ಸುರತ್ಕಲ್: ಮತ್ತೆ ತಲವಾರು ಕಾಳಗ

ಕರಾವಳಿ

ಮನೋಜ್ ಕೋಡಿಕೆರೆ ತಂಡದ ಕೃತ್ಯ

ಕೆಲವು ಸಮಯಗಳಿಂದ ಶಾಂತವಾಗಿದ್ದ ಸುರತ್ಕಲ್ ನಲ್ಲಿ ಇದೀಗ ಮತ್ತೆ ತಲವಾರು ಕಾಳಗ ನಡೆದಿದ್ದು, ಸ್ಥಳೀಯ ಜನತೆಯಲ್ಲಿ ಭಯಭೀತಿಯನ್ನು ಸೃಷ್ಟಿಸಿದೆ. ನಿನ್ನೆ ತಡರಾತ್ರಿ ಮನೋಜ್ ಕೋಡಿಕೆರೆ ತಂಡದ ಸದಸ್ಯರು ವೈಯುಕ್ತಿಕ ದ್ವೇಷದಿಂದ ರೌಡಿ ಶೀಟರ್ ಭರತ್ ಶೆಟ್ಟಿ ಮೇಲೆ ತಲವಾರು ದಾಳಿ ನಡೆಸಿದ್ದು, ಪವಾಡಸದೃಶವಾಗಿ ಪ್ರಾಣಾಪಾಯದಿಂದ ಪಾರಾಗಿದ್ದಾನೆ.

ಸುರತ್ಕಲ್ ಪೊಲೀಸ್ ಠಾಣೆ ವ್ಯಾಪ್ತಿಯ ಕುಳಾಯಿ ಯಲ್ಲಿ ತನ್ನ ಸ್ನೇಹಿತನೊಂದಿಗೆ ಬಾರ್ ಗೆ ಬಂದಿದ್ದ ಭರತ್ ಶೆಟ್ಟಿ ಮೇಲೆ ಮನೋಜ್ ಕೋಡಿಕೆರೆ ತಂಡದ ಸದಸ್ಯರಾದ ಕಿಶನ್, ಚೇತು ಪಡೀಲ್, ರಾಜು ಫರಂಗಿಪೇಟೆ, ಗುಜ್ಜೆ ಶೈಲೇಶ್ ಕಾರನ್ನು ಡಿಕ್ಕಿ ಹೊಡೆಯಿಸಿ ಕೊಲ್ಲಲು ಪ್ರಯತ್ನಿಸಿದ್ದು, ಅಪಾಯದ ಅರಿವಾದಾಗ ಭರತ್ ಶೆಟ್ಟಿ ಓಡಿ ಹೋಗಲು ಯತ್ನಿಸಿದಾಗ ಏಕಾಏಕಿ ತಲವಾರು ಬೀಸಿದ್ದಾರೆ. ತಲವಾರಿನ ರಭಸಕ್ಕೆ ಭರತ್ ಶೆಟ್ಟಿ ಯ ಎಡಕೈಯ ಮೂರು ಬೆರಳು ತುಂಡಾಗಿ ಬಿದ್ದಿದ್ದು, ಕೂಡಲೇ ಸ್ಥಳೀಯರು ಆಸ್ಪತ್ರೆಗೆ ದಾಖಲಿಸಿದ್ದಾರೆ. ಈ ಬಗ್ಗೆ ಭರತ್ ಶೆಟ್ಟಿ ಮನೀಶ್ ಪೂಜಾರಿ, ಮನೋಜ್ ಕೋಡಿಕೆರೆ ತಂಡದ ಸದಸ್ಯರ ಮೇಲೆ ಸುರತ್ಕಲ್ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದಾರೆ.