ಪಲ್ಗುಣಿ ನದಿಯ ಮೇಲೆ ನಿರಂತರ ಮುಂದುವರಿದ ಕೈಗಾರಿಕಾ ದಾಳಿ; ಜನತೆ ಎಚ್ಚೆತ್ತುಕೊಂಡು ಫಲ್ಗುಣಿಯ ಉಳಿವಿಗೆ ಧ್ವನಿ ಎತ್ತದಿದ್ದರೆ ಮುಂದೆ ಅನಾಹುತಗಳು ಕಾದಿದೆ: ಮುನೀರ್ ಕಾಟಿಪಳ್ಳ

ಕರಾವಳಿ

ಮೂರು ದಿನಗಳ ವಿರಾಮದ ಬಳಿಕ ನಿನ್ನೆ ರಾತ್ರಿಯಿಂದ ಮತ್ತೆ mrpl, hpcl ಕಡೆಯಿಂದ ದೊಡ್ಡ ಪ್ರಮಾಣದಲ್ಲಿ ಮಾರಕ ಕೈಗಾರಿಕಾ ತ್ಯಾಜ್ಯವನ್ನು ತೋಕೂರು ಹಳ್ಳದ ಮೂಲಕ ಫಲ್ಗುಣಿ ನದಿಗೆ ಹರಿಯಬಿಡಲಾಗಿದೆ. ನೀರು ತೈಲ ಮಿಶ್ರಿತ ಕಪ್ಪು ಬಣ್ಣದಲ್ಲಿ ಪೆಟ್ರೋಲ್ ವಾಸನೆಯೊಂದಿಗೆ ಹರಿಯುತ್ತಿದೆ.

ಮೂರು ವಾರಗಳಿಂದ ಈ ಕುರಿತು ಜಿಲ್ಲಾಡಳಿತ, ನಾಗರಿಕ ಸಮಾಜದ ಗಮನ ಸೆಳೆಯುವ ಪ್ರಯತ್ನ ಮಾಡಲಾಗುತ್ತಿದ್ದರೂ, ಜಿಲ್ಲಾಧಿಕಾರಿ ಸಹಿತ ಜಿಲ್ಲಾಡಳಿತದ ಪ್ರತಿನಿಧಿಗಳ ಫಲ್ಗುಣಿ ನದಿಯ ಕಡೆಗೆ ತಲೆ ಹಾಕದಿರುವುದು ಆಘಾತಕಾರಿ. ಹಾಗೆಯೆ ಈಗ ಮಲಿನ ಗೊಂಡಿರುವ ತೋಕೂರು ಹಳ್ಳ, ಫಲ್ಗುಣಿ ನದಿಯ ಭಾಗದ ಗ್ರಾಮಸ್ಥರು, ನಾಗರಿಕರು ತಮ್ಮ ಆರೋಗ್ಯದ ಮೇಲೆ ಗಂಭೀರ ಪರಿಣಾಮ ಬೀರುವ ಈ ವಿದ್ಯಾಮಾನದ ಆತಂಕಗೊಂಡಿದ್ದರೂ, ಸ್ಥಳೀಯ ರಾಜಕಾರಣಿಗಳು, ಶಾಸಕರುಗಳು ಯಾವುದೇ ಪ್ರತಿಕ್ರಿಯೆ ನೀಡದಿರುವುದು, ಸ್ಥಳಕ್ಕೆ ಭೇಟಿ ನೀಡದಿರುವುದು ವಿಷಾದನೀಯ. ಲೋಕಸಭೆ ಚುನಾವಣೆ ಗೆಲ್ಲುವ ಕುರಿತು ತೊಡಗಿಸಿಕೊಂಡಿರುವ ಈ ನಾಯಕರುಗಳಿಗೆ ಫಲ್ಗುಣಿ ನದಿ ಹಾಗೂ ಸುತ್ತಲ ಜನತೆಯ ಆರೋಗ್ಯ, ಬದುಕಿನ ಕುರಿತು ಕನಿಷ್ಟ ಕಾಳಜಿಯೂ ಇಲ್ಲ ಎಂಬುದು ಎದ್ದು ಕಾಣುತ್ತಿದೆ. ಜನತೆ ಎಚ್ಚೆತ್ತುಕೊಂಡು ಫಲ್ಗುಣಿಯ ಉಳಿವಿಗೆ ಧ್ವನಿ ಎತ್ತದಿದ್ದರೆ ಮುಂದೆ ಅನಾಹುತಗಳು ಕಾದಿದೆ ಎಂದು “ನಾಗರಿಕ ಹೋರಾಟ ಸಮಿತಿ, ಸುರತ್ಕಲ್” ಎಚ್ಚರಿಸಿದೆ.