ತುಳುನಾಡಿನ ಜೀವನದಿ ಪಲ್ಗುಣಿಗೆ ಒಂದು ಕಡೆಯಿಂದ mrpl ಸಹಿತ ಕೈಗಾರಿಕೆಗಳು ಮಾರಕವಾದ ಕೈಗಾರಿಕಾ ತ್ಯಾಜ್ಯವನ್ನು ನೇರವಾಗಿ ಹರಿಸುತ್ತಿದ್ದರೆ, ಮತ್ತೊಂದೆಡೆ ಮರಳು ಮಾಫಿಯ ನದಿಯ ಉದ್ದಕ್ಕೂ ಹಗಲು ರಾತ್ರಿ ಕನ್ನ ಹಾಕಿ ದೋಚುತ್ತಿವೆ. ಮರವೂರು, ಅದ್ಯಪಾಡಿ, ಮಳಲಿ, ಅಡ್ಡೂರು, ಮಲ್ಲೂರು… ಹೀಗೆ ನದಿಯ ಉದ್ದಕ್ಕೂ ಅಕ್ರಮ ಮರಳುಗಾರಿಕೆ ಎಗ್ಗಿಲ್ಲದೆ ಸಾಗಿದೆ. ಜಿಲ್ಲಾಡಳಿತ ಮರಳು ಸಾಗಾಟದ ಕುಖ್ಯಾತ ಜಂಕ್ಷನ್ ಗಳಲ್ಲಿ ಹಾಕಿರುವ ಸಿ ಸಿ ಕೆಮೆರಾಗಳು ಸಹ “ಕಣ್ಣುಮುಚ್ಚಿವೆ” ಅಕ್ರಮ ಮರಳು ಸಾಗಾಟದ ಟಿಪ್ಪರ್ ಗಳ ನಂಬರ್ ಪ್ಲೇಟ್ ಗಳಿಗೆ ಕೆಸರು ಬಳಿದು ಸಾಗಾಟ ಮಾಡಲಾಗುತ್ತಿದೆ. ಮರಳು ಸಾಗಾಟಕ್ಕೆ ಕುಖ್ಯಾತವಾದ ಪ್ರದೇಶಗಳ ವ್ಯಾಪ್ತಿಯ ಬಜ್ಪೆ ಪೊಲೀಸ್ ಠಾಣೆಯವರಿಗೆ ಮಾಮೂಲಿ ಎಣಿಸುಕೊಳ್ಳಲು ಸಮಯ ಸಾಲದಷ್ಟು ಬಿಜಿ ಅಂತೆ. ಪಲ್ಗುಣಿಯ ನಾಶಕ್ಕೆ ಇಷ್ಟೆಲ್ಲಾ ವಿನಾಶಕಾರಿ ಅಕ್ರಮಗಳು ನಡೆಯುತ್ತಿದ್ದರೂ ದಕ್ಷಿಣ ಕನ್ನಡ ಜಿಲ್ಲೆಯ ಜಿಲ್ಲಾಧಿಕಾರಿ ಒಂದು ಶಬ್ದ ಮಾತಾಡುತ್ತಿಲ್ಲ, ಅನುಹುತ ನಡೆಯುತ್ತಿರುವ ಪ್ರದೇಶಗಳ ಪರಿಶೀಲನೆ ನಡೆಸುತ್ತಿಲ್ಲ.
ಇನ್ನು ಸಂಸ್ಕೃತಿ ರಕ್ಷಕರು, ಧರ್ಮ ರಕ್ಷಕರು ಎಲ್ಲಿದ್ದಾರೆ ಎಂದು ಕೇಳುತ್ತೀರಾ ? ಸರಕಾರ ಬದಲಾಗಿದ್ದರೂ ಅಕ್ರಮ ಮರಳು ಸಾಗಾಟದಲ್ಲಿ ಅವರದ್ದು ಸಿಂಹಪಾಲು, mrpl ಸಹಿತ ವಿನಾಶಕಾರಿ ಕೈಗಾರಿಕೆಗಳ ಉಪಗುತ್ತಿಗೆ, ವಾಹನಗಳ ಗುತ್ತಿಗೆ, ಮೆಟೀರಿಯಲ್ ಸಪ್ಲಾಯ್ ಏಜನ್ಸಿಗಳಲ್ಲಿ ಕಾಣಸಿಗುವ ಬಹುತೇಕ ಮುಖಗಳು ಇವರದ್ದೇ…
