ಫಲ್ಗುಣಿ ನದಿಗೆ ಮಾರಕ ಕೈಗಾರಿಕಾ ತ್ಯಾಜ್ಯ ಹರಿಸುವ mrpl ನ ಅಕ್ರಮ ಪೈಪ್ ಲೈನ್ ಪತ್ತೆ ಹಚ್ಚಿದ ಹೋರಾಟ ಸಮಿತಿ, ಜಿಲ್ಲಾಡಳಿತ ಇನ್ನಾದರು ಮೌನ ಮುರಿದು ಕಠಿಣ ಕ್ರಮ ಕೈಗೊಳ್ಳಲು ಆಗ್ರಹ

ಕರಾವಳಿ

ಕಳೆದ ಮೂರು ವಾರಗಳಿಗೂ ಅಧಿಕ ದಿನಗಳಿಂದ ಫಲ್ಗುಣಿ ನದಿಗೆ ತೋಕೂರು ಹಳ್ಳದ ಮೂಲಕ mrpl ಕಂಪೆನಿ ವಿಷಕಾರಿ ಮಾರಕ ಕೈಗಾರಿಕಾ ತ್ಯಾಜ್ಯ ಹರಿಸುತ್ತಿದೆ ಎಂದು ನಾಗರಿಕ ಹೋರಾಟ ಸಮಿತಿ ಆರೋಪಿಸುತ್ತಾ ಬಂದಿದೆ. ಇದಕ್ಕೆ ಸಾಕ್ಷಿ ಎಂಬಂತೆ mrpl ಕಡೆಯಿಂದ ಹರಿದು ಬರುವ ತೋಕೋರು ಹಳ್ಳದ ನೀರು ಕಪ್ಪು ಬಣ್ಣಕ್ಕೆ ತಿರುಗಿ ಪೆಟ್ರೋಲ್ ವಾಸನೆಯಿಂದ ನಾರುತ್ತಿತ್ತು. ಈ ಕುರಿತು ಜಿಲ್ಲಾಡಳಿತದ ಗಮನಕ್ಕೆ ತಂದು, ಪ್ರತಿದಿನ ಆಧಾರ ಸಹಿತ ತೋಕೂರು ಹಳ್ಳದ ಹೀನಾಯ ಸ್ಥಿತಿಯನ್ನು ಸಾಮಾಜಿಕ ಜಾಲತಾಣ, ಸುದ್ದಿ ಮಾಧ್ಯಮಗಳ ಮೂಲಕ ಗಮನ ಸೆಳೆಯುತ್ತಿದ್ದರೂ ಜಿಲ್ಲಾಡಳಿತ ಅನುಮಾನಾಸ್ಪದ ರೀತಿಯಲ್ಲಿ ಗಾಢ ಮೌನ ವಹಿಸಿತ್ತು. ಬೇಸಗೆಯಲ್ಲಿ ನೀರಿನಲ್ಲಿ ಆಮ್ಲಜನಕದ ಕೊರತೆ ಉಂಟಾಗುವುದರಿಂದ ಈ ಸ್ಥಿತಿ ಉಂಟಾಗಿರಬಹುದು, ವಸತಿ ಪ್ರದೇಶದ ಬಚ್ಚಲು ನೀರು ಹರಿದು ಹೀಗೆ ಆಗಿರಬಹುದು ಎಂಬ ಬಾಲಿಷ ಉತ್ತರ ನೀಡಲಾಗುತ್ತಿತ್ತು.

ಮಾಲಿನ್ಯ ನಿಯಂತ್ರಣ ಮಂಡಳಿಯ ಅಧಿಕಾರಿಗಳು ಕಂಪೆನಿಯ ಒಳಭಾಗಕ್ಕೆ ತೆರಳಿ ಪರಿಶೀಲನೆ ನಡೆಸಿದಾಗಲೂ mrpl ಕಂಪೆನಿಯು ತೋಕೂರು ಹಳ್ಳ ಕಂಪೆನಿಯ ಒಳಭಾಗದಿಂದ ಹರಿದು ಹೊರ ಬರುವ ಎಲ್ಲಾ ಸಂಪರ್ಕಗಳನ್ನು ತೋರಿಸದೆ ದಾರಿ ತಪ್ಪಿಸಿತ್ತು. ಸ್ಥಳೀಯ ಗ್ರಾಮ ಪಂಚಾಯತ್ ಸದಸ್ಯರನ್ನು ಪರಿಶೀಲನೆಯ ಸಂದರ್ಭ ಜೊತೆ ಕರೆದೊಯ್ಯುವ ಮಾಲಿನ್ಯ ನಿಯಂತ್ರಣ ಮಂಡಳಿಯ ಪ್ರಸ್ತಾಪವನ್ನು ಭದ್ರತಾ ಕಾರಣದ ಕುಂಟು ನೆಪ ಮುಂದಿಟ್ಟು ಕಂಪೆನಿ ತಿರಸ್ಕರಿಸಿತ್ತು. ಆ ಮೂಲಕ ಕೈಗಾರಿಕಾ ತ್ಯಾಜ್ಯ ಕಂಪೆನಿಯ ಕಡೆಯಿಂದ ಅಕ್ರಮವಾಗಿ ಹರಿದು ಬರುವುದನ್ನು ಮುಚ್ಚಿ ಹಾಕಲು ಹೆಣಗಾಡಿತ್ತು. ಈ ನಡುವೆ mrpl ಆವರಣದ ಹೊರ ಭಾಗವನ್ನೂ ನಿರ್ಬಂಧಿತ ಪ್ರದೇಶ ಎಂದು ಘೋಷಿಸಲು ಜಿಲ್ಲಾಡಳಿತದ ಬೆಂಬಲದಿಂದ ಯತ್ನಿಸಿ ಹೋರಾಟ ಸಮಿತಿ ಸದಸ್ಯರು ತೋಕೂರು ಹಳ್ಳದ ಸಮೀಪ ಬರದಂತೆ ತಡೆಯುವ ಕುತಂತ್ರವನ್ನೂ ನಡೆಸಿತು.

ಈ ನಡುವೆ ಹೋರಾಟ ಸಮಿತಿ ಸದಸ್ಯರು ಮಾರಕ ಕೈಗಾರಿಕಾ ತ್ಯಾಜ್ಯದ ಹರಿವಿನ ಮೂಲ ಪತ್ತೆ ಹಚ್ಚಲು ನಿರಂತರವಾದ ಪ್ರಯತ್ನ ನಡೆಸುತ್ತಿತ್ತು. ಇಂದು ಅಂತಹ ಪ್ರಯತ್ನದಲ್ಲಿ ಕಂಪೆನಿಯ ಒಳಭಾಗದಿಂದ (ಪೆಟ್ ಕೋಕ್ ಘಟಕದ ಬಳಿಯಿಂದ) ದುರ್ಗಮ ಪ್ರದೇಶದಲ್ಲಿ ಮಾರಕ ಕೈಗಾರಿಕಾ ತ್ಯಾಜ್ಯ ಹರಿದು ಬರುವ ಕಾಲುವೆಯನ್ನು ಹೋರಾಟ ಸಮಿತಿಯ ಪ್ರಮುಖರೂ, ಜೋಕಟ್ಟೆ ಗ್ರಾಮ ಪಂಚಾಯತ್ ಸದಸ್ಯರೂ ಆದ ಅಬೂಬಕ್ಕರ್ ಬಾವಾ ಹಾಗೂ ಇಕ್ಬಾಲ್ ಅಹ್ಮದ್ ಪತ್ತೆ ಹಚ್ಚಿರುತ್ತಾರೆ. ಕಾಂಕ್ರೀಟ್ ಸ್ಲಾಬ್ ಹಾಕಿ ಮುಚ್ಚಿರುವ ಕಾಲುವೆಯ ಮೂಲಕ ದೊಡ್ಡ ಪ್ರಮಾಣದಲ್ಲಿ ನೀರಿನ ಹರಿವಿನ ಜೊತೆಗೆ mrpl ನ ಕೈಗಾರಿಕಾ ತ್ಯಾಜ್ಯ ತೋಕೂರು ಹಳ್ಳ ಸೇರುವುದು ಅಧಿಕೃತವಾಗಿ ಈಗ ಪತ್ತೆಯಾಗಿದೆ.

ಕಂಪೆನಿಯ ಸುಳ್ಳು ಸ್ಪಷ್ಟೀಕರಣಗಳನ್ನೆ ಅಧಿಕೃತ ಎಂಬಂತೆ ವರ್ತಿಸುತ್ತಾ, ಫಲ್ಗುಣಿ ನದಿಯ ಮೇಲಿನ ಕೈಗಾರಿಕಾ ಧಾಳಿಯನ್ನು ತಡೆಯಲು ಯಾವುದೇ ಪ್ರಯತ್ನ ನಡೆಸದ, ಚೆನ್ನೈ ಹಸಿರು ಪೀಠದ ಆದೇಶಕ್ಕೂ ಅಗೌರವ ತೋರಿದ ಜಿಲ್ಲಾಡಳಿತ ಆ ಮೂಲಕ ಜಿಲ್ಲೆಯ ಪರಿಸರಕ್ಕೆ ಅಗಾಧ ಹಾನಿ ಆಗಲು ಅವಕಾಶ ಒದಗಿಸಿದೆ. ಈಗಲಾದರು ಜಿಲ್ಲಾಡಳಿತ ಎಚ್ಚೆತ್ತುಕೊಂಡು ಜಂಟಿ ಸಮಿತಿ ರಚಿಸಿ ಕಂಪೆನಿಯ ಕಡೆಯಿಂದ ಹರಿದು ಬರುವ ಕೈಗಾರಿಕಾ ತ್ಯಾಜ್ಯಗಳ ಎಲ್ಲ ಮೂಲಗಳನ್ನು ಪತ್ತೆ ಹಚ್ಚಬೇಕು. ಕೈಗಾರಿಕಾ ತ್ಯಾಜ್ಯದ ಒಂದು ಹನಿಯೂ ಫಲ್ಗುಣಿ ನದಿ ಸೇರದಂತೆ ಎಚ್ಚರ ವಹಿಸಬೇಕು. ಈಗ ಆಗಿರುವ ಅನಾಹುತಕ್ಕೆ ಕಾರಣರಾದ mrpl ಮೇಲೆ ಕಠಿಣ ಕ್ರಮ ಕೈಗೊಳ್ಳಬೇಕು ಎಂದು ಹೋರಾಟ ಸಮಿತಿಯು ಆಗ್ರಹಿಸಿದೆ‌. ಜಿಲ್ಲಾಡಳಿತದ ಮೃದು ಧೋರಣೆಯನ್ನು ಗಮನಿಸಿ ಕರ್ನಾಟಕ ರಾಜ್ಯ ಪರಿಸರ ಇಲಾಖೆ ಫಲ್ಗುಣಿ ನದಿಯ ಮೇಲಿನ ಮಾರಕ ಕೈಗಾರಿಕಾ ಧಾಳಿಯ ಕುರಿತು ಸಮಗ್ರ ತನಿಖೆಗೆ ಆಗ್ರಹಿಸಬೇಕು, ಪರಿಸರ ಸಚಿವ ಈಶ್ವರ ಖಂಡ್ರೆ ಈ ಕುರಿತು ವಿಶೇಷ ಗಮನ ಹರಿಸಬೇಕು ಎಂದು ಸಮಿತಿ ಒತ್ತಾಯಿಸುತ್ತದೆ ಹಾಗೂ ಈ ಕುರಿತು ಹೋರಾಟಗಳನ್ನು ಸಂಘಟಿಸಲಿದೆ ಎಂದು ಸಂಚಾಲಕ ಮುನೀರ್ ಕಾಟಿಪಳ್ಳ ಪ್ರಕಟನೆಯಲ್ಲಿ ತಿಳಿಸಿದ್ದಾರೆ.