ಮೂಡಿಗೆರೆ : ಇಲ್ಲಿನ ಹೊರವಲಯದಲ್ಲಿ ಮೆಸ್ಕಾಂ ಲಾರಿ-ಮಾರುತಿ ವ್ಯಾನ್ ಮಧ್ಯೆ ಭೀಕರ ಅಪಘಾತ ಸಂಭವಿಸಿದೆ. ಅಪಘಾತದ ತೀವ್ರತೆಗೆ ವ್ಯಾನ್ ಗುರುತು ಹಿಡಿಯಲಾರದಷ್ಟು ಛಿದ್ರಗೊಂಡಿದ್ದು ಮೂವರು ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಮತ್ತೋರ್ವ ಪ್ರಯಾಣಿಕ ಆಸ್ಪತ್ರೆಗೆ ಸಾಗಿಸುವ ದಾರಿ ಮಧ್ಯೆಯೇ ಸಾವನ್ನಪ್ಪಿದ್ದಾರೆ.

ಚಿತ್ರದುರ್ಗ ಮೂಲದವರು ಮಾರುತಿ ವ್ಯಾನ್ ಮತ್ತು ಆಲ್ಟೋ ಕಾರಿನಲ್ಲಿ ಧರ್ಮಸ್ಥಳ ಯಾತ್ರೆ ಮುಗಿಸಿ ಊರಿಗೆ ಹಿಂತಿರುಗುತ್ತಿದ್ದಾಗ ಮಾರುತಿ ವ್ಯಾನ್ ಗೆ ಮೂಡಿಗೆರೆಯಿಂದ ಕೊಟ್ಟಿಗೆಹಾರಕ್ಕೆ ಬರುತ್ತಿದ್ದ ಮೆಸ್ಕಾಂ ಲಾರಿ ಬಣಕಲ್ ಸಮೀಪ ಮುಖಾಮುಖಿಯಾಗಿ ಡಿಕ್ಕಿ ಹೊಡೆದಿದೆ. ಇದೇ ಸಂದರ್ಭ ಹಿಂಬದಿಯಲ್ಲಿದ್ದ ಆಲ್ಟೋ ಕಾರು ಕೂಡಾ ಅಪಘಾತಕ್ಕೀಡಾಗಿದ್ದರೂ ಅದೃಷ್ಟವಶಾತ್ ಸಣ್ಣ ಪುಟ್ಟ ಗಾಯಗಳೊಂದಿಗೆ ಪ್ರಾಣಾಪಾಯದಿಂದ ಪಾರಾಗಿದ್ದಾರೆ.
