ಮಾಹಿತಿ ಹಕ್ಕು ಕಾಯ್ದೆಯಡಿಯಲ್ಲಿ ಮಾಹಿತಿ ನೀಡದ ಪೊಲೀಸ್ ಅಧಿಕಾರಿಗೆ ಹತ್ತು ಸಾವಿರ ರೂ. ದಂಡ

ರಾಜ್ಯ

ದಂಡದ ಮೊತ್ತವನ್ನು ಸಂಬಳದಿಂದ ಕಡಿತಗೊಳಿಸಿ ಆಯೋಗದ ಖಾತೆಗೆ ಜಮೆ ಮಾಡುವಂತೆ ಆದೇಶ

ಮಾಹಿತಿ ಹಕ್ಕು ಕಾಯ್ದೆಯ ಪ್ರಕಾರ ಮಾಹಿತಿ ನೀಡುವಂತೆ ಸಲ್ಲಿಸಿದ ಅರ್ಜಿಗೆ ನಿಗದಿತ ಅವಧಿಯಲ್ಲಿ ಮಾಹಿತಿ ಒದಗಿಸದ ಹಿನ್ನೆಲೆಯಲ್ಲಿ ಮೈಸೂರು ಜಿಲ್ಲೆಯ ಪಿರಿಯಾಪಟ್ಟಣ ತಾಲೂಕಿನ ಬೈಲುಕೊಪ್ಪ ಪೊಲೀಸ್ ಠಾಣೆಯ ಸಬ್ ಇನ್ಸ್‌ಪೆಕ್ಟರ್‌ ಹಾಗೂ ಮಾಹಿತಿ ಅಧಿಕಾರಿ ಅಜಯ್ ಎಂಬ ಪೊಲೀಸ್ ಅಧಿಕಾರಿಗೆ ಕರ್ನಾಟಕ ರಾಜ್ಯ ಮಾಹಿತಿ ಹಕ್ಕು ಆಯೋಗ 10 ಸಾವಿರ ರೂ. ದಂಡ ವಿಧಿಸಿದೆ. ಮಂಗಳೂರು ನಿವಾಸಿ ಮಹಮ್ಮದ್ ಝಮೀರ್ ಆಯೋಗಕ್ಕೆ ದೂರು ನೀಡಿದ್ದರು.

2022ರ ನವೆಂಬರ್ 29 ರಂದು ಮೈಸೂರು ಜಿಲ್ಲೆಯ ಪಿರಿಯಾಪಟ್ಟಣದ ಬೈಲು ಕೊಪ್ಪ ಪೊಲೀಸ್ ಠಾಣೆಯ ಸಬ್ ಇನ್ಸ್‌ಪೆಕ್ಟರ್‌ ಹಾಗೂ ಮಾಹಿತಿ ಅಧಿಕಾರಿಗೆ ಮಾಹಿತಿ ಹಕ್ಕಿನಡಿಯಲ್ಲಿ ಮಹಮ್ಮದ್ ಝಮೀರ್ ಎಂಬವರು ಅರ್ಜಿ ಸಲ್ಲಿಸಿದ್ದರು. ಈ ಅರ್ಜಿಯಲ್ಲಿ ಮೈಸೂರು ಜಿಲ್ಲೆಯ ಬೈಲುಕೊಪ್ಪ ಪೊಲೀಸ್ ಠಾಣಾ ದಾಖಲೆಗಳ ಪ್ರಕಾರ ಬೈಲುಕೊಪ್ಪ ಲಕ್ಷ್ಮೀ ಪುರ ಪ್ರದೇಶದಲ್ಲಿ ಟಿಬೇಟಿಯನ್ ನಿರಾಶ್ರಿತರು ಯಾವುದೇ ವ್ಯಾಪಾರ ಮಾಡಬೇಕಾದರೆ ಪೊಲೀಸ್ ಇಲಾಖೆಯಿಂದ ಕಡ್ಡಾಯವಾಗಿ ಪಡೆದುಕೊಳ್ಳಬೇಕಾದ ಪರವಾನಿಗೆಯ ಬಗ್ಗೆ ಸಂಪೂರ್ಣ ವಿವರ ಹಾಗೂ ಅದಕ್ಕೆ ಸಂಬಂಧಿಸಿದಂತೆ ದಾಖಲೆಗಳ ದೃಢೀಕೃತ ಪ್ರತಿಯನ್ನು ಕೋರಿ ಅರ್ಜಿ ಸಲ್ಲಿಸಿದ್ದರು. ಆದರೆ ಮಾಹಿತಿ ದೊರೆಯದೆ ಇದ್ದ ಕಾರಣ ಅರ್ಜಿದಾರರು ಪ್ರಥಮ ಮೇಲ್ಮನವಿ ಪ್ರಾಧಿಕಾರಕ್ಕೆ ಮನವಿ ನೀಡಿದರೂ ಮಾಹಿತಿ ದೊರೆಯಲಿಲ್ಲ.

ಈ ಹಿನ್ನೆಲೆಯಲ್ಲಿ ಅರ್ಜಿದಾರರು ಕರ್ನಾಟಕ ಮಾಹಿತಿ ಆಯೋಗಕ್ಕೆ ದೂರು ನೀಡಿದ್ದು, ಈ ಬಗ್ಗೆ ಮಾಹಿತಿ ಆಯೋಗ ವಿಚಾರಣೆ ನಡೆಸಿ ನಿಗದಿತ ಅವಧಿಯಲ್ಲಿ ಮಾಹಿತಿ ನೀಡುವಂತೆ ಪೊಲೀಸ್ ಸಬ್ ಇನ್ಸ್‌ಪೆಕ್ಟರಿಗೆ ಡಿಸೆಂಬರ್ 19, 2023ರಂದು ಆದೇಶಿತ್ತು. ಬಳಿಕ ಮಾಹಿತಿ ದೊರೆಯದ ಕಾರಣ ಮಹಮ್ಮದ್ ಝಮೀರ್ ಮತ್ತೆ ಆಯೋಗಕ್ಕೆ ಮನವಿ ಸಲ್ಲಿಸಿದ್ದರು. ಈ ಬಗ್ಗೆ ಆಯೋಗ ವಿಚಾರಣೆ ನಡೆಸಿ ಜನವರಿ 25, 2024 ರಂದು ಅದೇಶ ಮತ್ತು ದಂಡ ವಿಧಿಸುವ ಎಚ್ಚರಿಕೆ ನೀಡಿತ್ತು. ಈ ಎರಡೂ ನಿರ್ದೇಶನದ ಬಳಿಕವೂ ಮೇಲ್ಮನವಿದಾರರಿಗೆ ಮಾಹಿತಿ ಒದಗಿಸದೆ ಇರುವುದರಿಂದ ರಾಜ್ಯ ಮಾಹಿತಿ ಆಯೋಗದ ಆಯುಕ್ತರು 30 ದಿನಗಳ ಒಳಗೆ ದೃಢೀಕೃತ ಮಾಹಿತಿಯನ್ನು ಮೇಲ್ಮನವಿದಾರರಿಗೆ ಒದಗಿಸಬೇಕು ಮತ್ತು ಸದ್ರಿ ಪೊಲೀಸ್ ಅಧಿಕಾರಿಗೆ ಮಾರ್ಚ್ 7ರಂದು 10 ಸಾವಿರ ರೂ. ದಂಡ ವಿಧಿಸಿ ಆದೇಶ ಹೊರಡಿಸಿರುತ್ತಾರೆ.

ಈ ಆದೇಶದಲ್ಲಿ ಮಾಹಿತಿ ಹಕ್ಕು ಕಾಯ್ದೆಯಡಿ ಅರ್ಜಿ ಸಲ್ಲಿಸಿದ್ದರು. ನಿಗದಿತ ಸಮಯದೊಳಗೆ ಸೂಕ್ತ ಮಾಹಿತಿ ನೀಡದಿರುವ ಕಾರಣ ಮತ್ತು ಮಾಹಿತಿ ಆಯೋಗದ ಆದೇಶ ಉಲ್ಲಂಘಿಸಿ, ನಿರ್ಲಕ್ಷ್ಯ ವಹಿಸಿರುವ ಹಿನ್ನೆಲೆಯಲ್ಲಿ ಹತ್ತು ಸಾವಿರ ರೂ. ದಂಡ ವಿಧಿಸಿರುವುದಾಗಿ ಉಲ್ಲೇಖಿಸಲಾಗಿದೆ. ಈ ದಂಡದ ಮೊತ್ತವನ್ನು ಪೊಲೀಸ್ ಸಬ್ ಇನ್ಸ್‌ಪೆಕ್ಟರ್‌ ರ ಸಂಬಳದಿಂದ ಕಡಿತಗೊಳಿಸಿ ಮಾಹಿತಿ ಹಕ್ಕು ಆಯೋಗದ ಖಾತೆಗೆ ಜಮೆ ಮಾಡುವಂತೆ ಮೈಸೂರು ಪೊಲೀಸ್ ವರಿಷ್ಠಾಧಿಕಾರಿಗೆ ರಾಜ್ಯ ಮಾಹಿತಿ ಹಕ್ಕು ಆಯೋಗದ ಆಯುಕ್ತರು ಆದೇಶ ನೀಡಿದ್ದಾರೆ