ಒಂದೇ ವರ್ಷದಲ್ಲಿ ಬರೋಬ್ಬರಿ 326 ಬಾಲೆಯರು ಮದುವೆಗೂ ಮುನ್ನವೇ ಗರ್ಭಿಣಿಯಾಗಿದ್ದಾರೆ ಎಂಬ ಅಘಾತಕಾರಿ ಸಂಗತಿಯೊಂದು ಹೊರಬಿದ್ದಿದೆ.

ರಾಜ್ಯ

ತುಮಕೂರು ಜಿಲ್ಲೆಯಿಂದ ಆಘಾತಕಾರಿ ಅಂಶವೊಂದು ಹೊರ ಬಿದ್ದಿದ್ದು, ಒಂದೇ ವರ್ಷದಲ್ಲಿ ಬರೋಬ್ಬರಿ 326 ಬಾಲೆಯರು ಮದುವೆಗೂ ಮುನ್ನವೇ ಗರ್ಭಿಣಿಯಾಗಿದ್ದಾರೆ ಎಂಬ ಅಘಾತಕಾರಿ ಸಂಗತಿಯೊಂದು ಹೊರಬಿದ್ದಿದೆ. ಇವರಲ್ಲಿ ನಾಲ್ವರು ಬಾಲಕಿಯರು 11 ವರ್ಷಕ್ಕಿಂತಲೂ ಚಿಕ್ಕವರು ಎಂಬ ವಿಲಕ್ಷಣ ಅಂಶ ಸಮಾಜವನ್ನು ಆತಂಕಕ್ಕೆ ಹೂಡುವಂತೆ ಮಾಡಿದೆ. ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯೇ ಈ ಅಂಕಿ-ಅಂಶವನ್ನು ಬಹಿರಂಗೊಳಿಸಿದೆ.

ಇಂತಹ ಅನಾಹುತಕ್ಕೆ ಕಾರಣವಾಗುತ್ತಿರುವುದೇನು.?
ಜನರಲ್ಲಿ ಶಿಕ್ಷಣದ ಕೊರತೆ, ಮೊಬೈಲ್ ಬಳಕೆ, ತಂದೆ ತಾಯಿಗಳ ನಿರ್ಲಕ್ಷ್ಯದಿಂದ ಮಕ್ಕಳು ತಪ್ಪು ದಾರಿ ತುಳಿದಿದ್ದು ಚಿಕ್ಕವಯಸ್ಸಿನಲ್ಲೇ ಅನೈತಿಕವಾಗಿ ಗರ್ಭಧರಿಸುತಿದ್ದಾರೆ. ಇದರಲ್ಲಿ ಅತ್ಯಾಚಾರದಿಂದಲೂ ಗರ್ಭಧರಿಸಿದ ಪ್ರಕರಣಗಳು ಕೂಡ ಇವೆ. ಬಾಲಕಿಯರ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ ಆರೋಪದಡಿ 125 ಮಂದಿ ಜೈಲು ಪಾಲಾಗಿದ್ದಾರೆ ಎಂದು ವರದಿಯಲ್ಲಿ ಉಲ್ಲೇಖಿಸಲಾಗಿದೆ.

ಒಂದೆಡೆ ಬಾಲ್ಯ ವಿವಾಹ, ಮತ್ತೊಂದೆಡೆ ಮದುವೆಗೂ ಮೊದಲು ಪ್ರೀತಿ ಪ್ರೇಮದ ಹೆಸರನಲ್ಲಿ ಲೈಂಗಿಕ ಸಾಂಗತ್ಯ, ಇವೆಲ್ಲವೂ ಹದಿ ಹರೆಯದ ಬಾಲೆಯರಲ್ಲಿ ಗರ್ಭಧಾರಣೆಗೆ ಕಾರಣವಾಗಿದೆ. ಕೆಲವು ಪ್ರಕರಣಗಳಲ್ಲಿ ಅನೈತಿಕವಾಗಿ ಹುಟ್ಟಿದ ಮಗುವನ್ನು ಮಾರಾಟ ಮಾಡಿ ಕರುಳ ಬಳ್ಳಿಯ ಸಂಬಂಧ ಕಡಿದುಕೊಂಡು ನಿರಾಳವಾಗಿ ಇದ್ದ ಪ್ರಕರಣವೂ ಬೆಳಕಿಗೆ ಬಂದಿದೆ. ಅಪ್ರಾಪ್ತ ಬಾಲಕಿಯನ್ನು ಮದುವೆಯಾಗಿ, ಲೈಂಗಿಕ ಸಂಬಂಧ ಇಟ್ಟುಕೊಂಡರೂ ಸಹ ಅದನ್ನು ಅತ್ಯಾಚಾರ ಪ್ರಕರಣವೆಂದೇ ಪರಿಗಣಿಸಲಾಗುತ್ತದೆ.

ಪೋಕ್ಸೋ ಪ್ರಕರಣದಲ್ಲಿ ಜೈಲಿನಲ್ಲಿರುವ ಹೆಚ್ಚಿನ ಜನರಲ್ಲಿ ಸಂತ್ರಸ್ತ ಹೆಣ್ಣು ಮಕ್ಕಳ ತಂದೆ, ಸಹೋದರ, ಸಂಬಂಧಿಕರು, ಶಿಕ್ಷಕರು, ಸ್ವಾಮೀಜಿಗಳು ಇದ್ದಾರೆ. ಕೆಲವರು ಎರಡನೇ ಬಾರಿಗೆ ಜೈಲು ಸೇರಿದ್ದಾರೆ. ಒಟ್ಟಾರೆ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಬಹಿರಂಗಪಡಿಸಿದ ಅಂಕಿ ಅಂಶ ನಿಜಕ್ಕೂ ನಾಗರಿಕರ ತಲೆ ತಗ್ಗಿಸುವಂತೆ ಮಾಡಿದೆ. ಇನ್ನೊಂದೆಡೆ ಹೆಣ್ಣುಮಕ್ಕಳ ಪೋಷಕರಲ್ಲಿ ಆತಂಕ ಹುಟ್ಟಿಸಿದೆ. ಏನೇ ಆಗಲಿ ಪೋಷಕರು ಎಚ್ಚರಿಕೆ ವಹಿಸಿದರೆ ಇಂತಹ ಪ್ರಕರಣಗಳ ಪ್ರಮಾಣ ಕಡಿಮೆ ಮಾಡಲು ಸಾಧ್ಯ.