‘ಬಂಡಾಯ’ ಪುತ್ತಿಲ ಬಿಜೆಪಿ ಪರಿವಾರಕ್ಕೆ..ಚಾರ್ಮ್ ಕಳೆದುಕೊಂಡರಾ ಡೈನಾಮಿಕ್ ಲೀಡರ್.!

ಕರಾವಳಿ

ಸತ್ಯಜಿತ್ ಸುರತ್ಕಲ್, ಪ್ರವೀಣ್ ವಾಲ್ಕೆ ಹಾದಿಯಲ್ಲಿ ಪುತ್ತಿಲ ಕೂಡ ಸೇರುತ್ತರಾ.?

ಪ್ರತಿಯೊಂದು ಚುನಾವಣೆಯಲ್ಲಿ ಬಿಜೆಪಿಯನ್ನು ಕಾಡುತ್ತಿದ್ದ ಅರುಣ್ ಕುಮಾರ್ ಪುತ್ತಿಲ ಇದೀಗ ಯಾವುದೇ ಕಮಿಟ್ ಮೆಂಟ್ ಇಲ್ಲದೇ ಸೈಲೆಂಟಾಗಿ ಬಿಜೆಪಿ ಸೇರಿರುವುದು ಭವಿಷ್ಯದಲ್ಲಿ ಪುತ್ತಿಲ ಸೈಡ್ ಲೈನಿಗೆ ತಳ್ಳಲ್ಪಡುತ್ತರಾ ಅನ್ನುವ ಬಗ್ಗೆ ಇದೀಗ ರಾಜಕೀಯ ಪಡಸಾಲೆಯಲ್ಲಿ ವ್ಯಾಪಕ ಚರ್ಚೆಗೆ ಕಾರಣವಾಗುತ್ತಿದೆ.

ಬಿಜೆಪಿ ರಾಜ್ಯಾಧ್ಯಕ್ಷರಾಗಿದ್ದ, ಮಂಗಳೂರು ಸಂಸದ ನಳಿನ್ ಕುಮಾರ್ ಕಟೀಲು ಜೊತೆ ಮುನಿಸಿ ಪ್ರತ್ಯೇಕವಾಗಿ ಪುತ್ತಿಲ ಪರಿವಾರ ಕಟ್ಟಿ ತನ್ನದೇ ಆದ ವೈಯುಕ್ತಿಕ ವರ್ಚಸ್ಸಿನ ಮೂಲಕ ಕರಾವಳಿಯಲ್ಲಿ ಹೊಸ ಶಕೆ ಬರೆದಿದ್ದ ಅರುಣ್ ಕುಮಾರ್ ಪುತ್ತಿಲ ಕಳೆದ ಬಾರಿ ಪುತ್ತೂರು ವಿಧಾನ ಸಭಾ ಕ್ಷೇತ್ರದಲ್ಲಿ ಬಿಜೆಪಿ ಟಿಕೆಟ್ ಆಕಾಂಕ್ಷಿಯಾಗಿದ್ದರು. ಆದರೆ ಕಟೀಲ್ ಆದಿಯಾಗಿ ಬಿಜೆಪಿ ಯ ಕೆಲವೊಂದು ವ್ಯಕ್ತಿಗಳು ಪುತ್ತಿಲ ಗೆ ಟಿಕೆಟ್ ನೀಡಲು ವಿರೋಧ ವ್ಯಕ್ತಪಡಿಸಿ ಸೈಡ್ ಲೈನಿಗೆ ತಂದಿಟ್ಟಿದ್ದರು. ಇದರಿಂದ ಬೇಸತ್ತ ಪುತ್ತಿಲ ಬಿಜೆಪಿ ವಿರುದ್ಧ ತಿರುಗಿಬಿದ್ದು ಪುತ್ತಿಲ ಪರಿವಾರ ಎಂಬ ಹೊಸ ಸಂಘಟನೆ ಕಟ್ಟಿ ಪಕ್ಷೇತರರಾಗಿ ಸ್ಪರ್ಧಿಸಿದ್ದರು. ಪುತ್ತಿಲ ಹವಾದ ಮುಂದೆ ಬಿಜೆಪಿ ಅಕ್ಷರಶಃ ಬೆಚ್ಚಿಬಿದ್ದಿತ್ತು. ಬೆರೆಳೆಣಿಕೆಯ ಮತಗಳಿಂದ ಪುತ್ತಿಲ ಸೋತಿದ್ದರು. ಬಿಜೆಪಿ ಮೂರನೇ ಸ್ಥಾನಕ್ಕೆ ತಳ್ಳಲ್ಪಟ್ಟಿತ್ತು. ಆನಂತರ ನಡೆದ ಕೆಲವು ಸ್ಥಳೀಯ ಸಂಸ್ಥೆಗಳ ಚುನಾವಣೆಯಲ್ಲೂ ಪುತ್ತಿಲ ಪರಿವಾರ ಅಭೂತಪೂರ್ವ ಪ್ರದರ್ಶನ ನೀಡಿ ಬಿಜೆಪಿಗೆ ಠಕ್ಕರ್ ನೀಡಿದ್ದರು.

ಕರಾವಳಿ ಭಾಗದಲ್ಲಿ ಬಿಜೆಪಿ ಹಿನ್ನಡೆಗೆ ಪುತ್ತಿಲ ಪರಿವಾರ ಕಾರಣವೆಂದು ತಿಳಿದ ಬಿಜೆಪಿ ಹೈಕಮಾಂಡ್ ಮರಳಿ ಪುತ್ತಿಲರನ್ನು ಬಿಜೆಪಿಗೆ ಕರೆತರುವ ಪ್ರಯತ್ನ ಮಾಡಿದ್ದರು. ಆದರೆ ಪುತ್ತಿಲ ಪರಿವಾರ ಪುತ್ತೂರು ಬಿಜೆಪಿ ಮಂಡಲ ಅಧ್ಯಕ್ಷ ನೀಡುವಂತೆ ಷರತ್ತು ವಿಧಿಸಿತ್ತು. ಆದರೆ ಬಿಜೆಪಿ ಹೈಕಮಾಂಡ್ ಕೆಲವೊಂದು ನಾಯಕರಿಗೆ ಮಣಿದು ಪುತ್ತಿಲ ಪರಿವಾರದ ಷರತ್ತು ಒಪ್ಪಿಕೊಳ್ಳಲು ಸಿದ್ಧರಿರಲಿಲ್ಲ. ಮತ್ತೆ ಮಾತುಕತೆ ಮುರಿದು ಬಿದ್ದಿತ್ತು.

ಇನ್ನೇನೂ ಲೋಕ ಸಮರಕ್ಕೆ ಕೆಲವೇ ದಿನಗಳು ಬಾಕಿ ಉಳಿದಿರುವಾಗ ಪುತ್ತಿಲ ಬಂಡಾಯ ಅಭ್ಯರ್ಥಿಯಾಗಿ ಸ್ಪರ್ಧಿಸಿದ್ದರು. ಪುತ್ತಿಲ ಬಂಡಾಯದಿಂದ ಬಿಜೆಪಿ ತೀವ್ರ ಇರಿಸುಮುರಿಸಿಗೆ ಒಳಗಾಯಿತು. ಬಿಜೆಪಿ ಹಾಲಿ ಸಂಸದ ಕಟೀಲ್ ರಿಗೆ ಟಿಕೆಟ್ ಘೋಷಣೆ ಮಾಡಲು ಪುತ್ತಿಲ ಬಂಡಾಯ ಕೂಡ ದೊಡ್ಡ ತೊಡಕಾಗಿತ್ತು. ಕೊನೆಗೆ ಬ್ರಿಜೇಶ್ ಚೌಟ ಎಂಬ ಹೊಸ ಮುಖಕ್ಕೆ ಬಿಜೆಪಿ ಟಿಕೆಟ್ ಘೋಷಿಸಿದೆ. ಇದರೊಂದಿಗೆ ಪುತ್ತಿಲರ ಬಂಡಾಯವೂ ಕೊನೆಗೊಂಡಿದೆ.

ರಾಜಕೀಯ ಅನ್ನುವುದು ನಿಂತ ನೀರಲ್ಲ. ಇಂದು ಇದ್ದ ಹಾಗೆ ನಾಳೆ ಇರಲ್ಲ. ವೈಯುಕ್ತಿಕ ಕಾರಣಕ್ಕಾಗಿ ಸೆಟೆದು ನಿಂತಿದ್ದ ಪುತ್ತಿಲ ಇದೀಗ ಯಾವುದೇ ಷರತ್ತು ಇಲ್ಲದೆ ಬಿಜೆಪಿ ಸೇರಿದ್ದಾರೆ. ಪುತ್ತಿಲ ಪರಿವಾರ ಸಂಘಟನೆ ಕಟ್ಟಿದ್ದ ಅರುಣ್ ಕುಮಾರ್ ಪುತ್ತಿಲ ಯಾರನ್ನೂ ವಿಶ್ವಾಸಕ್ಕೆ ತೆಗೆದುಕೊಳ್ಳದೆ ಏಕಾಏಕಿ ಬೆಂಗಳೂರಿಗೆ ತೆರಳಿ ಬಿಜೆಪಿ ಸೇರಿರುವುದು ಇದೀಗ ಪುತ್ತಿಲ ಪರಿವಾರದಲ್ಲಿ ಒಡಕು ಮುಟ್ಟಿದೆ. ನಂಬಿಕೆಯ ಅರ್ಹತೆಯನ್ನು ಕಳೆದುಕೊಂಡಿದ್ದಾರೆ ಅನ್ನುವ ಮಾತುಗಳು ಇದೀಗ ಪುತ್ತಿಲ ಪರಿವಾರದಲ್ಲಿ ಮೆಲ್ಲನೆ ಕೇಳಿ ಬರುತ್ತಿದೆ.

ಯಾವುದೇ ಷರತ್ತು ಇಲ್ಲದೆ, ಮಂಡಲ ಅಧ್ಯಕ್ಷವೂ ದೊರೆಯದೆ ಏಕಾಏಕಿ ಬಿಜೆಪಿ ಸೇರಿರುವುದು, ಇತ್ತ ಪುತ್ತಿಲ ಕಡೆಯವರು ಅಸಮಾಧಾನ ಗೊಂಡಿರುವುದು ಭವಿಷ್ಯದಲ್ಲಿ ಪುತ್ತಿಲ ಬಿಜೆಪಿಯಲ್ಲಿ ಸೈಡ್ ಲೈನಿಗೆ ಸೇರುವ ಸಾಧ್ಯತೆ ಹೆಚ್ಚಾಗಿದೆ ಅನ್ನುವ ಮಾತುಗಳು ಕೇಳಿ ಬರುತ್ತಿದೆ. ಸತ್ಯಜಿತ್ ಸುರತ್ಕಲ್, ಪ್ರವೀಣ್ ವಾಲ್ಕೆ ಹಾದಿಯಲ್ಲಿ ಪುತ್ತಿಲ ಕೂಡ ಸೇರುತ್ತರಾ ಅನ್ನುವ ಕುತೂಹಲ ಇದೀಗ ಮೂಡಿದೆ.