ಬೊಮ್ಮಾಯಿ ವಿರುದ್ಧ ಪ್ರಬಲ ಮುಸ್ಲಿಂ ಅಭ್ಯರ್ಥಿ ಸಾಧ್ಯತೆ.?
ಸತತ ಮೂರು ಪಟ್ಟಿಯಲ್ಲಿ ಕಾಂಗ್ರೆಸ್ ಬಹುತೇಕ ಅಭ್ಯರ್ಥಿಗಳನ್ನು ಅಂತಿಮಗೊಳಿಸಿದೆ. ಆದರೆ 15 ಕ್ಷೇತ್ರಗಳನ್ನು ಮಾತ್ರ ಈಗಲೂ ಬಾಕಿ ಇಟ್ಟಿರುವುದು ಮತ್ತಷ್ಟು ಕುತೂಹಲ ಮೂಡಿಸಿದೆ.ಕೈ ಬಾಕಿ ಉಳಿಸಿಕೊಂಡ ಈ ಕ್ಷೇತ್ರಗಳಲ್ಲಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಪ್ರತಿನಿಧಿಸುವ ಶಿಗ್ಗಾವಿ ಇದೆ. ಅಷ್ಟೇ ಅಲ್ಲ, ಮಾಜಿ ಮುಖ್ಯಮಂತ್ರಿ ಹಾಗೂ ಬಿಜೆಪಿಗೆ ಗಡುವು ವಿಧಿಸುವ ಮೂಲಕ ಎಚ್ಚರಿಕೆ ನೀಡಿರುವ ಜಗದೀಶ ಶೆಟ್ಟರ್ ಅವರ ಹುಬ್ಬಳ್ಳಿ-ಧಾರವಾಡ ಸೆಂಟ್ರಲ್ ಕ್ಷೇತ್ರವೂ ಇದೆ. ಇದರ ಜತೆಗೆ ಪ್ರಸ್ತುತ ತಮ್ಮ ಶಾಸಕರೇ ಇರುವ 4 ಕ್ಷೇತ್ರಗಳೂ ಬಾಕಿ ಪಟ್ಟಿಯಲ್ಲಿವೆ. ಈ ಎಲ್ಲ ಅಂಶಗಳಿಂದ ನಾಲ್ಕನೇ ಪಟ್ಟಿ ಕುತೂಹಲದ ಕೇಂದ್ರಬಿಂದು ಆಗಿದೆ.
15 ಕ್ಷೇತ್ರಗಳ ಪೈಕಿ ಹಲವೆಡೆ ಬಿಜೆಪಿಯ ಬಂಡಾಯದ ಕಿಡಿ ಹೊತ್ತಿಉರಿಯುತ್ತಿದೆ. ಆದ್ದರಿಂದ ಕಾದುನೋಡುವ ತಂತ್ರಕ್ಕೆ ಕಾಂಗ್ರೆಸ್ ಮೊರೆಹೋಗಿದೆ. ಮತ್ತೂಂದೆಡೆ ಕೆಲವು ಕ್ಷೇತ್ರಗಳಲ್ಲಿ ಆಕಾಂಕ್ಷಿಗಳ ಪಟ್ಟಿ ದೊಡ್ಡದಿದ್ದು, ಕಾಂಗ್ರೆಸ್ ಒಳಗಡೆಯೇ ಬಣಗಳ ಪೈಪೋಟಿ ತೀವ್ರವಾಗಿದೆ. ಇದು ಬಿಡಿಸಲಾಗದ ಕಗ್ಗಂಟಾಗಿದೆ. ಆದ್ದರಿಂದ ರಾಹುಲ್ ಗಾಂಧಿ ರಾಜ್ಯ ಪ್ರವಾಸದ ಅನಂತರ ನಾಲ್ಕನೇ ಹಂತದಲ್ಲಿ ಬಿಡುಗಡೆ ಮಾಡಲು ಪಕ್ಷದ ವರಿಷ್ಠರು ತೀರ್ಮಾನಿಸಿದ್ದಾರೆ.
ಬೊಮ್ಮಾಯಿ ವಿರುದ್ಧ ಪ್ರಬಲ ಅಭ್ಯರ್ಥಿಯ ಹುಡುಕಾಟದಲ್ಲಿ ಕಾಂಗ್ರೆಸ್ ಇದೆ. ಶಿಗ್ಗಾವಿಯಲ್ಲಿ ಅಲ್ಪ ಸಂಖ್ಯಾತರು ನಿರ್ಣಾಯಕ ಪಾತ್ರ ವಹಿಸುವುದರಿಂದ ಆ ಸಮುದಾಯದ ಹೊಸ ಮುಖವನ್ನು ಅಖಾಡಕ್ಕಿಳಿಸುವ ಚಿಂತನೆಯೂ ನಡೆದಿದೆ. ಆದರೆ ಇನ್ನೂ ತೀರ್ಮಾನವಾಗಿಲ್ಲ ಎಂದು ಮೂಲಗಳು ತಿಳಿಸಿವೆ.
ಇನ್ನೂ ದಕ್ಷಿಣ ಕನ್ನಡ ಜಿಲ್ಲೆಯ ಮಂಗಳೂರು ಉತ್ತರದಲ್ಲಿ ಟಿಕೆಟ್ ಘೋಷಣೆ ಬಾಕಿ ಇದ್ದು, ಭಾರೀ ಕುತೂಹಲ ಮೂಡಿಸಿದೆ. ಉದ್ಯಮಿ ಇನಾಯತ್ ಆಲಿಯವರಿಗೆ ಟಿಕೆಟ್ ಫೈನಲ್ ಆಗಿದ್ದು, ರಾಹುಲ್ ಗಾಂಧಿ ರಾಜ್ಯ ಬೇಟಿ ಮಾಡಿ ದೆಹಲಿ ತೆರಳಿದ ನಂತರವೇ ಘೋಷಣೆಯಾಗುವ ಸಾಧ್ಯತೆ ಇದೆ. 3ನೇ ಪಟ್ಟಿಯಲ್ಲಿ ಬಾವಾ ಹೆಸರು ಪಕ್ಕಾ ಆಗಿತ್ತು.ಕೊನೇ ಕ್ಷಣದಲ್ಲಿ ಪಟ್ಟಿಯಿಂದ ಕೈ ಬಿಡಲಾಗಿದೆ.ಮಾಜಿ ಶಾಸಕರಾದ ಮೊಹಿದ್ದೀನ್ ಬಾವಾ ಈ ಕ್ಷೇತ್ರದಲ್ಲಿ ಪ್ರಬಲ ಆಕಾಂಕ್ಷಿಯಾಗಿದ್ದರು. ಬಾವಾರವರ ಮುಂದಿನ ನಡೆ ಏನಾಗಿರಬಹುದು ಅನ್ನುವ ಬಗ್ಗೆ ಕ್ಷೇತ್ರದಲ್ಲಿ ಸಾಕಷ್ಟು ಕುತೂಹಲ ಮೂಡಿಸಿದೆ.