ಆಪತ್ಕಾಲದಲ್ಲಿ ಬಳಸಿಕೊಂಡು ಕೈ ಬಿಡುವ ‘ಕೈ ಕಮಾಂಡ್’ ಗೆ ಎಚ್ಚರಿಕೆಯ ಕರೆಗಂಟೆ.!
ಕೆಪಿಸಿಸಿ ಅಧ್ಯಕ್ಷ, ರಾಜ್ಯದ ಉಪಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಇಶಾ ಫೌಂಡೇಶನ್ ಸಂಸ್ಥಾಪಕ ಜಗ್ಗಿ ವಾಸುದೇವ್ ಅವರ ಕಾರ್ಯಕ್ರಮದಲ್ಲಿ ಭಾಗಿಯಾಗಿರುವುದು ರಾಜಕೀಯ ವಲಯದಲ್ಲಿ ಸುಂಟರಗಾಳಿ ಎಬ್ಬಿಸಿದೆ. ರಾಜಕೀಯ ಪರಿಣಿತರಿಂದ ಹಲವು ವಿಶ್ಲೇಷಣೆಗಳು ನಡೆಯುತ್ತಿದೆ. ಉಹಾಪೋಹಗಳಿಗೂ ಕಾರಣವಾಗಿದೆ. ಡಿಕೆಶಿ ರಾಜಕೀಯ ಗುರು ಎಸ್ ಎಂ ಕೃಷ್ಣ ರಂತೆ ಕಾಂಗ್ರೆಸ್ ತೊರೆದು ಬಿಜೆಪಿ ಸೇರುತ್ತಾರಾ..?ಅಷ್ಟಕ್ಕೂ ಡಿಕೆಶಿ ಕಾಂಗ್ರೆಸ್ ಗೆ ಗುಡ್ ಬೈ ಹೇಳುತ್ತಾರಾ.? ಆಪತ್ಕಾಲದಲ್ಲಿ ಬಳಸಿಕೊಂಡ ಕೈ ಕಮಾಂಡಿಗೆ ಸ್ಟ್ರಾಂಗ್ ಮೆಸೇಜ್ ರವಾನಿಸಿದ್ದರಾ..? ಇಂತಹ ಹಲವಾರು ಪ್ರಶ್ನೆಗಳು ಎದ್ದಿವೆ. ಒಟ್ಟಾರೆ ಡಿಕೆಶಿ ನಡೆ ಕಾಂಗ್ರೆಸ್ ನೊಳಗಡೆ ಅಚ್ಚರಿಗೂ ಕಾರಣವಾಗಿದೆ.

ಡಿಕೆಶಿ ಕಾಂಗ್ರೆಸ್ ಪಕ್ಷದ ನಿಷ್ಠಾವಂತ ನಾಯಕ. ಕಾಂಗ್ರೆಸ್ ಪಕ್ಷವನ್ನೇ ಉಸಿರಾಗಿಸಿಕೊಂಡವರು. ತನ್ನ ಡೇರ್ ಡೆವಿಲ್ ನಡೆಯಿಂದ ರಾಜಕಾರಣದ ಬಂಡೆಯಾಗಿ ಗುರುತಿಸಿಕೊಂಡವರು. ಪಕ್ಷಕ್ಕಾಗಿ ಇ.ಡಿ, ಸಿಬಿಐ ಕುಣಿಕೆಗೆ ಸಿಲುಕಿ ಜೈಲು ಪಾಲಾದರೂ, ಡೋಂಟ್ ಕೇರ್ ಅನ್ನದೇ ಪಕ್ಷವೇ ಉಸಿರು ಎಂದು ಕೆಲಸ ಮಾಡಿಕೊಂಡವರು. ಡಿಕೆಶಿ ಜಾಗದಲ್ಲಿ ಮತ್ತೊಬ್ಬ ನಾಯಕನಿದ್ದರೆ ಅವತ್ತೆ ಕಾಂಗ್ರೆಸ್ ಗೆ ಟಾಟಾ ಹೇಳಿ ಬಿಜೆಪಿ ಮಡಿಲು ಸೇರುತ್ತಿದ್ದರು. ಆದರೆ ಡಿಕೆಶಿ ಅವು ಯಾವುದನ್ನು ಮಾಡಲಿಲ್ಲ. 2018 ರ ಚುನಾವಣೆಯಲ್ಲಿ ಸಿದ್ದರಾಮಯ್ಯ ಸರಕಾರ ಸೋತು ರಾಜ್ಯದಲ್ಲಿ ಕಾಂಗ್ರೆಸ್ -ಜೆಡಿಎಸ್ ಸರಕಾರ ಅಸ್ತಿತ್ವಕ್ಕೆ ಬಂದಿತ್ತು. ಕುಮಾರಸ್ವಾಮಿ ಮುಖ್ಯಮಂತ್ರಿ ಆಗಿದ್ದರು. ಆನಂತರ ರಾಜಕೀಯ ವಿಪ್ಲವ ಉಂಟಾಗಿ ಕಾಂಗ್ರೆಸ್ಸಿನ ಹದಿನೇಳು ಶಾಸಕರು ಪಕ್ಷಾಂತರ ಮಾಡಿ ರಾಜ್ಯದಲ್ಲಿ ಬಿಜೆಪಿ ಸರಕಾರ ಅಸ್ತಿತ್ವಕ್ಕೆ ಬಂತು. ಕಾಂಗ್ರೆಸ್ ಪ್ರಭಾವಿ ನಾಯಕರೊಬ್ಬರೇ ಹದಿನೇಳು ಶಾಸಕರನ್ನು ಬಿಜೆಪಿಗೆ ಕಳುಹಿಸಿದ್ದು ಅನ್ನುವ ಅನುಮಾನಗಳು ಎದ್ದಿತ್ತು. ಪಕ್ಷಾಂತರ ಮಾಡಿದ ಶಾಸಕರು ಆ ಪ್ರಭಾವಿ ನಾಯಕರೊಬ್ಬರ ಅತ್ಯಾಪ್ತ ಬಳಗದಲ್ಲಿ ಗುರುತಿಸಿಕೊಂಡವರೇ ಆಗಿದ್ದರು. ಆಗಲೂ ಧೃತಿಗೆಡದ ಡಿಕೆಶಿ ಶಾಸಕರನ್ನು ಮರಳಿ ತರಲು ಮುಂಬೈಗೆ ತೆರಳಿ ಹರಸಾಹಸ ಪಟ್ಟಿದ್ದರು. ಪಕ್ಷ ಒಡೆಯುವುದನ್ನು ತಪ್ಪಿಸಲು ಪ್ರಯತ್ನಪಟ್ಟಿದ್ದರು. ಆ ನಂತರ ಬಿಜೆಪಿ ಸರಕಾರದಲ್ಲೂ ಕ್ಲಿಪ್ರ ಕ್ರಾಂತಿ ಎದ್ದು ಎರಡೆರಡು ಮುಖ್ಯಮಂತ್ರಿ ಕಂಡಿತ್ತು. ಅವತ್ತಿನ ದಿನಗಳಲ್ಲಿ ಕಾಂಗ್ರೆಸ್ ಹರಿದು ಹಂಚಿಹೋಗಿತ್ತು. ಕಾಂಗ್ರೆಸ್ಸಿನ ಹದಿನೇಳು ಶಾಸಕರು ಪಕ್ಷ ಬಿಟ್ಟು ಬಿಜೆಪಿ ಸೇರಿದ್ದರು. ಅಂತಹ ಸಂದರ್ಭದಲ್ಲಿ ಪಕ್ಷವನ್ನು ಮರಳಿ ಕಟ್ಟುವುದು ಸುಲಭ ಸಾಧ್ಯವಲ್ಲ. ಯಾರೂ ಕೂಡ ಕೆಪಿಸಿಸಿ ಅಧ್ಯಕ್ಷರಾಗಲು ಮುಂದೆ ಬರದಿದ್ದಾಗ ಡಿಕೆಶಿ ಅಧ್ಯಕ್ಷರಾಗಿ ಪಕ್ಷವನ್ನು ಸಂಘಟಿಸಿದರು. ಪಕ್ಷದಲ್ಲಿ ಕೇಡರ್ ಬೈಸ್ ಸಿಸ್ಟಂ ಅಳವಡಿಸಲು ಪ್ರಯತ್ನಿಸಿದರು. ಕಾರ್ಯಕರ್ತರ ಕೈಗೆ ಪಕ್ಷವನ್ನು ನೀಡಿದರು. ಪರಿಣಾಮ 2023 ರ ಚುನಾವಣೆಯಲ್ಲಿ ಕಾಂಗ್ರೆಸ್ ಅಭೂತಪೂರ್ವ ಗೆಲುವು ಪಡೆಯಿತು. ಈ ಗೆಲುವಿನ ಹಿಂದೆ ಡಿಕೆಶಿ ಕೈ ಚಳಕ ಅದ್ಭುತ ಕೆಲಸ ಮಾಡಿತ್ತು. ಕೆಪಿಸಿಸಿ ಅಧ್ಯಕ್ಷರಾದವರೇ ಮುಖ್ಯಮಂತ್ರಿ ಆಗುವುದು ಕಾಂಗ್ರೆಸ್ ನ ಪರಂಪರೆಯಾಗಿತ್ತು. ಆದರೆ ಡಿಕೆಶಿ ವಿಚಾರದಲ್ಲಿ ಅದು ಉಲ್ಟಾ ಹೊಡೆದಿತ್ತು. ಕೈ ಕಮಾಂಡ್ ಒಪ್ಪಂದದ ದಾರಿ ಹಿಡಿದು ಸಿದ್ದರಾಮಯ್ಯ ರ ಹೆಗಲಿಗೆ ಅಧಿಕಾರದ ಚುಕ್ಕಾಣಿ ನೀಡಿತ್ತು. ಆದರೆ ಇದೀಗ ಒಪ್ಪಂದದಂತೆ ಡಿಕೆಶಿ ಸಿಎಂ ಆಗುವ ಸಮಯ ಹತ್ತಿರಕ್ಕೆ ಬರುತ್ತಿದ್ದಂತೆ ಸಿದ್ದರಾಮಯ್ಯ ಬಣದ ಕೆಲವರು ಡಿಕೆಶಿ ವಿರುದ್ಧ ಕೆಂಡಕಾರುತ್ತಿದ್ದು, ಕೆಪಿಸಿಸಿ ಹುದ್ದೆ ತ್ಯಜಿಸುವಂತೆ ಬಹಿರಂಗವಾಗಿ ಹೇಳಿಕೆ ನೀಡತೊಡಗಿದ್ದಾರೆ. ಪಕ್ಷ ಕಷ್ಟದ ಸಮಯದಲ್ಲಿ ಮುನ್ನೆಡಿಸಿದ ಡಿಕೆಶಿ ಯನ್ನು ಪಕ್ಷ ಕಟ್ಟಲು ಸಾಮರ್ಥ್ಯವಿಲ್ಲದ ಕೆಲವು ಭಟ್ಟಂಗಿಗಳು ಹರಿಹಾಯುತ್ತಿದ್ದಾರೆ. ಡಿಕೆಶಿ ಈವರೆಗೂ ಪಕ್ಷ ನಿಷ್ಠೆಯಿಂದ ಪಕ್ಷಕ್ಕೆ ಆಪದ್ಭಾಂಧವರಾದವರು. ಅವರು ನೀಡಿದ ಕೊಡುಗೆಗೆ ಯಾವತ್ತೊ ಮುಖ್ಯಮಂತ್ರಿ ಆಗಬೇಕಿತ್ತು. ಬಿಜೆಪಿಯಲ್ಲಿ ನಾ(ಲಾ)ಯಕರು ಮುಖ್ಯಮಂತ್ರಿಯಾಗುತ್ತಿದ್ದರೆ ಪಕ್ಷಕ್ಕಾಗಿ ಅಹರ್ನಿಶಿ ದುಡಿದ ಡಿಕೆಶಿ ಗೆ ಆ ಭಾಗ್ಯ ಸಿಗದೇ ಇರುವುದು, ಸಿಗುವ ಹೊತ್ತಿನಲ್ಲೇ ಪಕ್ಷದವರೇ ಅಡ್ಡಗಾಲು ಹಾಕುತ್ತಿರುವುದು ಈ ಎಲ್ಲದರ ಪರಿಣಾಮ ಜಗ್ಗಿ ವಾಸುದೇವ್ ಕಾರ್ಯಕ್ರಮದಲ್ಲಿ ಡಿಕೆಶಿ ಭಾಗಿಯಾಗಿರುವುದು ಪ್ರತಿಫಲಿಸುತ್ತಿದೆ. ಆ ಮೂಲಕ ಕಾಂಗ್ರೆಸ್ ಹೈಕಮಾಂಡ್ ಗೆ ಸ್ಪಷ್ಟ ಸಂದೇಶ ರವಾನಿಸಿದ್ದಾರೆ.

ದೇಶದಾದ್ಯಂತ ಕಾಂಗ್ರೆಸ್ ಅವನತಿಯತ್ತ ಸಾಗುತ್ತಿದೆ. ಕಾಂಗ್ರೆಸ್ ಹೈಕಮಾಂಡ್ ನಲ್ಲಿ ಸ್ಥಾನ ಭದ್ರಪಡಿಸಿಕೊಂಡಿರುವ ಕೆಲವು ಚೇಲಾಗಳಿಗೆ ಒಂದು ಹತ್ತು ಓಟು ಪಡೆಯುವ ಕೆಫಾಸಿಟಿ ಇಲ್ಲ. ಅಂತಹವರೆಲ್ಲ ಪಕ್ಷದ ಆಯಕಟ್ಟಿನ ಜಾಗದಲ್ಲಿ ಕೂತಿದ್ದಾರೆ. ಪಕ್ಷಕ್ಕಾಗಿ ಸಮರ್ಥ ಸೇವೆ ಸಲ್ಲಿಸಿದವರನ್ನು ಕಡೆಗಣಿಸುತ್ತಿದ್ದಾರೆ. ದೇಶದಲ್ಲಿ ಆಪರೇಷನ್ ಕಮಲ ನಡೆದಾಗ ಅದನ್ನು ಮಟ್ಟ ಹಾಕಲು ಹೈಕಮಾಂಡ್ ಗೆ ನೆನಪಾಗುವುದು ಡಿಕೆಶಿ. ತನಗೆ ಕೊಟ್ಟ ಕೆಲಸವನ್ನು ಅತ್ಯಂತ ಚಾಣಾಕ್ಷತೆಯಿಂದ ನಿಭಾಯಿಸಿದ್ದಾರೆ. ಅಮಿತ್ ಷಾ, ಮೋದಿಯಂತೆ ವ್ಯಾವಹಾರಿಕ ರಾಜಕಾರಣ ಮೈಗೂಡಿಸಿಕೊಂಡವರು ಡಿಕೆಶಿ. ಇಂತಹ ಡಿಕೆಶಿ ಗೆ ಅಧಿಕಾರದ ಚುಕ್ಕಾಣಿ ಕೊಟ್ಟು ಕೈ ಕಮಾಂಡ್ ಕೃತಜ್ಞತೆ ಸಲ್ಲಿಸಬೇಕಿತ್ತು. ಇನ್ಯಾರೋ ಭಟ್ಟಂಗಿಗಳ ಮಾತಿಗೆ ಮರುಳಾಗಿ ಡಿಕೆಶಿ ಹಣಿಯಲು ಕೈ ಕಮಾಂಡ್ ಮುಂದಾಗುತ್ತಿದೆ. ಮಮತಾ ಬ್ಯಾನರ್ಜಿ, ಶರದ್ ಪವಾರ್ ಸೇರಿದಂತೆ ಹಲವಾರು ಘಟಾನುಘಟಿಗಳು ಕಾಂಗ್ರೆಸ್ ಹೈಕಮಾಂಡ್ ಗೆ ಬೇಸತ್ತು ಪಕ್ಷ ತೊರೆದು ಬಂದವರು. ಇಂತಹ ನಾಯಕರನ್ನು ಕಳೆದುಕೊಂಡ ನಂತರ ಅಲ್ಲಿ ಕಾಂಗ್ರೆಸ್ ಎದ್ದೇಳಲೇ ಇಲ್ಲ. ಡಿಕೆಶಿ ಕೂಡ ಮಾಸ್ ಲೀಡರ್. ಇಂತಹ ನಾಯಕನನ್ನು ಪಕ್ಷ ಕಳೆದುಕೊಂಡರೆ ಕರ್ನಾಟಕದಲ್ಲಿ ಕಾಂಗ್ರೆಸ್ ಯುಗ ಮುಗಿದಂತೆ. ಕಾಂಗ್ರೆಸ್ ಮುಕ್ತ ಭಾರತ ಆದಂತೆ.

ಡಿಕೆಶಿ ಕಾಂಗ್ರೆಸ್ ನ ಬೇರೆ ರಾಜಕಾರಣಿಗಿಂತ ಹೆಚ್ಚಾಗಿ ಧಾರ್ಮಿಕ ನಂಬಿಕೆ ಹೊಂದಿದವರು. ಅದನ್ನು ಪ್ರಶ್ನೆ ಮಾಡುವಂತಿಲ್ಲ. ಅದು ಅವರವರ ನಂಬಿಕೆ. ಕುಂಭಮೇಳದಲ್ಲಿ ಮಿಂದೆದ್ದು ಬಂದಿದ್ದಾರೆ. ಜಗ್ಗಿ ವಾಸುದೇವ್ ಅವರ ಮಹಾ ಶಿವರಾತ್ರಿ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದಾರೆ. ಜಗ್ಗಿ ವಾಸುದೇವ್ ಆರ್ ಎಸ್ ಎಸ್ ಹಿನ್ನೆಲೆಯ ಸದ್ಗುರು ಅನ್ನುವುದು ಡಿಕೆಶಿ ವಿರುದ್ಧ ನಡೆಯುತ್ತಿರುವ ಆರೋಪಗಳಿಗೆ ಸಾಕ್ಷಿ. ಆದರೆ ಇಂತಹವರ ಕಾರ್ಯಕ್ರಮದಲ್ಲಿ ಭಾಗವಹಿಸಿದರಷ್ಟೇ ಸ್ಟ್ರಾಂಗ್ ಮೆಸೇಜ್ ರವಾನೆಯಾಗಬಹುದು ಅನ್ನುವುದು ಡಿಕೆಶಿ ಅವರ ಮನದಾಳವಾಗಿರಬಹುದು. ಈ ನಡುವೆಯೇ ಮಹಾರಾಷ್ಟ್ರದಲ್ಲಿ ಏಕನಾಥ ಶಿಂಧೆ ಮುಖ್ಯಮಂತ್ರಿ ಆದಂತೆ ಇಲ್ಲಿ ಬಿಜೆಪಿ -ಜೆಡಿಎಸ್- ಕಾಂಗ್ರೆಸ್ ಬಣದ ಶಾಸಕರಿಂದ ಡಿಕೆಶಿ ಮುಖ್ಯಮಂತ್ರಿ ಆಗಲಿದ್ದಾರೆ ಅನ್ನುವ ಮಾತುಗಳು ಹರಿದಾಡುತ್ತಿದೆ. ರಾಜಕಾರಣದಲ್ಲಿ ಏನೆಲ್ಲಾ ಆಗಬಹುದು ಅನ್ನುವುದನ್ನು ಸುಲಭವಾಗಿ ನಿರ್ಧರಿಸಲು ಸಾಧ್ಯವಿಲ್ಲ. ಇಲ್ಲಿ ಶತ್ರುವಿನ ಶತ್ರು ಮಿತ್ರನಾಗಿರುತ್ತಾನೆ. ಒಂದಂತೂ ಸ್ಪಷ್ಟ. ಡಿಕೆಶಿ ಕೈ ಕಮಾಂಡ್ ಗೆ ಸ್ಟ್ರಾಂಗ್ ಮೆಸೇಜ್ ರವಾನಿಸಿದ್ದಾರೆ. ಡಿಕೆಶಿ ತಂತ್ರಕ್ಕೆ ಕಾಂಗ್ರೆಸ್ ಹೈಕಮಾಂಡ್ ಸುಸ್ತಾಗಿ ಬಿಟ್ಟಿದೆ.
