ಬಿಟ್ ಕಾಯಿನ್ ಪ್ರಕರಣ; ಡಿಜಿಪಿ ದರ್ಜೆಯ ಪೊಲೀಸ್ ಅಧಿಕಾರಿಯ ಮಗನ ವಿಚಾರಣೆ

ರಾಜ್ಯ

ಬಿಟ್ ಕಾಯಿನ್ ಹಗರಣ ಸಂಬಂಧ ವಿಶೇಷ ತನಿಖಾ ದಳ ಅಧಿಕಾರಿಗಳು ಈಗಾಗಲೇ ಮತ್ತೊಮ್ಮೆ ಹ್ಯಾಕರ್ ಶ್ರೀಕಿಯನ್ನು ಬಂಧಿಸಿದ್ದಾರೆ. ಇನ್ನು ಮತ್ತೊಂದೆಡೆ ಬಿಟ್ ಕಾಯಿನ್ ಹಗರಣದಲ್ಲಿ ಪೊಲೀಸ್ ಅಧಿಕಾರಿಯ ಮಗನ ವಿಚಾರಣೆ ಕೂಡ ನಡೆಯುತ್ತಿದೆ. ಎಸ್‌ಐಟಿ ಅಧಿಕಾರಿಗಳು ಡಿಜಿಪಿ ದರ್ಜೆಯ ಅಧಿಕಾರಿಯ ಮಗ ರಿಷಬ್ ಎಂಬುವವರ ವಿಚಾರಣೆ ನಡೆಸಿದ್ದಾರೆ. 2016 ರಿಂದ 2017ರ ಅವಧಿಯಲ್ಲಿ ನಡೆದಿದ್ದ ವ್ಯವಹಾರದ ಬಗ್ಗೆ ವಿಚಾರಣೆ ನಡೆಸಲಾಗುತ್ತಿದೆ.

ಈ ವೇಳೆ ಶ್ರೀಕಿ 5.5 ಕೋಟಿ ಮೌಲ್ಯದ 150 ಬಿಟ್ ಕಾಯಿನ್‌ಗಳ ವ್ಯವಹಾರ ನಡೆಸಿದ್ದ. ಈ ವ್ಯವಹಾರವನ್ನು ಕೊಲ್ಕತ್ತಾದ ರಾಬಿನ್ ಖಂಡೇವಾಲ ಮೂಲಕ ಮಾಡಿಸಿದ್ದ. ಈ ವೇಳೆ ಲ್ಯಾವೆಲ್ಲಿ ರಸ್ತೆಯ ಫ್ರಂಡ್ಲಿ ಆಟೋಮೋಟಿವ್ಸ್‌ನಿಂದ 57 ಲಕ್ಷ ರೂಪಾಯಿ ಬೆಲೆಯ ಕಾರು ಖರೀದಿ ಮಾಡಿದ್ದರು. ನಂತರ ಕಬ್ಬನ್‌ಪಾರ್ಕ್ ವ್ಯಾಪ್ತಿಯ ಫರ್ಜಿ ಕೆಫೆ ಗಲಾಟೆಯಲ್ಲಿ ಶ್ರೀಕಿ, ನಲಪಾಡ್ ಸೇರಿ ಆರೇಳು ಜನರು ಭಾಗಿಯಾಗಿದ್ದು, ಬಳಿಕ ಜೆಪಿ ನಗರದಲ್ಲಿ ಶ್ರೀಕಿ ಇಟ್ಟುಕೊಂಡಿದ್ದ ಪೋರ್ಶೆ ಕಾರನ್ನು ವಾಪಸ್ಸು ನೀಡಿದ್ದ. ಈ ಸಮಯದಲ್ಲಿ 40 ಲಕ್ಷದ ಚೆಕ್ ಅನ್ನು ರಿಷಬ್ ಹೆಸರಿಗೆ ಪಡೆಯಲಾಗಿತ್ತು. ಅಕ್ರಮವಾಗಿ ಸಂಪಾದನೆ ಮಾಡಿದ್ದ ಬಿಟ್ ಕಾಯಿನ್‌ನಿಂದ ಖರೀದಿ ಮಾಡಿ ಮಾರಾಟ ಮಾಡಿ ಹಣ ಪಡೆದ ಆರೋಪ ಡಿಜಿಪಿ ದರ್ಜೆಯ ಅಧಿಕಾರಿಯ ಮಗ ರಿಷಬ್ ಮೇಲೆ ಇದೆ. ಈ ಹಿನ್ನೆಲೆ ಎಸ್‌ಐಟಿ ಅಧಿಕಾರಿಗಳು ಆತನನ್ನು ನಿನ್ನೆ ವಿಚಾರಣೆ ನಡೆಸಿದ್ದಾರೆ. ಅಲ್ಲದೆ ಮತ್ತೆ ವಿಚಾರಣೆಗೆ ಬರುವಂತೆ ಸೂಚಿಸಿದ್ದಾರೆ ಎನ್ನಲಾಗಿದೆ.