ಬಂಟ್ವಾಳ ಕಾಂಗ್ರೆಸ್ ಮುಖಂಡ, R.T.I ಕಾರ್ಯಕರ್ತನ ಶವ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆ.

ಕರಾವಳಿ

ಆತ್ಮಹತ್ಯೆಯೋ..ವ್ಯವಸ್ಥಿತ ಕೊಲೆಯೋ.?

ಬಂಟ್ವಾಳ ತಾಲೂಕಿನ ಚೆನ್ನೈತ್ತೋಡಿ ಗ್ರಾ.ಪಂ.ವ್ಯಾಪ್ತಿಯ ವಾಮದಪದವು ತಿಮರಡ್ಡ ನಿವಾಸಿ ಪದ್ಮನಾಭ ಸಾಮಂತ ಮೃತ ಯುವಕ. ಜಿಲ್ಲಾ ಕಾಂಗ್ರೆಸ್‌ ಹಿಂದುಳಿದ ವರ್ಗಗಳ ವಿಭಾಗದ ಉಪಾಧ್ಯಕ್ಷರಾಗಿದ್ದ ಪದ್ಮನಾಭ ಅವರು ಬಂಟ್ವಾಳ ತಾಲೂಕು ವ್ಯಾಪ್ತಿಯಲ್ಲಿ ನಡೆದ ಹಲವು ಭ್ರಷ್ಟಾಚಾರ ಪ್ರಕರಣಗಳ ಬಗ್ಗೆ ಲೋಕಾಯುಕ್ತಕ್ಕೆ ದೂರು ನೀಡಿದ್ದರು. 2018ರಿಂದ 2023ರ ಅವಧಿಯಲ್ಲಿ ರಾಜೇಶ್ ನಾಯ್ಕ್ ಶಾಸಕರಾಗಿದ್ದ ಸಂದರ್ಭ ನಡೆದ ಎಲ್ಲಾ ಅಕ್ರಮ-ಸಕ್ರಮಗಳಲ್ಲಿ ವ್ಯಾಪಕ ಭ್ರಷ್ಟಾಚಾರ ನಡೆದಿದೆ ಎಂದು ಆರೋಪಿಸಿ ಲೋಕಾಯುಕ್ತಕ್ಕೆ ದೂರು ದಾಖಲಿಸಿದ್ದರು.

ಅದೂ ಅಲ್ಲದೇ ಸೇತುವೆ ನಿರ್ಮಾಣ, ರಸ್ತೆ ಡಾಮರೀಕರಣ ಸೇರಿದಂತೆ ಇನ್ನಿತರ ಹಲವಾರು ಕೋಟಿ ಕೋಟಿ ಕಾಮಗಾರಿಗಳ ಬಗ್ಗೆಯೂ ಸಂಬಂಧಿಸಿದ ಇಲಾಖೆಗಳಲ್ಲಿ ದೂರು ನೀಡಿ ತನಿಖೆಗಾಗಿ ಆಗ್ರಹಿಸಿದ್ದರು. ಇವೆಲ್ಲದರ ಕಾರಣದಿಂದಾಗಿ ಬಿಜೆಪಿಯ ಕೆಲವು ನಾಯಕರಿಗೆ ಹಾಗೂ ಇಲಾಖೆಯ ಅಧಿಕಾರಿಗಳ ಪಾಲಿಗೆ ಪದ್ಮನಾಭ ಸಾಮಂತ್ ನುಂಗಲಾರದ ತುತ್ತಾಗಿದ್ದರು.

ಕಾಮಗಾರಿಗಳಲ್ಲಿ ಭ್ರಷ್ಟಾಚಾರ ನಡೆದಿದೆ ಎಂಬುದು ಅರಿವಾದ ತಕ್ಷಣ ಆರ್‌ಟಿಐ ನಿಂದ ಮಾಹಿತಿ ಪಡೆದು ಸಾಮಾಜಿಕ ಜಾಲತಾಣಗಳಲ್ಲಿ ಹಾಕುತ್ತಾ ಭ್ರಷ್ಟರ ಜನ್ಮಜಾಲಾಡುತ್ತಿದ್ದ ಸಾಮತ್ ವಿರುದ್ಧ ಕೆಲದಿನಗಳ ಹಿಂದಷ್ಟೇ ಪುಂಜಾಲಕಟ್ಟೆ ಠಾಣೆಯಲ್ಲಿ ಯುವಕನೊಬ್ಬ ದೂರು ನೀಡಿದ್ದ. ಸರ್ಕಾರಿ ಉದ್ಯೋಗ ತೆಗೆದುಕೊಂಡು ತ್ತೇನೆ ಕಾದು 1,50ಲಕ್ಷ ಪಡೆದಿದ್ದಾನೆಂದು ಆರೋಪಿಸಿ ಪದ್ಮನಾಭ ಸಾಮಂತ್ ವಿರುದ್ಧ ಯುವಕ ದೂರು ದಾಖಲಿಸಿದ್ದನು. ವಿಚಾರಣೆಗೆ ಹಾಜರಾಗುವುದಾಗಿ ಪೊಲೀಸರ ಬಳಿ ಹೇಳಿದ್ದ ಇವರು ಕಳೆದ ಮೂರು ದಿನಗಳಿಂದ ಠಾಣೆಗೆ ಹೋಗಿಲ್ಲವಾಗಿತ್ತು. ದೂರವಾಣಿ ಕರೆ ಮಾಡಿದರೂ ಉತ್ತರವಿರಲಿಲ್ಲ ಎಂದು ಪೊಲೀಸರು ಹೇಳಿದ್ದಾರೆ.

ಇಂದು ಬೆಳಗ್ಗೆ ಪದ್ಮನಾಭ ಅವರು ಮೃತದೇಹ ಕೊಳೆತ ಸ್ಥಿತಿಯಲ್ಲಿ ಮರವೊಂದರಲ್ಲಿ ನೇಣುಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದೆ. ಇವರು ಮೃತಪಟ್ಟು ಕೆಲವು ದಿನಗಳಗಾಗಿರುವ ಕಾರಣ ಮರಣೋತ್ತರ ಪರೀಕ್ಷೆಗೆ ಫೋರೆನ್ಸಿಕ್‌ ತಜ್ಞರು ಬರಬೇಕಿದೆ. ಬಡ ಕುಟುಂಬದ ಪದ್ಮನಾಭ ಅವರಿಗೆ ಸರಿಯಾದ ಉದ್ಯೋಗವಿರಲಿಲ್ಲ. ತನ್ನ ತಾಯಿ ಸಹೋದರನೊಂದಿಗೆ ವಾಸಿಸುತ್ತಿದ್ದು, ಮೃತದೇಹ ಮನೆಯ ಹಿಂಬದಿಯ ಗುಡ್ಡದಲ್ಲಿ ಪತ್ತೆಯಾಗಿದೆ.
ಕೊಳೆತ ಮೃತದೇಹದ ವಾಸನೆಯು ಹೆಚ್ಚಿದ್ದರಿಂದ ರವಿವಾರ ಈ ಘಟನೆ ಬೆಳಕಿಗೆ ಬಂದಿದೆ. ಪ್ರಾಥಮಿಕ ಮಾಹಿತಿ ಪ್ರಕಾರ ಇದು ಆತ್ಮಹತ್ಯೆ ಎಂದು ಹೇಳಲಾಗಿದ್ದು, ಮರಣೋತ್ತರ ಪರೀಕ್ಷೆಯ ನಂತರವೇ ಸತ್ಯಾಂಶ ತಿಳಿದು ಬರಲಿದೆ.

ಆದರೆ ಸಾಮಾಜಿಕ ಜಾಲತಾಣಗಳಲ್ಲಿ ಪದ್ಮನಾಭ ಸಾಮಂತ್ ವ್ಯವಸ್ಥಿತ ಕೊಲೆ ಎಂದು ವೈರಲಾಗುತ್ತಿದ್ದು ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ನಡೆಸುತ್ತಿದ್ದಾರೆ. ಆತ್ಮಹತ್ಯೆಯೋ..ವ್ಯವಸ್ಥಿತ ಕೊಲೆಯೋ ಎಂಬುದು ಪೊಲೀಸರ ತನಿಖೆಯಿಂದ ಬಯಲಾಗಬೇಕಿದೆ.