ಮಂಗಳೂರು: ಪೀಪಲ್ಸ್ ಯೂನಿಯನ್ ಫಾರ್ ಸಿವಿಲ್ ಲಿಬರ್ಟೀಸ್ ದ.ಕನ್ನಡ. ಇದರ ತಾತ್ಕಾಲಿಕ ಆಡಳಿತ ಸಮಿತಿಗೆ ಟಿ.ಆರ್ ಭಟ್ ರವರನ್ನು ಸಂಚಾಲಕರಾಗಿ ಹಾಗೂ ಜೋಷಿ ಸತ್ಯಾನಂದ ಜಿ., ಕಾಲಿನ್ ಡಿಸಿಲ್ವ ಮತ್ತು ಮೊಹಮ್ಮದ್ ಹನೀಫ್.ಯು ಹಾಗೂ ಕಿಶೋರ್ ಅತ್ತಾವರ, ಇವರುಗಳನ್ನು ಸದಸ್ಯರನ್ನಾಗಿ ಸರ್ವಾನುಮತದಿಂದ ನೇಮಕಗೊಳಿಸಲಾಯಿತು.
2024 ರ ಮಾರ್ಚ್ 8 ಮತ್ತು 9 ರಂದು ಮಂಗಳೂರಿನ ರೋಶನೀ ನಿಲಯದಲ್ಲಿ ನಡೆದ ಎರಡು ದಿನಗಳ ಸಭೆಯಲ್ಲಿ ದ.ಕ ಜಿಲ್ಲೆಯ ಪಿಯುಸಿಎಲ್ ಘಟಕದ ಆಗು-ಹೋಗುಗಳ ಬಗ್ಗೆ ಪರಿಶೀಲನೆ ನಡೆಸಿದ, ರಾಷ್ಟ್ರೀಯ ಪಿಯುಸಿಎಲ್ ಇದರ ಮಹಾ ಪ್ರದಾನ ಕಾರ್ಯದರ್ಶಿಗಳಾದ ಡಾ.ವಿ.ಸುರೇಶ್, ರಾಷ್ಟ್ರೀಯ ಪ್ರದಾನ ಕಾರ್ಯದರ್ಶಿ ಎಸ್. ಬಾಲಮುರುಗನ್, ಕರ್ನಾಟಕ ರಾಜ್ಯ ಪಿಯುಸಿಎಲ್ ಇದರ ಅದ್ಯಕ್ಷರಾದ ಅರವಿಂದ ನರೈನ್, ರಾಜ್ಯಪ್ರದಾನ ಕಾರ್ಯದರ್ಶಿ ಸುಜಾಯಾತುಲ್ಲಾ ಕೆ. ಇವರ ತಂಡ ಜಿಲ್ಲೆಯ ಪಿಯುಸಿಎಲ್ ನ ಸದಸ್ಯರೊಂದಿಗೆ ಸಮಾಲೋಚನೆ ನಡೆಸಿ, ಸಮಸ್ಯೆಗಳನ್ನು ಬಗೆಹರಿಸುವ ಭರವಸೆ ನೀಡಿ, ದ.ಕ ಜಿಲ್ಲಾ ಪಿಯುಸಿಎಲ್ ಘಟಕಕ್ಕೆ ತಾತ್ಕಾಲಿಕ ಸಮಿತಿಯ ಸದಸ್ಯರನ್ನಾಗಿ ಮೇಲಿನ ಐದು ಮಂದಿಯನ್ನು ನೇಮಕಗೊಳಿಸಿರುತ್ತಾರೆ.

ದ.ಕ.ಜಿಲ್ಲೆಯ ಪಿಯುಸಿಎಲ್ ಘಟಕವನ್ನೇ ಈ ಹಿಂದೆ ಬರ್ಖಾಸುಗೊಳಿಸಿದ ಕಾರಣ, ಕಳೆದ 4-5 ವರ್ಷಗಳಿಂದ ಜಿಲ್ಲೆಯಲ್ಲಿ ಪಿಯುಸಿಎಲ್ ಕಾರ್ಯಚಟುವಟಿಕೆ ಸ್ಥಗಿತವಾಗಿತ್ತು. ಪ್ರಸ್ತುತ ತಾತ್ಕಾಲಿಕ ಆಡಳಿತ ಸಮಿತಿ ನೇಮಕವಾಗುವುದರೊಂದಿಗೆ ಜಿಲ್ಲೆಯಲ್ಲಿ ಪಿ.ಯು.ಸಿ.ಎಲ್ ಇದರ ಕಾರ್ಯಚಟುವಟಿಕೆ ಮುಂದುವರಿಯಲಿದೆ. ರಾಷ್ಟ್ರೀಯ ಸಮಿತಿ ನೇತ್ರತ್ವದಲ್ಲಿ ರೋಶನೀ ನಿಲಯದಲ್ಲಿ ನಡೆದ ಸಭೆಯಲ್ಲಿ ಜಿಲ್ಲೆಯ ಸರಿ-ಸುಮಾರು ಮೂವತ್ತಕ್ಕೂ ಮಿಕ್ಕ ಪಿಯುಸಿಎಲ್ ಇದರ ಸದಸ್ಯರು ಭಾಗಿಯಾಗಿದ್ದರು.
