರಕರಣಗಳು (90%) ಕೇಸ್ ಶೀಟ್​ಗಳಲ್ಲಿ ಲಭ್ಯವಿರುವದಿಲ್ಲ. ಇಲ್ಲಿ ನಡೆಸಿರುವ ಗರ್ಭಪಾತಗಳ ಮಾಸಿಕ ವಿವರಗಳನ್ನು ಇಲ್ಲಿಯವರೆಗೂ ನಿಗದಿಯ ನಮೂನೆಯಲ್ಲಿ ಜಿಲ್ಲಾ ಪ್ರಾಧಿಕಾರಕ್ಕೆ ಸಲ್ಲಿಸಿರುವುದಕ್ಕೆ ಸಂಸ್ಥೆಯಲ್ಲಿ ಯಾವುದೇ ದಾಖಲೆಗಳು ಇರುವುದಿಲ್ಲ