ಉಡುಪಿ ಚಿಕ್ಕಮಗಳೂರು ಬಿಜೆಪಿ ಅಭ್ಯರ್ಥಿಯಾಗಿ ಸಜ್ಜನ ಮುಖವಾಡದ “ಜೀ ಹುಜೂರ್” ಸಂಸ್ಕೃತಿಯ ಕೋಟಾ ಶ್ರೀನಿವಾಸ ಪೂಜಾರಿ ಆಯ್ಕೆಯಾಗಿದ್ದಾರೆ. ಬಿಜೆಪಿ ಆಡಳಿತದ ವಿರುದ್ದ ಇರುವ ಜನಾಕ್ರೋಶವನ್ನು ಕೋಟಾ ಎಂಬ “ಸರಳ, ಸಜ್ಜನ” ಎಂಬ ಮುಖವಾಡದ ಮೂಲಕ ನಿಭಾಯಿಸಲು ಬಿಜೆಪಿ ಪರಿವಾರ ಯತ್ನಿಸುತ್ತಿದೆ.
ಈ ಕೋಟಾ ಶ್ರೀನಿವಾಸ ಪೂಜಾರಿ ದಕ್ಷಿಣ ಕನ್ನಡ ಜಿಲ್ಲಾ ಉಸ್ತುವಾರಿ ಸಚಿವರಾಗಿದ್ದಾಗ ಅವರ ಕಾರ್ಯವೈಖರಿ ಹತ್ತಿರದಿಂದ ಕಂಡಿದ್ದೇವೆ. (ಉಡುಪಿಯ ಎಲ್ಲಾ MLA ಗಳು ಒಂದಾಗಿ ಕೋಟಾರನ್ನು ಉಡುಪಿ ಉಸ್ತುವಾರಿ ಸಚಿವ ಮಾಡಬಾರದು ಎಂದು ಹಠ ಹಿಡಿದಾಗ ಸ್ವಾಭಿಮಾನವೇ ಇಲ್ಲದಂತೆ ಇವರು ಮಂಗಳೂರಿನ ಉಸ್ತುವಾರಿ ಒಪ್ಪಿಕೊಂಡಿದ್ದರು)
MRPL ವಿರುದ್ದದ ನಮ್ಮ (ಸ್ಥಳೀಯ ಗ್ರಾಮಸ್ಥರ) ಹೋರಾಟದ ಭಾಗವಾಗಿ ರಾಜ್ಯ ಸರಕಾರ ರಚಿಸಿದ್ದ ಜಿಲ್ಲಾಧಿಕಾರಿ ಅಧ್ಯಕ್ಷತೆಯ ಸಮಿತಿ ಒಮ್ಮೆ ಉಸ್ತುವಾರಿ ಸಚಿವ ಕೋಟಾ ಶ್ರೀನಿವಾಸ ಪೂಜಾರಿಗಳ ಉಪಸ್ಥಿತಿಯಲ್ಲಿ ಸಭೆ ಸೇರಿತ್ತು. ನಾನು ಸಹಿತ ಕೆಲವು ಮುಖಂಡರು ಗ್ರಾಮಸ್ಥರನ್ನು/ಹೋರಾಟ ಸಮಿತಿಯನ್ನು ಪ್ರತಿನಿಧಿಸಿ ಸಭೆಯಲ್ಲಿದ್ದೆವು. ಬಹಳ ಪ್ರಧಾನವಾಗಿ ರಾಜ್ಯ ಸರಕಾರ ಅಧಿಸೂಚನೆ ಹೊರಡಿಸಿ ಆದೇಶಿಸಿದ್ದ 27 ಎಕರೆ ಹಸಿರು ವಲಯವನ್ನು (ಜನವಸತಿ ಹಾಗೂ ಕಂಪೆನಿಯ ನಡುವೆ, ಕೋಕ್ ಸಲ್ಪರ್ ಹಾರು ಬೂದಿ ಹಾರದಂತೆ ತಡೆಯಲು) ಕಂಪನಿ ರಚಿಸದೆ ಕಾಲಹರಣ ಮಾಡುತ್ತಿರುವುದು ಅಂದಿನ ಸಭೆಯ ಪ್ರಧಾನ ಅಜೆಂಡಾ ಆಗಿತ್ತು.

ಹೋರಾಟ ಸಮಿತಿಯು ಗ್ರಾಮಸ್ಥರ ಸರ್ವಾನುಮತದಿಂದ ಗುರುತು ಮಾಡಿರುವ 27 ಎಕರೆ ಜಮೀನಿನಲ್ಲಿ ಹಸಿರು ವಲಯ ನಿರ್ಮಿಸುವುದು, ಜಮೀನು ಕಳೆದುಕೊಂಡು ನಿರ್ವಸಿತರಾಗುವ ಗ್ರಾಮಸ್ಥರಿಗೆ ಪುನರ್ವಸತಿ ಕಲ್ಪಿಸುವುದನ್ನು ಮುಂದೂಡಲು ಕಂಪೆನಿಗೆ ಯಾವುದೆ ದಾರಿ ಇರಲಿಲ್ಲ. ನಾವು (ಹೋರಾಟ ಸಮಿತಿ) ಸಹ MRPLಗೆ ಅತಿ ಅಗತ್ಯವಾಗಿದ್ದ ರಸ್ತೆಯ ಕಾಮಗಾರಿಯೊಂದನ್ನು ಹಸಿರು ವಲಯ ನಿರ್ಮಾಣದ ನಂತರವೆ ನಿರ್ಮಿಸಲು ಅವಕಾಶ ಕೊಡುತ್ತೇವೆ ಎಂದು ನಾಲ್ಕೈದು ವರ್ಷಗಳಿಂದ ಎಲ್ಲಾ ಒತ್ತಡಗಳನ್ನು ಮೆಟ್ಟಿ ನಿಂತು ತಡೆ ಹಿಡಿದು ಕಂಪೆನಿಯನ್ನು ಇಕ್ಕಟ್ಟಿನಲ್ಲಿ ಇಟ್ಟಿದ್ದೆವು.
ಇಂತಹ ಸಂದರ್ಭದಲ್ಲಿ ಏರ್ಪಾಡಾದ ಜಿಲ್ಲಾಧಿಕಾರಿ ಅಧ್ಯಕ್ಷತೆಯ ಸಮಿತಿ ಸಭೆಯು ಉಸ್ತುವಾರಿ ಸಚಿವ ಕೋಟಾ ಉಪಸ್ಥಿತಿಯಲ್ಲಿ ನಡೆಯುತ್ತಿರುವುದರಿಂದ ನಾವೆಲ್ಲ ಫುಲ್ ಖುಷಿಯಾಗಿದ್ದೆವು. “ಜನಪರ” ಎಂದು ಕೆಲವರಿಂದ ಬಣ್ಣಿಸಲ್ಪಟ್ಟಿದ್ದ ಸಚಿವರು ಖುದ್ದು ಉಪಸ್ಥಿತರಿರುವುದರಿಂದ ಈ ಸಭೆಯಲ್ಲೆ ಹಸಿರು ವಲಯದ ಪ್ರಶ್ನೆ ಇತ್ಯರ್ಥ ಆಗಿಬಿಡುತ್ತದೆ ಎಂಬ ಆಶಾ ಭಾವನೆ ನಮ್ಮದಾಗಿತ್ತು.
ನಮ್ಮೆಲ್ಲರ ವಾದಗಳಿಗೆ ಸಚಿವ ಶ್ರೀನಿವಾಸ ಪೂಜಾರಿಗಳು ತಲೆ ಆಲ್ಲಾಡಿಸುತ್ತಾ, ಕಂಪೆನಿಯ ಅಧಿಕಾರಿಗಳೆ ಚಾಟಿ ಬೀಸುತ್ತಾ ಆಹ್ಲಾದಕರ ವಾತಾವರಣವನ್ನೆ ಸೃಷ್ಟಿ ಮಾಡಿದ್ಧರು. ಸಭೆಯ ಕೊನೆಗೆ “ಹಸಿರು ವಲಯದ ಜಮೀನು ಸಂತ್ರಸ್ತರಿಗೆ ಪುನರ್ವಸತಿ ಪ್ಯಾಕೇಜ್ ಸಿದ್ದಪಡಿಸಲು ಒಂದಿಷ್ಟು ಕಾಲಾವಕಾಶ ಕೊಡಿ, ಅತ್ಯಂತ ಅಗತ್ಯವಾದ ರಸ್ತೆ ನಿರ್ಮಾಣಕ್ಕೆ ದೇಶದ ಹಿತದೃಷ್ಟಿಯಿಂದ ಅವಕಾಶ ಮಾಡಿಕೊಡಿ” ಎಂದು mrpl ಅಧಿಕಾರಿಗಳು ತಮ್ಮ ಹಳೆಯ ರಾಗವನ್ನೇ ಪುನರುಚ್ಚಿಸಿದರು. ನಾವು ಕಂಪೆನಿಯ ವಿರುದ್ದ ತಿರುಗಿ ಬಿದ್ದೆವು.

ಆಗ ಎದ್ದು ನಿಂತ ಕೋಟಾ… ಕೈಮುಗಿದು “ಕಂಪೆನಿ ಹಸಿರು ವಲಯ ನಿರ್ಮಾಣದ ಆದೇಶ ಪಾಲನೆ ಮಾಡುವಂತೆ ತಕ್ಷಣವೆ ಕ್ರಮ ಜರುಗಿಸುವುದು ನನ್ನ ಜವಾಬ್ದಾರಿ, ಕಂಪೆನಿಗೆ ರಸ್ತೆ ನಿರ್ಮಾಣಕ್ಕೆ ಅವಕಾಶ ಮಾಡಿಕೊಡಿ. ದಯವಿಟ್ಟು ಇಲ್ಲ ಅನ್ನಬೇಡಿ. ಈ ಭಾರಿ ಮಾತು ತಪ್ಪಲು ಕಂಪೆನಿಗೆ ಸಾಧ್ಯವಿಲ್ಲ, ನಾನು ಮಾತುಕೊಡುತ್ತಿದ್ದೇನೆ, ಆದೇಶ ಜಾರಿಯಾಗದಿದ್ದರೆ ನಾನೇ ಹೊಣೆ” ಎಂದು “ಸಜ್ಜನಿಕೆ” ಯ ಡೈಲಾಗ್ ಹೊಡೆದರು. ದೊಡ್ಡ ಸಭೆ, ಜಿಲ್ಲಾಧಿಕಾರಿಗಳು, ಪೊಲೀಸ್ ಕಮೀಷನರ್, ಡಿಸಿಪಿ, ಎಸಿಪಿಗಳು, ಜಿಲ್ಲಾಪಂಚಾಯತ್ ಸಿಇಓ ಸಹಿತ ಘಟಾನುಘಟಿ ಅಧಿಕಾರಿಗಳು ಎಲ್ಲಾ ಇರುವ ಅಧಿಕೃತ ಸಭೆ. ಮಾತಾಡುವ ಪ್ರತಿಯೊಂದು ಶಬ್ದವೂ ದಾಖಲೆಗೆ ಬೇರೆ ಸೇರುತ್ತದೆ. ಅವರ ಸಮ್ಮುಖ “ಸಜ್ಜನ” ಸಚಿವರು “ನಾನು ಜವಾಬ್ದಾರಿ” ಎಂದು ಕೈಮುಗಿದು ನಿಂತಿದ್ದಾರೆ.
ನಾನು ಸಹಿತ ಕೆಲವರಿಗೆ ಅಧಿಕಾರಸ್ಥ ರಾಜಕಾರಣಿಗಳ ಆಟಗಳ ಅರಿವಿದ್ದರೂ ಅಸಹಾಯಕರಾದೆವು. ಉಪಸ್ಥಿತರಿದ್ದ ಬೇರೆ ಕೆಲವು ಪ್ರತಿನಿಧಿಗಳು ಸಚಿವರು ಕೈಮುಗಿದು ಆಡಿದ ಮಾತಿಗೆ ಕರಗಿ ಹೋಗಿದ್ದರು. ಹಾಗೆ mrpl ನ ತಡೆಹಿಡಿದಿದ್ದ ರಸ್ತೆಕಾಮಗಾರಿಗೆ ಗ್ರಾಮಸ್ಥರು ಅವಕಾಶ ಕೊಡುವುದು, ಕಂಪೆನಿ ತಕ್ಷಣವೇ ಪುನರ್ವಸತಿ ಪ್ಯಾಕೇಜ್ ಸಿದ್ದಪಡಿಸುವುದು ಎಂದು ತೀರ್ಮಾನ ಸಭೆಯಲ್ಲಿ ಆಯ್ತು.
ಮುಂದಿನ ಒಂದೆರಡು ದಿನದಲ್ಲೆ ವರ್ಷಗಳಿಂದ ಸಂಘರ್ಷಭರಿತ ಹೋರಾಟದೀದ ಜನತೆ ತಡೆ ಹಿಡಿದಿದ್ದ mrpl ನ ರಸ್ತೆ ಕಾಮಗಾರಿ ಆರಂಭ ಆಯ್ತು. ಸರಕಾರದ ಗಜೆಟ್ ನೋಟಿಫಿಕೇಷನ್ ನಲ್ಲಿ ಸೇರಿರುವ ಹಸಿರು ವಲಯ ನಿರ್ಮಾಣದ ಆದೇಶ ಮಾತ್ರ ಇಂದಿಗೂ ಜಾರಿಯಾಗಿಲ್ಲ. ಜನತೆ ಕೋಕ್ ಸಲ್ಪರ್ ಹಾರು ಬೂದಿಯ ವಿಷ ಸೇವಿಸುತ್ತಾ, ಕೋಟಾ ಶ್ರೀನಿವಾಸ ಪೂಜಾರಿಗಳ ಮಾತು ನಂಬಿ ಬಿಟ್ಟು ಕೊಟ್ಟ ರಸ್ತೆಯಲ್ಲಿ ಕಂಪೆನಿಯ ಕೋಕ್ ಸಲ್ಪರ್ ಟ್ರಕ್ ಗಳು ಸಾವಿರ ಸಂಖ್ಯೆಯಲ್ಲಿ ಓಡಾಡುವುದನ್ನು ಹತಾಶರಾಗಿ ನೋಡಾತ್ತಾ ಬಾಕಿಯಾಗಿದ್ದಾರೆ.
ಅಂತಹ ಕೋಟಾ… ಮತ್ತೆ ಕೆಲವೇ ತಿಂಗಳಲ್ಲಿ ಗ್ರಾಮ ಪಂಚಾಯತ್ ಚುನಾವಣೆಯ ಮತ ಬೇಟೆಗೆ ಜೋಕಟ್ಟೆಗೆ ಬಂದರು. ಅಲ್ಲೊಬ್ಬ ಅಬೂಬಕ್ಕರ್ ಬಾವಾ ಎಂಬ ಪಂಚಾಯತ್ ಸದಸ್ಯರಿದ್ದಾರೆ. ಶಾಲೆಯ ಮೆಟ್ಟಿಲು ಹತ್ತದಿದ್ದರೂ, mrpl ನ ಮಾಲಿನ್ಯದ ವಿರುದ್ದದ ಹೋರಾಟದ ಪ್ರಧಾನ ಶಕ್ತಿಯೇ ಅಬೂಬಕ್ಕರ್ ಬಾವ. Mrpl ವಿರುದ್ದದ ಪ್ರಾಮಾಣಿಕ ಹೋರಾಟದಿಂದಲೆ ನಾಯಕರಾಗಿ ಬೆಳೆದ ಬಾವಾ ಪಂಚಾಯತ್ ಚುನಾವಣೆಯಲ್ಲಿ ಎಲ್ಲಾ ಧರ್ಮೀಯರ ಮತ ಪಡೆದು ಗೆಲುವು ಸಾಧಿಸಿದ್ದರು, ಅವರು ಮತ್ತೊಂದು ಅವಧಿಗೆ ಹೋರಾಟ ಸಮಿತಿಯ ಭಾಗವಾಗಿ ಸ್ಪರ್ಧಿಸಿದ್ದರು.
ಅಬೂಬಕ್ಕರ್ ಬಾವಾ ಸೋಲುವುದು ಕಂಪೆನಿಗೆ ಅನಿವಾರ್ಯ ಆಗಿತ್ತು. ಪ್ರತಿನಿತ್ಯ ಮಾಲಿನ್ಯ ಬಯಲಿಗೆಳೆಯುತ್ತಾ, ಜನರನ್ನು ಸಂಘಟಿಸುತ್ತಾ ಇರುವ ಅವರು ಸೋಲುವುದು ಕಂಪೆನಿಯ ಪಾಲಿಗೆ ಬಹುಮುಖ್ಯ ಆಗಿತ್ತು. ಅಂತಹ ಅಬೂಬಕ್ಕರ್ ಬಾವರನ್ನು ಸೋಲಿಸಲು (ಅದೂ ಯಕಶ್ಚಿತ್ ಗ್ರಾಮಪಂಚಾಯತ್ ಚುನಾವಣೆಯಲ್ಲಿ) ದೂರದ ಉಡುಪಿಯಿಂದ ಜೋಕಟ್ಟೆಯ ಮೂಲೆಯಲ್ಲಿರುವ ವಾರ್ಡ್ ಗೆ ಸಚಿವ ಶ್ರೀನಿವಾಸ್ ಪೂಜಾರಿ ಆಗಮಿಸಿ ಮನೆ ಮನೆಗೆ ತೆರಳಿದರು. ಅಲ್ಲಿರುವ ತನ್ನ ಸ್ವಜಾತಿ ಬಾಂಧವರಲ್ಲಿ ಅಬೂಬಕ್ಕರ್ ವಿರುದ್ದ ಇದ್ದ ಸ್ವಜಾತಿ ಅಭ್ಯರ್ಥಿಗೆ ಮತ ಯಾಚಿಸಿದರು. (ಜನ ಸಚಿವರ ಮಾತಿಗೆ ಸೊಪ್ಪು ಹಾಕಲಿಲ್ಲ, ಅಬೂಬಕ್ಕರ್ ಬಾವಾ ಮತ್ತಷ್ಟು ದೊಡ್ಡ ಅಂತರದಿಂದ ಗೆದ್ದರು. ಈಗಲೂ ಕಂಪೆನಿಯ ಅಕ್ರಮಗಳ ವಿರುದ್ದ ಗಟ್ಟಿ ಧ್ವನಿಯಲ್ಲಿ ಹೋರಾಟ ನಡೆಸುತ್ತಿದ್ದಾರೆ.)

ಇದು ಕೋಟಾ ಶ್ರೀನಿವಾಸ ಪೂಜಾರಿಗಳ ಸರಳತೆ, ಸಜ್ಜನಿಕೆಯ ಮುಖವಾಡದ ಹಿಂದಿರುವ ನೈಜ ಮುಖ. ಕೊರೋನಾ ಕಾಲದಲ್ಲಂತೂ ಇದೇ ಸಚಿವರು ಖಾಸಗಿ ಆಸ್ಪತ್ರೆಗಳ ಲೂಟಿಗೆ ದೊಡ್ಡ ರಕ್ಷಕರಾಗಿದ್ದರು. “ಮಂಗಳೂರಿನ ಎಲ್ಲಾ ಖಾಸಗಿ ಆಸ್ಪತ್ರೆಗಳಲ್ಲಿ ಕೊರೋನಾ ಪೀಡಿತರಿಗೆ ಉಚಿತ ಚಿಕಿತ್ಸೆಗೆ ವ್ಯವಸ್ಥೆ ಮಾಡಲಾಗಿದೆ, ಆಧಾರ್ ಕಾರ್ಡ್ ತೋರಿಸಿದರೆ ಸಾಕು” ಎಂದು ಬುರುಡೆ ಬಿಟ್ಟು, ಆಸ್ಪತ್ರೆಗಳು ಲೂಟಿಗಿಳಿದಾಗ ನೋಟ್ ರೀಚೆಬಲ್ ಆಗಿದ್ದರು.
ಅಂತಹ ಕೋಟಾ ಶ್ರೀನಿವಾಸ ಪೂಜಾರಿಗಳಿಗೆ ಹೊಸ ಮುಖವಾಡ ತೊಡಿಸಿ ಬಿಜೆಪಿ ಕಣಕ್ಕಿಳಿಸಿದೆ. ಆ ಮೂಲಕ ಆಡಳಿತ ವಿರೋಧಿ ಅಲೆಯಿಂದ ಪಾರಾಗಲು ಯತ್ನಿಸುತ್ತಿದೆ. ಉಡುಪಿ, ಚಿಕ್ಕಮಗಳೂರಿನ ಜನತೆ ಇಂತಹ ಮುಖವಾಡಗಳಿಗೆ ಬಲಿ ಬೀಳಬಾರದು. ವೈಫಲ್ಯ ಶೋಭಾರದ್ದೊ, ನಳಿನ್ ರದ್ದೊ ಅಲ್ಲ, ಅದು ಮೂರು ದಶಕದಿಂದ ಸತತ ಗೆಲುವು ಕಾಣುತ್ತಿರುವ ಬಿಜೆಪಿಯ ಅಡಳಿತದ್ದು. ವ್ಯಕ್ತಿ ಬದಲಾದ ತಕ್ಷಣ ಸಮಸ್ಯೆ ಬಗೆಹರಿಯುವುದಿಲ್ಲ. ಕರಾವಳಿ, ಮಲೆನಾಡಿನ ಜಡ್ಡು ಹಿಡಿದಿರುವ ರಾಜಕಾರಣಕ್ಕೆ, ಆಡಳಿತಕ್ಕೆ ಬಿಜೆಪಿಯನ್ನು ಈ ಭಾರಿ ಸೋಲಿಸುವುದೇ ನಿಜವಾದ ಮದ್ದು. ಮತದಾರರೆ ಸರಿಯಾಗಿ ಯೋಚಿಸಿ, ಎಚ್ಚರ ತಪ್ಪಬೇಡಿ. ಮುಖವಾಡ ಅಲ್ಲ, ಮುಖಗಳನ್ನು ನೋಡಿ.
ಮುನೀರ್ ಕಾಟಿಪಳ್ಳ
ಸಂಚಾಲಕರು, ನಾಗರಿಕ ಹೋರಾಟ ಸಮಿತಿ, ಸುರತ್ಕಲ್
