ಮಂಗಳೂರು’ಭೂ’ಮಾಫಿಯಾ ನಗರವಾಗಿ ಪರಿವರ್ತನೆ ಹೊಂದುತ್ತಿದೆ

ಕರಾವಳಿ

ಗಿರಿಧರ್ ಶೆಟ್ಟಿ ಅತ್ಯಾಪ್ತರಾಗಿರುವ ಶಾಸಕ ವೇದವ್ಯಾಸ ಕಾಮತ್ ಸಹಕಾರ, ಕೃಪಾಕಟಾಕ್ಷ ಇಲ್ಲದಿರಲು ಸಾಧ್ಯವಿಲ್ಲ.!

RTI ಕಾರ್ಯಕರ್ತ ಬಾಳಿಗಾ ಕೊಲೆಯ ಸಂಚು ನಡೆದಿರುವುದು ಗಿರಿಧರ್ ಶೆಟ್ಟಿಯ ಗೆಸ್ಟ್ ಹೌಸ್ ನಲ್ಲಿ ಪೊಲೀಸರು ತನಿಖಾ ವರದಿಯಲ್ಲಿ ತೋರಿಸಿದ್ದು ನಿಜ ತಾನೆ: ಮುನೀರ್ ಕಾಟಿಪಳ್ಳ

ಮಂಗಳೂರು ಮೂಡಾ ಕಮೀಷನರ್ ಮನ್ಸೂರ್ ಅಲಿ ಲೋಕಾಯುಕ್ತ ಪೊಲೀಸರಿಂದ ಬಂಧನಕ್ಕೆ ಒಳಗಾದ ನಂತರ ಮಂಗಳೂರು ನಗರದ ಭೂದಂಧೆ ಲಾಬಿಯ ಕರಾಳ ಮುಖಗಳು ಒಂದೊಂದಾಗಿ ಹೊರಬರುತ್ತಿವೆ.

ಟಿ.ಡಿ.ಆರ್ ನೀಡಿ ನಾಗರಿಕರಿಂದ ನಗರ ಪಾಲಿಕೆಯ ರಸ್ತೆ, ಚರಂಡಿ, ಫುಟ್ ಪಾತ್ ಗಳ ತುರ್ತು ಅಗಲೀಕರಣಕ್ಕಾಗಿ ಭೂಸ್ವಾಧೀನ ಪಡಿಸಲು ಇರುವ ತುರ್ತು ಅಗತ್ಯದ ಒಂದು ನಿಮಯ. ಬಿಜೆಪಿ ಮಂಗಳೂರು ಪಾಲಿಕೆ ಆಡಳಿತ ಹಿಡಿದ ನಂತರ, ಈಗಿನ ಶಾಸಕ ವೇದವ್ಯಾಸ ಕಾಮತ್ ಗೆಲುವು ಸಾಧಿಸಿದ ನಂತರ ಟಿ ಡಿ ಆರ್ ಎಂಬುದು ಬೇಕಾಬಿಟ್ಟಿ ಬಳಕೆಯಾಗತೊಡಗಗಿದೆ. ಹತ್ತಾರು ಎಕರೆ ಜಮೀನು ಟಿ.ಡಿ.ಆರ್ ಅಡಿಯಲ್ಲಿ ಖರೀದಿಸುವುದು ಒಂದು ದಂಧೆಯಲ್ಲದೆ ಇನ್ನೇನಲ್ಲ. ಇದರಿಂದ ರಸ್ತೆ ಅಗಲೀಕರಣಕ್ಕೆ ಒಂದೆರಡು ಸೆಂಟ್ಸ್ ಬಲವಂತಕ್ಕೆ ಬಿಟ್ಟುಕೊಟ್ಟು ಟಿ ಡಿ ಆರ್ ಪಡೆದ ನಾಗರಿಕರು ನಷ್ಟ ಅನುಭವಿಸುವಂತಾಗಿದೆ.

ಈಗ ಮನ್ಸೂರ್ ಅಲಿ ಯ ಮೇಲೆ ಟಿ‌.ಡಿ‌.ಆರ್ ಫೈಲ್ ಕ್ಲಿಯರೆನ್ಸ್ ಗಾಗಿ ಲಂಚ ಕೇಳಿದ ಆರೋಪ ಹೊರಿಸಿ ಬಂಧನಕ್ಕೆ ಕಾರಣರಾದ ರಿಯಲ್ ಎಸ್ಟೇಟ್ ಲಾಭಿಯ ಗಿರಿಧರ್ ಶೆಟ್ಟಿ ಆ 10.8 ಎಕರೆ ಜಮೀನಿನ ಮೂಲ ಮಾಲಕರೇ ಅಲ್ಲ. ಮೂಲ ಮಾಲಕರಿಗೆ ಮುಂಗಡ ನೀಡಿ ಎಗ್ರಿಮೆಂಟ್ ಅಷ್ಟೆ ಮಾಡಿಸಿಕೊಂಡಿದ್ದಾರೆ. ಆ ಸಂದರ್ಭ ಮೂಲ ಮಾಲಕರೊಂದಿಗೆ ಒಪ್ಪಂದಕ್ಕೆ ಬಂದ ಜಮೀನಿನ ಮೌಲ್ಯದ ಹತ್ತಾರು ಪಟ್ಟು ಹೆಚ್ಚಿನ ಮೊತ್ತಕ್ಕೆ ನಗರ ಪಾಲಿಕೆಯೊಂದಿಗೆ ಡೀಲ್ ಕುದುರಿಸಿದ್ದಾರೆ. ಇದಕ್ಕೆ ಗಿರಿಧರ್ ಶೆಟ್ಟಿ ಅತ್ಯಾಪ್ತರಾಗಿರುವ ಶಾಸಕ ವೇದವ್ಯಾಸ ಕಾಮತ್ ಸಹಕಾರ, ಕೃಪಾಕಟಾಕ್ಷ ಇಲ್ಲದಿರಲು ಸಾಧ್ಯವಿಲ್ಲ. ಮೂಲ ಮಾಲಕರನ್ನು ಬಿಟ್ಟು ಎಗ್ರಿಮೆಂಟ್ ಮಾಡಿಕೊಂಡ ಬ್ರೋಕರ್ ಜೊತೆ ನಗರ ಪಾಲಿಕೆ ಟಿ.ಡಿ.ಆರ್ ಅಡಿ ಜಮೀನು ಖರೀದಿಗೆ ಮುಂದಾಗಿದ್ದು ಹೇಗೆ ?

ಅಷ್ಟಕ್ಕೂ ಈ 10.8 ಜಮೀನು ಬೇಕಿರುವುದು ಸರಕಾರಕ್ಕೆ (ಮಂಗಳೂರು ಪಾಲಿಕೆಗೆ). ನಗರ ಪಾಲಿಕೆ ಟಿ.ಡಿ.ಆರ್ ನೀಡಿ ಖರೀದಿಸಲು ಮುಂದಾಗಿದೆ. ಹಾಗಿರುತ್ತಾ ಟಿ.ಡಿ.ಆರ್ ಫೈಲ್ ಕ್ಲಿಯರ್ ಮಾಡುವುದು ನಗರ ಪಾಲಿಕೆಯ ಜವಾಬ್ದಾರಿ. ಅದು ಆಗದಿದ್ದಲ್ಲಿ ನಗರ ಪಾಲಿಕೆಗೆ ನಷ್ಟವೇ ಹೊರತು ಜಮೀನಿನ ಮಾಲಕರಿಗೆ ಅಲ್ಲ. ಹಾಗಿರುತ್ತಾ ಗಿರಿಧರ್ ಶೆಟ್ಟಿ ಮೂಡಾ ಕಮೀಷನರ್ ಬಳಿ ಫೈಲ್ ಕ್ಲಿಯೆರೆನ್ಸ್ ಗೆ ಓಡಾಡಿದ್ದು ಯಾಕೆ ?, ಮೂಡಾ ಕಮೀಷನರ್ ಜೊತೆ ಲಂಚದ ಮಾತುಕತೆ ನಡೆಸಿದ್ದು ಯಾಕೆ ? ಟಿಡಿಆರ್ ನೀಡಲು ಸಾಧ್ಯ ಆಗದಿದ್ದರೆ ಜಮೀನು ಖರೀದಿ ಒಪ್ಪಂದ ರದ್ದುಗೊಳಿಸಿ ಎಂದು ನಗರ ಪಾಲಿಕೆಗೆ ಹೇಳುವ ಬದಲು ಲೋಕಾಯುಕ್ತ ಕಚೇರಿಗೆ ದೂರು ನೀಡಿದ್ದು ಹೇಗೆ ? ಶಾಸಕರ ಆತ್ಯಾಪ್ತನ, ನಗರ ಪಾಲಿಕೆಗೆ ಸಂಬಂಧಿಸಿದ ಫೈಲ್ ಅನ್ನು ಕಮೀಷನರ್ ಪೆಂಡಿಂಗ್ ಇಡಲು ಕಾರಣ ಏನು ?

ಕತೆ ತುಂಬಾ ರಸವತ್ತಾಗಿರುವುದಂತೂ ಹೌದು. RTI ಕಾರ್ಯಕರ್ತ ಬಾಳಿಗಾ ಕೊಲೆಯ ಸಂಚು ನಡೆದಿರುವುದು ಇದೇ ಗಿರಿಧರ್ ಶೆಟ್ಟಿಯ ಗೆಸ್ಟ್ ಹೌಸ್ ನಲ್ಲಿ ಎಂದು ಪೊಲೀಸರು ತನಿಖಾ ವರದಿಯಲ್ಲಿ ತೋರಿಸಿದ್ದು ನಿಜ ತಾನೆ !
ಮಂಗಳೂರು ಭಯಾನಕ ಮಾಫಿಯಾ ನಗರವಾಗಿ ಪರಿವರ್ತನೆ ಹೊಂದುತ್ತಿದೆ ಎಂದು ನಿಮಗೆ ಅನಿಸುತ್ತಿಲ್ಲವೆ.