ರಾಷ್ಟ್ರೀಯ ಹೆದ್ದಾರಿಯ ಎರಡೂ ಬದಿಯ ಸೇತುವೆಗಳಿಗೆ ಗಂಢಾಂತರ ತಪ್ಪಿದ್ದಲ್ಲ.!
ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಅಕ್ರಮ ಮರಳು ದಂಧೆ ವ್ಯಾಪಕವಾಗಿ ನಡೆಯುತ್ತಿದ್ದು, ಇದನ್ನು ನಿಯಂತ್ರಿಸುವಲ್ಲಿ ಅಧಿಕಾರಿ ವರ್ಗ ಸಂಪೂರ್ಣ ವಿಫಲವಾಗಿದೆ. ಸರಕಾರದ ಅಧಿಕೃತ ಕಾನೂನುಗಳನ್ನು ಕಸದ ಬುಟ್ಟಿಗೆ ಎಸೆದು ಪ್ರಭಾವಿಗಳು ತಮಗೆ ಬೇಕಾದ ರೀತಿಯಲ್ಲಿ ಕಾನೂನುಗಳನ್ನು ರಚಿಸಿ ಅಧಿಕಾರಿ ವರ್ಗಕ್ಕೆ ‘ಮಾಮೂಲಿ’ ಸಂದಾಯ ಮಾಡಿ ಮರಳನ್ನು ದೋಚುತ್ತಿದ್ದಾರೆ. ಸರಕಾರದ ಖಜಾನೆಗೆ ವಂಚನೆ ಮಾಡಿ ಜೇಬನ್ನು ತುಂಬಿಸಿಕೊಳ್ಳುವ ಈ ದಂಧೆಕೋರರನ್ನು ನಿಯಂತ್ರಿಸುವ ತಾಕತ್ತು, ಧೈರ್ಯ ಎರಡನ್ನೂ ಎಂಜಲು ಕಾಸಿಗೆ ಅಧಿಕಾರಿಗಳು ಮಾರಿಕೊಂಡಿದ್ದಾರೆಂದು ಜನ ರಾಜಾರೋಷವಾಗಿಯೇ ಮಾತನಾಡುವಂತಾಗಿದೆ. ಕಾನೂನು ಬಾಹಿರವಾಗಿ ಮರಳು ದೋಚುತ್ತಿದ್ದರೂ ಭೂ ಮತ್ತು ಗಣಿ ವಿಜ್ಞಾನ ಇಲಾಖೆಯ ಅಧಿಕಾರಿಗಳು ನೋಡಿಯೂ ನೋಡದಂತೆ ಹೋಗುತ್ತಿದ್ದಾರೆ. ಇದರ ಮರ್ಮವೇನು? ಎಂದು ಸಾರ್ವಜನಿಕರು ಪ್ರಶ್ನಿಸುತ್ತಿದ್ದಾರೆ.
ಮತ್ತೊಂದು ವಿಶೇಷವೆಂದರೆ ಅಕ್ರಮವಾಗಿ ದಂಧೆ ನಡೆಸುವಾಗ ಇವರುಗಳಿಗೆ ಪಾರ್ಟಿ, ಪಕ್ಷ, ಜಾತಿ-ಧರ್ಮ ಬರುವುದಿಲ್ಲ. ಬಾರಿ ಸೌಹಾರ್ಧತೆ..!! ಆಡಳಿತ ಹಾಗೂ ವಿರೋಧ ಪಕ್ಷದಲ್ಲಿರುವ ಎರಡೂ ಖದೀಮರು ಒಟ್ಟಾಗಿಯೇ ಈ ದಂಧೆ ನಡೆಸುತ್ತಾರೆ. ಹೆಸರಿಗೆ ಮಾತ್ರ ಸಿಸಿ ಕ್ಯಾಮೆರಾ ಇದೆಯೇ ವಿನಃ ಅದು ಕೆಲಸ ಮಾಡುತ್ತಿಲ್ಲ. ಇದು ಒಟ್ಟಾರೆ ಪರಿಸ್ಥಿತಿ.

ಇನ್ನು ಗುರುಪುರ ನದಿಯ ಪರಿಸ್ಥಿತಿ ಹೇಳತೀರಂದತವು. ಗುರುಪುರ ನದಿಯ ಎರಡು ಬ್ರಿಡ್ಜ್ ಗಳ ನಡುವಿನ ಕದುರು ಜಾಗದಲ್ಲಿ ಅಕ್ರಮವಾಗಿ ಮರಳು ಲೂಟಿ ರಾಜಾರೋಷವಾಗಿ ನಡೆಯುತ್ತಿದ್ದರೂ ಸಂಬಂಧಪಟ್ಟ ಇಲಾಖೆ ಕಣ್ಣಿದ್ದು ಕುರುಡರಂತೆ ವರ್ತಿಸುತ್ತಿದೆ. ಈ ಪ್ರದೇಶದಲ್ಲಿ ರಾಷ್ಟ್ರೀಯ ಹೆದ್ದಾರಿಯ ಕಾಮಗಾರಿ ನಡೆಯುತ್ತಿದ್ದರೂ ರಾತ್ರಿ ಸಮಯ 10 ರಿಂದ ಬೆಳಗಿನ ಜಾವ 5ರ ತನಕ ಕನಿಷ್ಠ ಹತ್ತಾರು ನಾಡದೋಣಿಗಳನ್ನು ಬಳಸಿ ಒಂದು ಗುಂಪು ಅಕ್ರಮವಾಗಿ ನೂರಾರು ಲೋಡು ಮರಳನ್ನು ನಿರಂತರವಾಗಿ ಲೂಟಿಗೈದು, ಅಲ್ಲೇ ಪಕ್ಕದಲ್ಲಿರುವ ಪ್ರಭಾವಿ ಗುತ್ತಿಗೆದಾರರೊಬ್ಬರ ಪ್ಲಾಂಟಿಗೆ ಈ ಮರಳು ಜಮಾವಣೆಯಾಗುತ್ತಿರುವುದು ಸ್ಥಳೀಯವಾಗಿ ಸುದ್ದಿಯಲ್ಲಿರುವ ವಿಚಾರ. ವಿರೋಧ ಪಕ್ಷದ ಪ್ರಮುಖರೊಬ್ಬರು ಇವರ ಬೆನ್ನಿಗೆ ನಿಂತಿದ್ದು, ಇವರ ಅಕ್ರಮ ದಂಧೆಗೆ ಸಾಥ್ ನೀಡುತ್ತಿದ್ದಾರೆ ಅನ್ನುವ ಮಾತುಗಳು ಕೇಳಿ ಬರುತ್ತಿವೆ. ಇದನ್ನು ಪ್ರಶ್ನಿಸಿದರೆ ಮಾಮೂಲಿ ನೀಡಿ ಬಾಯ್ಮುಚ್ಚಿಸುತ್ತಾರೆ ಅನ್ನುವ ಮಾತುಗಳು ಹರಿದಾಡುತ್ತಿವೆ. ಇವರ ಅಕ್ರಮ ಮರಳು ಲೂಟಿಗೆ ಸ್ಥಳೀಯರು ಬೇಸತ್ತಿದ್ದು, ಪ್ರಭಾವ ಬಳಸಿ ತಮ್ಮ ದಂಧೆಯನ್ನು ಚಾಲೂ ಇಟ್ಟಿದ್ದಾರೆ ಅನ್ನಲಾಗುತ್ತಿದೆ. ಸೇತುವೆ ಪಕ್ಕದಲ್ಲಿಯೇ ಇವರು ಅಕ್ರಮ ಮರಳು ಲೂಟಿಗೆ ಮುಂದಾಗಿರುವುದರಿಂದ ಮೂಲರಪಟ್ನ ಸೇತುವೆ ಪರಿಸ್ಥಿತಿ ಗುರುಪುರಕ್ಕೆ ಬರಬಹುದೋ ಅನ್ನುವ ಆತಂಕ ಎದುರಾಗಿದೆ. ಜಿಲ್ಲಾಡಳಿತ ಹಾಗೂ ಗಣಿ ಮತ್ತು ಭೂ ವಿಜ್ಞಾನ ಇಲಾಖೆ ಈ ಬಗ್ಗೆ ಸೂಕ್ತ ಕ್ರಮ ವಹಿಸುವಂತೆ ನಾಗರೀಕರು ಆಗ್ರಹಿಸುತ್ತಿದ್ದಾರೆ.

ಇಂತಹ ಅಕ್ರಮಕೋರರ ವಿರುದ್ಧ ಮಾಹಿತಿ ನೀಡಿದವರ ಮೇಲೆಯೇ ಕೆಲವೊಮ್ಮೆ ವೈಯಕ್ತಿಕ ದಾಳಿ ನಡೆಯುವ ಸಂಗತಿಗಳೂ ಇವೆ. ಒಟ್ಟಾರೆ ಅಕ್ರಮ ವ್ಯವಹಾರದಲ್ಲಿ ಪ್ರಮುಖ ಪಕ್ಷಗಳ ನಾಯಕರ ಭಾಯಿ ಭಾಯಿ ಸಂಬಂಧದಿಂದಾಗಿ ಪ್ರಶ್ನಿಸುವವರೇ ಇಲ್ಲವಾಗಿದೆ. ಅಕ್ರಮ ಮರಳುಗಾರಿಕೆಯಿಂದ ಜಿಲ್ಲೆಗಾದ ನಷ್ಟ ಅಷ್ಟಿಷ್ಟಲ್ಲ. ಮೂಲರಪಟ್ನದಲ್ಲಿ ಸೇತುವೆ ಕುಸಿಯಲು ಮುಖ್ಯ ಕಾರಣವೇ ಅಕ್ರಮ ಮರಳುಗಾರಿಕೆ. ಸೇತುವೆ ತಳಭಾಗದಲ್ಲಿ ಮರಳು ತೆಗೆದ ಪರಿಣಾಮ ಸೇತುವೆಯೇ ಕುಸಿದುಬಿದ್ದಿತ್ತು. ಇದರ ಪರಿಣಾಮ ಈ ಭಾಗದ ಜನತೆ ಮೂರು-ನಾಲ್ಕು ವರ್ಷಗಳ ಸಂಕಷ್ಟಕ್ಕೊಳಗಾದರು. ಕೆಲವು ಸಮಯಗಳ ಹಿಂದೆ ಬಜ್ಪೆ ವಿಮಾನ ನಿಲ್ದಾಣ ಸಂಪರ್ಕದ ಮರವೂರು ಸೇತುವೆ ಕೂಡ ಕಂಪಿಸಿ ವಾಲಿತ್ತು. ಇದಕ್ಕೆಲ್ಲಾ ಅಲ್ಲಿ ನಡೆಸುತ್ತಿದ್ದ ಅಕ್ರಮ ಮರಳುಗಾರಿಕೆಯೇ ಕಾರಣವಾಗಿತ್ತು. ಇದೀಗ ಗುರುಪುರ ಪಲ್ಗುಣಿ ನದಿಗೆ ಅಡ್ಡವಾಗಿ ನಿರ್ಮಿಸಿರುವ ಹಾಗೂ ರಾಷ್ಟ್ರೀಯ ಹೆದ್ದಾರಿಯ ನಡು ಭಾಗದ ಕುದುರು ಪ್ರದೇಶದಲ್ಲಿ ನಡೆಯುವ ಅಕ್ರಮ ಮಾರಳುಗಾರಿಕೆಯಿಂದ ಎರಡೂ ಬದಿಯ ಸೇತುವೆಗಳಿಗೂ ಗಂಡಾಂತರ ತಪ್ಪಿದ್ದಲ್ಲ.!
