‘ಕಾಂತಾರ’ ಸಿನಿಮಾ ರೀಲ್ ಕಥೆಯಾದರೆ, ‘ಪದ್ಮನಾಭ ಸಾಮಂತ್’ ರದ್ದು ‘ಕಾಂತಾರ’ ಸಿನಿಮಾವನ್ನೇ ಹೋಲುವ ರಿಯಲ್ ಸ್ಟೋರಿ

ಕರಾವಳಿ

ಕಾಂತಾರ’ಕ್ಕೂ ಸಾಮಂತರ ಪ್ರಕರಣಕ್ಕೂ ಸಾಮ್ಯತೆ ಏನಂತೀರ.?

‘ಕಾಂತಾರ’ ಸಿನಿಮಾ ರೀಲ್ ಕಥೆಯಾದರೆ, ‘ಸಾಮಂತ್’ ರದ್ದು ‘ಕಾಂತಾರ’ ಸಿನಿಮಾವನ್ನೇ ಹೋಲುವ ರಿಯಲ್ ಸ್ಲೋರಿ. ಕಾಂತಾರಕ್ಕೂ ಸಾವಂತರ ಸಾವಿಗೂ ಸಾಮ್ಯತೆ ಕಂಡು ಬರುತ್ತದೆ. ಕಾಂತಾರದಲ್ಲಿ ಒಂದು ಸಾವಿನ ನಂತರದ ಕ್ಲೈಮ್ಯಾಕ್ಸ್‌ಗಾಗಿ ಪ್ರೇಕ್ಷಕರು ಕಾದು ಕುಳಿತರೆ, ಪದ್ಮನಾಭ ಸಾವಂತರ ಸಾವಿನ ಕಥಾನಕ ಯಾವ ಕ್ಲೈಮ್ಯಾಕ್ಸ್‌ನತ್ತ ಕೊಂಡೊಯ್ಯುತ್ತೋ ಎಂಬುದು ಕುತೂಹಲ.

ಅಷ್ಟಕ್ಕೂ ‘ಕಾಂತಾರ’ಕ್ಕೂ ಈ ಪ್ರಕರಣಕ್ಕೂ ಸಾಮ್ಯತೆ ಏನಂತೀರ?

‘ಕಾಂತಾರ’ ಸಿನಿಮಾದಲ್ಲಿ ಸರ್ಕಾರಿ ಜಮೀನನ್ನು ಪ್ರಭಾವಿಯೊಬ್ಬ ಕಬಳಿಸಿದ್ದು, ಅನಂತರ ಪ್ರಕರಣ ಬಯಲಾಗದಂತೆ ದೈವ ನರ್ತನ ಮಾಡುವ ವ್ಯಕ್ತಿಯ ಮೇಲೆ ಒತ್ತಡ ತರಲಾಗುತ್ತದೆ. ಸತ್ಯವೇ ಉಸಿರು ಎಂಬಂತೆ ಒತ್ತಡಕ್ಕೆ ಮಣಿಯದ ದೈವ ನರ್ತನದ ವ್ಯಕ್ತಿ ನಿಗೂಢವಾಗಿ ಕೊಲೆಯಾಗುತ್ತಾನೆ. ಅದೇ ರೀತಿ ಅನ್ಯಾಯದ ವಿರುದ್ಧ ನಿಯತ್ತಿನ ಹೋರಾಟ ನಡೆಸಿ, ಯಾವುದೇ ಲಾಭಿಗೆ ಮಣಿಯದ ಪದ್ಮನಾಭ ಸಾಮಂತರ ಕಥೆಯು ಮುಗಿಯುತ್ತದೆ.

ಬಂಟ್ವಾಳದಲ್ಲಿ ತಾಲೂಕಿನಲ್ಲಿ ನಡೆದಿದೆ ಎನ್ನಲಾದ ಹಲವಾರು ಪ್ರಕರಣಗಳನ್ನು ಬಯಲಿಗೆ ತಂದಿರುವ ಪದ್ಮನಾಭ ಸಾವಂತ್ ರವರ ಆತ್ಮಹತ್ಯೆ ಪ್ರಕರಣವೂ ಕಾಂತಾರ ಸಿನಿಮಾವನ್ನೇ ಹೋಲುವಂತಿದೆ. ಇಲ್ಲೂ ಅಕ್ರಮ-ಸಕ್ರಮ ಸಹಿತ ಭೂ ಅಕ್ರಮವನ್ನು ಬೇಧಿಸುವ ಪ್ರಯತ್ನದಲ್ಲಿದ್ದ ‘ಸಾಂವಂತ’ರು ಅಕ್ರಮವನ್ನು ಬಯಲಿಗೆ ತರುವ ಪ್ರಯತ್ನಕ್ಕಿಳಿದಿದ್ದರು. ಯಾವುದೇ ಒತ್ತಡ, ಬೆದರಿಕೆಗೆ ಜಗ್ಗದ ಅವರು ಕೂಡಾ ನಿಗೂಢವಾಗಿ ಸಾವನ್ನಪ್ಪಿದ್ದಾರೆ. ಇವರು ಕೂಡಾ ದೈವ ನರ್ತಕ ಸಮುದಾಯದವರೇ ಅಗಿರುವುದು ಮತ್ತೊಂದು ವಿಶೇಷ.

ಕಾಂಗ್ರೇಸ್ ಕಾರ್ಯಕರ್ತರ ಹೋರಾಟವನ್ನು ಬೆಂಬಲಿಸಲು ಬಂಟ್ವಾಳ ವಿಧಾನಸಭಾ ಕ್ಷೇತ್ರದ ಕಾಂಗ್ರೇಸ್ ನಾಯಕರು ಭಯಪಡುವುದೇಕೇ.? ಪಕ್ಷಕ್ಕಾಗಿ ಹೋರಾಟ ಮಾಡಿ, ವಿರೋಧಿಗಳಿಂದ ಸಾಕಷ್ಟು ಹಿಂಸೆ-ದೌರ್ಜನ್ಯ ಅನುಭವಿಸಿದರೂ ಕಾಂಗ್ರೇಸ್ ನ ಹಿರಿಯ ನಾಯಕರು ಇದನ್ನು ಗಂಭೀರವಾಗಿ ಪರಿಗಣಿಸದಿರಲು ಕಾರಣವೇನು.? ಸಂದರ್ಭ ಮತ್ತು ಅಗತ್ಯ ಬಿದ್ದಾಗ ಕಾರ್ಯಕರ್ತರ ಸಹಿತ “ಹಲವರನ್ನು” ಬಳಸಿಕೊಂಡು ನಂತರ ಬಿಸಾಡುವ ಕಾಂಗ್ರೇಸ್ ಸಂಸ್ಕ್ರತಿಗೆ ಕೊನೆಯೆಂದು.? ಬಂಟ್ವಾಳದ ಕಾಂಗ್ರೇಸ್ ನ ಮುಂಚೂಣಿ ನಾಯಕರು ಬಿಜೆಪಿಯ ಪ್ರಮುಖರೊಂದಿಗೆ ಒಳ ಒಪ್ಪಂದ ಮಾಡಿಕೊಂಡಿದ್ದಾರೆಯೇ.? ಇಂತಹ ಹಲವಾರು ಪ್ರಶ್ನೆಗಳಿಗೆ ಕಾಂಗೈ ನಾಯಕರು ಉತ್ತರಿಸಬೇಕಿದೆ.

ರಾಷ್ಟ್ರೀಯ ಕಾಂಗ್ರೇಸ್ ಪಕ್ಷದ ದ.ಕ ಜಿಲ್ಲೆಯ ಹಿಂದುಳಿದ ವರ್ಗಗಳ ಉಪಾಧ್ಯಕ್ಷ ಪದ್ಮನಾಭ ಸಾಮಂತ್ ರವರ ಮೃತ ದೇಹ ದಿನಾಂಕ 31-03-2024 ರಂದು ಅವರ ಮನೆಯ ಸ್ವಲ್ಪ ದೂರದಲ್ಲಿನ ನಿರ್ಜನ ಗುಡ್ಡ ಪ್ರದೇಶದಲ್ಲಿನ ಮರದ ತುದಿಯಲ್ಲಿ ನೇಣು ಬಿಗಿದ ಸ್ಥಿತಿಯಲ್ಲಿ ಕಂಡು ಬಂದಿದೆ. ಪದ್ಮನಾಭ ಸಾಮಂತ್‌ರವರು ಒಬ್ಬ RTI ಕಾರ್ಯಕರ್ತನಾಗಿದ್ದು, ಬಂಟ್ವಾಳ ತಾಲೂಕಿನಲ್ಲಿನ ಹಲವಾರು ಭ್ರಷ್ಟಚಾರ ಹಗರಣಗಳನ್ನು ಬಯಲಿಗೆಳಂತಹ ವ್ಯಕ್ತಿ. ಬಂಟ್ವಾಳ ಅಕ್ರಮ ಸಕ್ರಮ ಸಮಿತಿ 2018 ರಿಂದ 2023 ರವರೆಗೆ ನಡೆಸಿದಂತಹ ಅಕ್ರಮ-ಸಕ್ರಮ ಭೂ ಮಂಜೂರಾತಿಗೆ ಸಂಬಂಧಪಟ್ಟಂತೆ ಸಮಿತಿಯು ನಡೆಸಿದಂತಹ ಅಕ್ರಮ ವ್ಯವಹಾರಗಳ ಬಗ್ಗೆ ತನಿಖೆ ನಡೆಸುವಂತೆ ಸರಕಾರವನ್ನು ಒತ್ತಾಯಿಸಿ ದೂರು ದಾಖಲಿಸಿದ್ದರು.

ಬಂಟ್ವಾಳ ಕ್ಷೇತ್ರದ ಶಾಸಕರ ಹಿಂಬಾಲಕರೊಬ್ಬರು ಬಂಟ್ವಾಳ ಬೈಪಾಸ್‌ನಲ್ಲಿ ನಿರ್ಮಿಸಿದ ಅನಧಿಕೃತ ಕಟ್ಟಡದ ವಿರುದ್ದ ಜಿಲ್ಲಾಧಿಕಾರಿಗಳಿಗೆ ದೂರು ಸಲ್ಲಿಸಿ, ಬಂಟ್ವಾಳ ಪುರಸಭಾ ಮುಖ್ಯಾಧಿಕಾರಿಯವರ ವಿರುದ್ದ ಕ್ರಮಕೈಗೊಳ್ಳುವಂತೆ ದೂರು ನೀಡುವಲ್ಲಿ ಕೂಡ ಪ್ರಮುಖ ಪಾತ್ರ ವಹಿಸಿದ್ದರು. ಬಂಟ್ವಾಳ ಕ್ಷೇತ್ರದ ಹಲವಾರು ಕಡೆಗಳಲ್ಲಿ ಕಳಪೆ ರಸ್ತೆ ಡಾಮಾರೀಕರಣ, ಕಾಂಕ್ರೀಟಿಕರಣ ಬಗ್ಗೆ ಸಾರ್ವಜನಿಕರ ಪರವಾಗಿ ಧ್ವನಿ ಎತ್ತಿದ ವ್ಯಕ್ತಿ ಸಾಮಂತ್. ಸಿದ್ದಕಟ್ಟೆ ವ್ಯವಸಾಯ ಸಹಕಾರಿ ಸಂಘದ ಅಧ್ಯಕ್ಷರ ಬ್ಯಾಂಕ್ ಅವ್ಯವಹಾರಗಳ ಬಗ್ಗೆ ಸಾಮಾಜಿಕ ಜಾಲತಾಣಗಳಲ್ಲಿ ಸಾರ್ವಜನಿಕವಾಗಿ ಪ್ರಶ್ನೆಯನ್ನು ಮಾಡಿದ್ದರು. ಹೀಗೆ ತಾಲೂಕಿನಾಧ್ಯಂತ ನಡೆಯುತ್ತಿದ್ದ ಅಕ್ರಮ ಚಟುವಟಿಕೆಗಳ ಬಗ್ಗೆ ಪ್ರಶ್ನೆಯನ್ನು ಮಾಡುತ್ತಾ ಭ್ರಷ್ಟಚಾರಿಗಳ ಜನ್ಮಜಾಲಾಡಿದ್ದರು.

ಪದ್ಮನಾಭ ಸಾಮಂತ್‌ ಒಬ್ಬ ಧೃಡ ಮನಸ್ಸಿನ ವ್ಯಕ್ತಿ, ಅಂಜುಬುರುಕನಲ್ಲ. ಯಾವುದೇ ರೀತಿಯಲ್ಲಿ ಆತ್ಮಹತ್ಯೆ ಮಾಡತಕ್ಕಂತಹ ದುರ್ಬಲ ಮನಸ್ಸಿನ ವ್ಯಕ್ತಿಯಲ್ಲ ಎಂಬುದು ಸಾರ್ವಜನಿಕ ವಲಯದಲ್ಲಿ ಕೇಳಿ ಬರುತ್ತಿರುವ ವಿಚಾರವಾಗಿರುತ್ತದೆ. ಆದರೆ ಅವರ ಸಾವಿನ ರೀತಿ ಮತ್ತು ಮೃತದೇಹದ ಸ್ಥಿತಿಗತಿ ಅವರ ಸಾವಿನ ಬಗ್ಗೆ ಸಂಶಯವನ್ನು ವ್ಯಕ್ತಪಡಿಸುತ್ತಿದೆ. ಅವರು ಕೆಲವೊಂದು ರಾಜಕೀಯ ಪ್ರಭಾವಿ ವ್ಯಕ್ತಿಗಳ ವಿರುದ್ದ ಮತ್ತು ಅವರ ಅಕ್ರಮಗಳ ವಿರುದ್ದ ಯಾವುದೇ ಮುಲಾಜಿಲ್ಲದೆ ಸಂಬಂಧಿಸಿದ ಮೇಲಾಧಿಕಾರಿಗಳಿಗೆ ದೂರನ್ನು ಸಲ್ಲಿಸುತ್ತಾ ಇದ್ದರು. ಆ ಕಾರಣಕ್ಕಾಗಿ ಪದ್ಮನಾಭ ಸಾಮಂತ್‌ರವರಿಗೆ ನಿರಂತರ ಕೊಲೆ ಬೆದರಿಕೆ ಕರೆಗಳು ಬರುತ್ತಿದ್ದವು. ಮೇಲಾಧಿಕಾರಿಗಳಿಗೆ ದೂರನ್ನು ಸಲ್ಲಿಸಿ ಸೂಕ್ತ ರಕ್ಷಣೆ ಕೋರಿದ್ದರು. ಈ ಎಲ್ಲಾ ಸನ್ನಿವೇಶಗಳು ಪದ್ಮನಾಭ ಸಾಮಂತ್‌ರವರ ಸಾವಿನ ಬಗ್ಗೆ ಅನುಮಾನ, ಸಂಶಯ ಹುಟ್ಟುತ್ತಿದೆ. ರಾಜಕೀಯ ವಲಯದಲ್ಲಿ ಕೂಡ ಅವರ ಮೇಲೆ ವೈಯಕ್ತಿಕ ದ್ವೇಷವನ್ನು ಹೊಂದಿದ್ದ ವ್ಯಕ್ತಿಗಳು ಅವರ ಸಾವಿನ ಕೆಲವು ದಿನಗಳ ಹಿಂದೆ ಸಾಮಾಜಿಕ ಜಾಲತಾಣದಲ್ಲಿ ಅವಹೇಳನಕಾರಿಯಾಗಿ, ಅಪಮಾನಕಾರಕವಾಗಿ, ನಿಂದನಕಾರಿಯಾಗಿ ಮತ್ತು ಅಪಹಾಸ್ಯದ ಸುದ್ದಿಗಳನ್ನು ಪದ್ಮನಾಭ ಸಾಮಂತ್‌ರವರ ವಿರುದ್ಧ ಸಾಮಾಜಿಕ ಜಾಲತಾಣದಲ್ಲಿ ಬಿತ್ತರಿಸಿದ್ದರು. ಈ ಎಲ್ಲದರ ಬಗ್ಗೆ ಸೂಕ್ತ ರೀತಿಯ ತನಿಖೆಯ ಅಗತ್ಯವಿರುತ್ತದೆ. ಆದುದರಿಂದ ವ್ಯಾಪಕ ಚರ್ಚೆಗೆ ಕಾರಣವಾಗಿರುವ ಪದ್ಮನಾಭ ಸಾಮಂತ್‌ರವರ ಸಾವು ಹೇಗೆ ಸಂಭವಿಸಿತೆಂದು, ಹತ್ಯೆಯ ಹಿಂದಿನ ಕಾಣದ ಕೈಗಳನ್ನು ಕಂಡುಹಿಡಿಯಲು ಪ್ರತ್ಯೇಕ ವಿಶೇಷ ಪೋಲಿಸ್ ತಂಡವನ್ನು ರಚಿಸಿ ತನಿಖೆ ಮಾಡಬೇಕೆಂಬುದು ಸಾರ್ವಜನಿಕರ ಆಗ್ರಹ. ‘ಕಾಂತಾರ’ ಸಿನಿಮಾ ರೀಲ್ ಕಥೆಯಾದರೆ, ‘ಸಾಮಂತ್’ ರದ್ದು ‘ಕಾಂತಾರ’ ಸಿನಿಮಾವನ್ನೇ ಹೋಲುವ ರಿಯಲ್ ಸ್ಲೋರಿ. ಕಾಂತಾರಕ್ಕೂ ಸಾವಂತರ ಸಾವಿಗೂ ಸಾಮ್ಯತೆ ಕಂಡು ಬರುತ್ತದೆ. ಕಾಂತಾರದಲ್ಲಿ ಒಂದು ಸಾವಿನ ನಂತರದ ಕ್ಲೈಮ್ಯಾಕ್ಸ್‌ಗಾಗಿ ಪ್ರೇಕ್ಷಕರು ಕಾದು ಕುಳಿತರೆ, ಪದ್ಮನಾಭ ಸಾವಂತರ ಸಾವಿನ ಕಥಾನಕ ಯಾವ ಕ್ಲೈಮ್ಯಾಕ್ಸ್‌ನತ್ತ ಕೊಂಡೊಯ್ಯುತ್ತೋ ಎಂಬುದು ಕುತೂಹಲ.