ದ.ಕ ಮತ್ತು ಉಡುಪಿ ಜಿಲ್ಲೆಯಲ್ಲಿ ಹಲವಾರು ವಂಚನೆ ಪ್ರಕರಣಗಳಲ್ಲಿ ಭಾಗಿಯಾದ ಮಹಾ ವಂಚಕಿಯನ್ನು ಬಂಧಿಸಿದ ಬರ್ಕೆ ಠಾಣೆ ಪೊಲೀಸರು

ಕರಾವಳಿ

ಪ್ರತಿಷ್ಠಿತ ಚಿನ್ನಾಭರಣಗಳ ಹಾಗೂ ಎಲೆಕ್ಟ್ರಾನಿಕ್ ಅಂಗಡಿಗೆ ಮೋಸ, ಬರೋಬ್ಬರಿ 9 ವಂಚನೆ ಪ್ರಕರಣಗಳು

ದ.ಕ ಮತ್ತು ಉಡುಪಿ ಜಿಲ್ಲೆಯಲ್ಲಿ ದಾಖಲಾದ ಹಲವಾರು ವಂಚನೆ ಪ್ರಕರಣಗಳಲ್ಲಿ ಭಾಗಿಯಾದ ಮಹಾ ವಂಚಕಿಯೊಬ್ಬಳನ್ನು ಬರ್ಕೆ ಠಾಣೆ ಪೊಲೀಸರು ಬಂಧಿಸಿದ್ದಾರೆ. ಈಕೆಯ ವಿರುದ್ದ ಬರೋಬ್ಬರಿ 9 ವಂಚನೆ ಪ್ರಕರಣಗಳು ದಾಖಲಾಗಿವೆ. ಬರ್ಕೆ ಪೊಲೀಸ್ ಠಾಣೆಯಲ್ಲಿ ದಾಖಲಾಗಿದ್ದ ಪ್ರಕರಣ ಸಂಖ್ಯೆ: 77-2025 ಪ್ರಕರಣದಲ್ಲಿ ಪಿರ್ಯಾದಿ ಜಯರಾಯ ರವರು ಮಂಗಳೂರು ನಗರದ ಎಂಪಾಯರ್ ಮಾಲ್ ನಲ್ಲಿ ಲ್ಯಾಪ್ ಟಾಪ್ ಬಜಾರ್ ಎಂಬ ಸ್ಟೋರ್ ಇಟ್ಟುಕೊಂಡು ಎಲ್ಲಾ ಕಂಪನಿಗಳ ಲ್ಯಾಪ್ ಟಾಪ್ ಗಳನ್ನು ಸೇಲ್ಸ್ ಮತ್ತು ಸರ್ವೀಸ್ ಮಾಡಿಕೊಂಡಿದ್ದರು.

ವಂಚಕಿ ಜಯರಾಯರವರ ಶಾಪ್ ನಿಂದ ಆಪಲ್ ಕಂಪನಿಯ Macbook pro A2141 ಲ್ಯಾಪ್ ಟಾಪ್, ಡೆಲ್ ಕಂಪನಿಯ Dell 5440/Core i5-13/16GB ಲ್ಯಾಪ್ ಟಾಪ್ ಮತ್ತು ಆಪಲ್ ಕಂಪನಿಯ Macbook pro 2442 2021 M1 PRO ಲ್ಯಾಪ್ ಟಾಪ್ ನ್ನು ಆರೋಪಿತೆ ಫರಿಧಾ ಬೇಗಂ @ ಫರಿದಾ ಎಂಬುವಳು ತನ್ನ ಪರಿಚಯದ ವ್ಯಕ್ತಿಯ ಮೂಲಕ ಮಾನ್ಯತೆ ಇಲ್ಲದ ಚೆಕ್ ಗಳನ್ನು ನೀಡಿ ಲ್ಯಾಪ್ ಟಾಪ್ ಗಳನ್ನು ಖರೀದಿಸಿಕೊಂಡು ಜಯರಾಯರವರಿಗೆ ಒಟ್ಟು 1,98, ಸಾವಿರ ರೂಪಾಯಿಯ ಹಣವನ್ನು ಪಾವತಿಸದೇ ಮೋಸ ಮಾಡಿರುವ ಫರೀದಾ ಬೇಗಂ ಮುತ್ತೂರು ಗ್ರಾಮ, ಕುಪ್ಪೆಪದವು ಅಂಚೆ, ಮಂಗಳೂರು ತಾಲೂಕು ನಿವಾಸಿ, ಈಕೆಯನ್ನು ಬರ್ಕೆ ಪೊಲೀಸ್ ಠಾಣೆಯ ಪೊಲೀಸ್ ನಿರೀಕ್ಷಕರಾದ ಶ್ರೀ ಮೋಹನ ಕೊಟ್ಟಾರಿರವರ ನೇತೃತ್ವದಲ್ಲಿ ತನಿಖಾಧಿಕಾರಿ ವಿನಾಯಕ ತೊರಗಲ್ ಮತ್ತು ಮಹಿಳಾ ಸಿಬ್ಬಂದಿಗಳ ಮೂಲಕ ಪತ್ತೆ ಹಚ್ಚಿ, ವಶಕ್ಕೆ ಪಡೆದು ಮಾನ್ಯ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದು, ನ್ಯಾಯಾಲಯವು ಆರೋಪಿತಳಿಗೆ ನ್ಯಾಯಾಂಗ ಬಂಧನ ವಿಧಿಸಿರುತ್ತದೆ.

ಫರೀದಾ ಬೇಗಂ ಪ್ರತಿಷ್ಠಿತ ಚಿನ್ನಾಭರಣಗಳ ಹಾಗೂ ಎಲೆಕ್ಟ್ರಾನಿಕ್ ಅಂಗಡಿ, ಕೋಳಿ ಆಂಗಡಿಗಳಿಗೆ ಭೇಟಿ ನೀಡಿ ತನ್ನ ಚಾಲಾಕಿತನದಿಂದ ಬಣ್ಣದ ಮಾತುಗಳನ್ನಾಡಿ, ಅಂಗಡಿ ಮಾಲಕರನ್ನು ನಂಬಿಸಿ, ವಿವಿಧ ಬ್ಯಾಂಕ್ ಗಳ ಮಾನ್ಯತೆ ಇಲ್ಲದ ಚೆಕ್ ಗಳನ್ನು ನೀಡಿ ಬೆಲೆಬಾಳುವ ಸೊತ್ತುಗಳನ್ನು, ದಿನ ಬಳಕೆ ವಸ್ತುಗಳನ್ನು ಖರೀದಿಸಿ ಮೋಸಗೊಳಿಸಿರುವ ಬಗ್ಗೆ ಆರೋಪಿತಳ ಮೇಲೆ ಅವಿಭಜಿತ ಎರಡು ಜಿಲ್ಲೆಯ ವಿವಿದ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.

ಮಂಗಳೂರು ನಗರದ ಕಾವೂರು ಪೊಲೀಸ್ ಠಾಣೆ, ಬಜಪೆ ಪೊಲೀಸ್ ಠಾಣೆ, ಮೂಡಬಿದ್ರೆ ಪೊಲೀಸ್ ಠಾಣೆ, ಮುಲ್ಕಿ ಪೊಲೀಸ್ ಠಾಣೆಯಲ್ಲಿ ತಲಾ ಒಂದೊಂದು ಮೋಸ, ವಂಚನೆಯ ಪ್ರಕರಣಗಳು ಮತ್ತು ಪುತ್ತೂರು ನಗರ ಪೊಲೀಸ್ ಠಾಣೆಯಲ್ಲಿ 03 ಪ್ರಕರಣಗಳು ಹಾಗೂ ಉಡುಪಿ ಜಿಲ್ಲೆಯ ಶಿರ್ವ ಪೊಲೀಸ್ ಠಾಣೆಯಲ್ಲಿ ಒಂದು ಮೋಸ ವಂಚನೆಯ ಪ್ರಕರಣವು ದಾಖಲಾಗಿರುತ್ತದೆ. ಅಲ್ಲದೇ ಆರೋಪಿತಳು ಮೂಲ್ಕಿ ಪೊಲೀಸ್ ಠಾಣೆಯ ಪ್ರಕರಣದಲ್ಲಿ ಮಾನ್ಯ ನ್ಯಾಯಾಲಯದಿಂದ ಜಾಮೀನು ಪಡೆದುಕೊಂಡು ಮಾನ್ಯ ನ್ಯಾಯಾಲಯಕ್ಕೆ ಪ್ರಕರಣದ ವಿಚಾರಣೆಗೆ ಹಾಜರಾಗದೇ ತಲೆಮರೆಸಿಕೊಂಡಿದ್ದು, ಮಾನ್ಯ ನ್ಯಾಯಾಲಯವು ಆರೋಪಿತಳ ವಿರುದ್ದ ವಾರೆಂಟ್ ನ್ನು ಕೂಡಾ ಹೊರಡಿಸಿರುತ್ತದೆ. ಹಾಗೂ ಕಾವೂರು ಮತ್ತು ಮೂಡಬಿದ್ರೆ ಪೊಲೀಸ್ ಠಾಣೆಯಲ್ಲಿ ದಾಖಲಾದ ಪ್ರಕರಣಗಳಲ್ಲಿ ದಸ್ತಗಿರಿಯಾಗದೆ ತಲೆಮರೆಸಿಕೊಂಡಿದ್ದಳು. ಇದೀಗ ಬರ್ಕೆ ಪೊಲೀಸರು ವಂಚಕಿಯನ್ನು ಬಂಧಿಸಿ ನ್ಯಾಯಾಲಯಕ್ಕೆ ಹಾಜರುಪಡಿಸಿರುತ್ತಾರೆ.