ತುಳುನಾಡು ಪರಮಪಾವನವಾದ ಪುಣ್ಯಭೂಮಿ. ಅದೆಷ್ಟೋ ಜಾತಿ, ಧರ್ಮ, ಭಾಷೆಗಳ ನೆಲೆಬೀಡು. ವೈವಿಧ್ಯತೆಯಲ್ಲಿ ಏಕತೆಯನ್ನು ಸಾರುವ ಸನಾತನ ಸಾಂಸ್ಕೃತಿಕ ಪರಂಪರೆಯ ದಕ್ಷಿಣ ಕನ್ನಡ ಜಿಲ್ಲೆಯ ಮಂಗಳೂರು ತಾಲೂಕಿನ ತೆಂಕ ಎಡಪದವು ಗ್ರಾಮದ ಕೊಂದೋಡಿ ಗಡುಸ್ಥಳ ವ್ಯಾಘ್ರ ಚಾಮಂಡಿ ಮೈಸಂದಾಯ ಹಾಗೂ ಮಹಮ್ಮಾಯಿ ಅಮ್ಮನವರ ಪುಣ್ಯ ಕ್ಷೇತ್ರ.
ಕೋರ್ಡೆಲ್ ಬಲ್ಲಾಳ್ ಮನೆತನದಿಂದ ಭಂಡಾರ ಬಂದು, ವರ್ಷಂಪ್ರತಿ ಗಡು ಸ್ಥಳದಲ್ಲಿ ಆರಾಧನೆ ನಡೆಯುತ್ತಿರುವ ಶಕ್ತಿಗಳ ಪ್ರಧಾನ ಗರ್ಭಗುಂಡವು ಸಂಪೂರ್ಣವಾಗಿ ಶಿಥಿಲಗೊಂಡಿದ್ದು ಕ್ಷೇತ್ರದ ದೈವ, ದೇವರುಗಳ ಅಪ್ಪಣೆಯಂತೆ ಕ್ಷೇತ್ರವನ್ನು ಊರ ಹಾಗೂ ಪರವೂರ ದಾನಿಗಳ ನೆರವಿನಲ್ಲಿ ಜೀರ್ಣೋದ್ಧಾರಗೊಳಿಸುವ ಬಗ್ಗೆ ಕ್ಷೇತ್ರದಲ್ಲಿ ದಿನಾಂಕ 27-05-2023 ನೇ ಶನಿವಾರ ಉಳ್ಳಾಲ ಶ್ರೀ ಲಕ್ಷ್ಮೀಶ ಪುತ್ತೂರಾಯ ಇವರ ನೇತೃತ್ವದಲ್ಲಿ ನಡೆದ ತಾಂಬೂಲ ಪ್ರಶ್ನೆಯಲ್ಲಿ ತಿಳಿದುಬಂದಂತೆ ಪ್ರಾಯಶ್ಚಿತ್ತ ಪರಿಹಾರ ಕಾರ್ಯಕ್ರಮಗಳು ಹಾಗೂ ನೂತನ ದೈವಸ್ಥಾನ, ಮಹಮ್ಮಾಯಿ ಕಟ್ಟೆ, ಬಾವಿಯ ನಿರ್ಮಾಣ ಇತ್ಯಾದಿಗಳು ಆಯ, ವಾಸ್ತು ಮತ್ತು ಶಾಸ್ತ್ರ ಪ್ರಕಾರ ನಿರ್ಮಿಸುವುದೆಂದು ತೀರ್ಮಾನಿಸಲಾಗಿತ್ತು.
ತಿರ್ಮಾನಿಸಿದಂತೆ ದಿನಾಂಕ 03-09-2023 ನೇ ರವಿವಾರದಂದು ಶಿಲಾನ್ಯಾಸಗೊಂಡು ವಾಸ್ತು ತಜ್ಞ ಬೆಳ್ಮಣ್ ದೊಡ್ಡಮನೆ ಸರ್ವೇಶ್ ತಂತ್ರಿಯವರ ಮಾರ್ಗದರ್ಶನದಲ್ಲಿ ಶ್ರೀ ವ್ಯಾಘ್ರ ಚಾಮುಂಡಿ, ಮೈ ಸಂದಾಯ ದೈವಗಳಿಗೆ ಶಿಲಾಮಯ ಗರ್ಭಗುಂಡ ಹಾಗೂ ಮಹಾಮಾಯಿ ಅಮ್ಮನವರ ಶಿಲಾಮಯ ಕಟ್ಟೆಯ ಕಾರ್ಯ ಅಂತಿಮ ಹಂತದಲ್ಲಿದ್ದು ಸದ್ರಿ ಕ್ಷೇತ್ರದ ಪುನರ್ ಪ್ರತಿಷ್ಠೆ ಹಾಗೂ ನೇಮೋತ್ಸವವನ್ನು ದಿನಾಂಕ 24-03-2024 ರಿಂದ 27-03-2024 ರವರೆಗೆ ನಡೆಸುವುದೆಂದು ಕ್ಷೇತ್ರಕ್ಕೆ ಸಂಬಂಧ ಪಟ್ಟವರು ತೀರ್ಮಾನಿಸಿದ್ದಾರೆ. ಈ ಪುಣ್ಯ ಕ್ಷೇತ್ರದ ಎಲ್ಲಾ ಕೆಲಸ ಕಾರ್ಯಗಳಿಗೆ ಸುಮಾರು 40 ಲಕ್ಷ ರೂಪಾಯಿ ಖರ್ಚು ಎಂದು ಅಂದಾಜಿಸಲಾಗಿದೆ. ಸದ್ರಿ ಕಾರ್ಯವು ದಾನಿಗಳ ನೆರವಿನಿಂದ ನಡೆದು ಲೋಕ ಕಲ್ಯಾಣವಾಗಬೇಕಾಗಿರುವುದರಿಂದ ಉದಾತ್ತ ಹೃದಯದ ಧಾನಿಗಳು ಈ ಪುಣ್ಯ ಕಾರ್ಯಕ್ಕೆ ಕೈ ಜೋಡಿಸಬೇಕಾಗಿದೆ.

ಸದ್ರಿ ಕ್ಷೇತ್ರವು ಕೋಮು ಸೌಹಾರ್ದ, ಸಾಮರಸ್ಯಕ್ಕೆ ಹೆಸರುವಾಸಿಯಾಗಿದೆ. ಸದ್ರಿ ಕ್ಷೇತ್ರದ ದೇವಾಲಯದವರು ಕಾರ್ಯಕ್ರಮಕ್ಕೆ ಆಹ್ವಾನಿಸಲು ಪದರಂಗಿ ಮಸೀದಿಗೆ ಬಂದಾಗ ಇಲ್ಲಿನ ಮುಸ್ಲಿಂ ಬಾಂಧವರು ರಮಝಾನಿನ ಪ್ರಯುಕ್ತ ವಿಶೇಷ ಪ್ರಾರ್ಥನೆಯಲ್ಲಿದ್ದರು. ಪ್ರಾರ್ಥನೆ ಮುಗಿಯಲು ಇನ್ನೂ ಅರ್ಧ ಗಂಟೆ ಇದ್ದರೂ ದೇವಾಲಯದ ಪದಾಧಿಕಾರಿಗಳು ಅಲ್ಲಿಯವರೆಗೂ ಕಾದು ಆಹ್ವಾನ ನೀಡಿರುವುದು ಇಲ್ಲಿನ ಹಿಂದೂ ಬಾಂಧವರ ಹೃದಯ ವೈಶಾಲ್ಯತೆಗೆ ಸಾಕ್ಷಿಯಾಗಿದೆ.
ಇವತ್ತಿನ ದಿನಗಳಲ್ಲಿ ಹಿಂದೂ-ಮುಸ್ಲಿಮರ ನಡುವೆ ಕ್ಷುಲ್ಲಕ ವಿಚಾರಕ್ಕೆ ಸಂಬಂಧಿಸಿ ಕೋಮು ಸೌಹಾರ್ದತೆ ಹದಗೆಡುತ್ತಿರುವ ದಿನಗಳಲ್ಲಿ ಇವರ ಸಾಮರಸ್ಯದ ನಡೆ ಇತರರಿಗೆ ಮಾದರಿಯಾಗಿದೆ. ಸಮಿತಿಯ ಪದಾಧಿಕಾರಿಗಳಾದ ಸುದರ್ಶನ್ ಪ್ರಭು.ಕೆ, ಸ್ಥಳೀಯ ಗ್ರಾಮ ಪಂಚಾಯತ್ ಸದಸ್ಯ ಗುಣಪಾಲ್. ಎನ್, ಸುಂದರ ನಾಯ್ಕ್ ಕೋರ್ಡೇಲು ಇವರ ಮುಂದಾಳತ್ವದಲ್ಲಿ ಪದರಂಗಿಯ ಮುಸ್ಲಿಂ ಬಾಂದವರನ್ನು ಈ ಪುಣ್ಯ ಕಾರ್ಯಕ್ಕೆ ಆಹ್ವಾನಿಸಲಾಯಿತು. ಇದು ದ.ಕ ಜಿಲ್ಲೆಗೊಂದು ಮಾದರಿಯಾಗಲಿ.
