ಜನಪ್ರತಿನಿಧಿಗಳ ಬೆಂಬಲದ ಖಾಸಗೀ ಶಿಕ್ಷಣ ಸಂಸ್ಥೆಗಳ ಲಾಭಿಗೆ ಸರಕಾರಿ ಕಾಲೇಜುಗಳನ್ನು ಬಲಿಯಾಗಿಸಲಾಗುತ್ತಿದೆ: ಮುನೀರ್ ಕಾಟಿಪಳ್ಳ.

ಕರಾವಳಿ

ಬಡವರ ಮನೆಯ ಮಕ್ಕಳು ಪದವಿ ಶಿಕ್ಷಣ ಪಡೆಯಬೇಕಾದರೆ ಸರಕಾರಿ ಶಾಲಾ, ಕಾಲೇಜುಗಳು ಉಳಿಯಬೇಕು

ಬಡವರ ಮನೆಯ ಮಕ್ಕಳು ತಮ್ಮ ಆಯ್ಕೆಯ ಪದವಿ ಶಿಕ್ಷಣ ಪಡೆಯಬೇಕಾದರೆ ಸರಕಾರಿ ಶಾಲಾ, ಕಾಲೇಜುಗಳು ಉಳಿಯಬೇಕು, ಬಲಗೊಳ್ಳಬೇಕು. ಹಣಕಾಸು, ಅನುದಾನದ ಕೊರತೆಯನ್ನು ಮುಂದಿಟ್ಟು ಕೊಣಾಜೆ, ಬನ್ನಡ್ಕ, ನೆಲ್ಯಾಡಿ ಸಹಿತ ನಾಲ್ಕು ಕಾಲೇಜು ಮುಚ್ಚಲು ಹೊರಟಿರುವುದು ನೆಪ ಮಾತ್ರ. ವಿವಿ ಆಡಳಿತದ ನಡೆಯನ್ನು ನಾಗರೀಕ ಸಮಾಜ ತೀವ್ರವಾಗಿ ವಿರೋಧಿಸಿದೆ. ವಿ.ವಿಯಲ್ಲಿ ಆರ್ಥಿಕ ಮುಗ್ಗಟ್ಟ ಅದಕ್ಕೆ ವಿ.ವಿ ಅಡಳಿತದ ಭ್ರಷ್ಟಾಚಾರ, ಇದನ್ನೆಲ್ಲ ಕಂಡು ಕಣ್ಣು ಮುಚ್ಚಿ ಕೂತ ಜನಪ್ರತಿನಿಧಿಗಳೇ ನೇರ ಕಾರಣ‌. ಈಗ ಪರಿಸ್ಥಿತಿ ಕೈ ಮೀರಿದ್ದು ವಿ.ವಿ. ಘಟಕ ಕಾಲೇಜುಗಳನ್ನು ರಾಜ್ಯ ಸರಕಾರವೇ ತನ್ನ ಅಧೀನಕ್ಕೆ ಪಡೆದು ನಡೆಸಲಿ. ದ.ಕ ಜಿಲ್ಲೆಯಲ್ಲಂತು ಖಾಸಗೀ ಶಿಕ್ಷಣ ಲಾಭಿಯದ್ದೇ ಏಕಸ್ವಾಮ್ಯ. ಧಣಿಕರ ಕಾಲೇಜುಗಳಿಗೆ ವಿದ್ಯಾರ್ಥಿಗಳ ಪೂರೈಸೋದಕ್ಕೋಸ್ಕರವೇ ಬ್ರೋಕರ್ ಗಳು ತುಂಬಿಹೋಗಿದ್ದಾರೆ. ಇನ್ನೊಂದೆಡೆ ಕರ್ನಾಟಕ ವಿಧಾನಸೌಧದೊಳಗೆ ಇರುವ ಶಾಸಕರುಗಳಲ್ಲಿ ಬಹುತೇಕರು ಖಾಸಗೀ ಶಿಕ್ಷಣ ಸಂಸ್ಥೆಗಳನ್ನು ಹೊಂದಿದ್ದಾರೆ. ಇವರುಗಳು ನಡೆಸುವ ಖಾಸಗೀ ಕಾಲೇಜುಗಳ ಲಾಭಿಯ ಧಾಳಿಗೆ ಸರಕಾರಿ ಶಾಲಾ ಕಾಲೇಜುಗಳು ಬಲಿಯಾಗುತ್ತಿವೆ ಎಂದು ಹೋರಾಟಗಾರ, ಯುವಜನ ಮುಖಂಡ ಮುನೀರ್ ಕಾಟಿಪಳ್ಳ ಅವರು ಇಂದು ಮಂಗಳೂರು ವಿ.ವಿ ಮುಂಭಾಗದಲ್ಲಿ ಕೊಣಾಜೆ ಸಹಿತ ಮಂಗಳೂರು ವಿವಿ ಘಟಕ ಕಾಲೇಜುಗಳಾದ ಬನ್ನಡ್ಕ, ನೆಲ್ಯಾಡಿ, ಮಂಗಳೂರು ಸಂಧ್ಯಾ ಕಾಲೇಜುಗಳನ್ನು ಉಳಿಸಲು, ಬಲಪಡಿಸಲು ಒತ್ತಾಯಿಸಿ ಮಂಗಳೂರು ವಿವಿ ಘಟಕ ಪದವಿ ಕಾಲೇಜುಗಳ ಉಳಿಸಿ ಹೋರಾಟ ಸಮಿತಿ ನೇತೃತ್ವದಲ್ಲಿ ನಡೆದ ಸಾಮೂಹಿಕ ಜನಾಗ್ರಹ ಧರಣಿಯನ್ನು ಉದ್ಘಾಟಿಸಿ ಮಾತಾಡುತ್ತಾ ಆರೋಪಿಸಿದರು.

ಸಾಮಾಜಿಕ ಕಾರ್ಯಕರ್ತರಾದ ನಝೀರ್ ಉಳ್ಳಾಲ ಮಾತನಾಡುತ್ತಾ ಶಿಕ್ಷಣದ ಮಾಫಿಯಾ ಬಡವರ ಮಕ್ಕಳ ಶಿಕ್ಷಣದಿಂದ ವಂಚಿತರನ್ನಾಗಿಸುತ್ತಿದೆ. ಶ್ರೀನಿವಾಸ್ ಮಲ್ಯರು ಅಂದು ಪ್ರಾರಂಭಿಸಿದ ಇಂಜನೀಯರಿಂಗ್ ಕಾಲೇಜು ಬಿಟ್ಟರೆ ಈವರೆಗೆ ಒಂದೇ ಒಂದು ಕಾಲೇಜನ್ನು ದ.ಕ. ಜಿಲ್ಲೆಯಲ್ಲಿ ತೆರೆಯಲು ನಮ್ಮನ್ನಾಳುವ ಸರಕಾರಗಳಿಗೆ ಸಾಧ್ಯವಾಗಿಲ್ಲ.

ಕಾರ್ಮಿಕ ಮುಖಂಡ ಬಿ ಶೇಖರ್ ಮಾತನಾಡುತ್ತಾ ಸದ್ಯದ ಪರಿಸ್ಥಿತಿಯಲ್ಲಿ ಬಡವರ ಮನೆಯ ಮಕ್ಕಳಿಗೆ ಖಾಸಗೀ ಕಾಲೇಜುಗಳು ವಿಧಿಸುವ ಶುಲ್ಕವನ್ನು ಬರಿಸಲು ಸಾಧ್ಯವಾಗುತ್ತಿಲ್ಲ. ಅಂತಹ ವಿಭಾಗದ ವಿದ್ಯಾರ್ಥಿಗಳ ಭವಿಷ್ಯದ ಬೆಳವಣಿಗೆಗೆ ವಿವಿಯಂತಹ ಸರಕಾರಿ ಕಾಲೇಜುಗಳು ಉಳಿಯಲೇ ಬೇಕು. ಇಲ್ಲದೇ ಹೋದಲ್ಲಿ ಅವುಗಳ ಉಳಿಗಾಗಿ ನಾವೆಲ್ಲಾ ಸಮಾನ ಮನಸ್ಕರು ಜೊತೆಗೂಡಿ ಹೋರಾಟಗಳನ್ನು ತೀವ್ರಗೊಳಿಸಬೇಕಾಗಿದೆ ಎಂದರು.

ಸಾಮಾಜಿಕ ಕಾರ್ಯಕರ್ತ ಅಝೀಝ್ ಮಲಾರ್, ಪ್ರಾಂತ ರೈತ ಸಂಘ ಮುಖಂಡರಾದ ಕೆ ಯಾದವ ಶೆಟ್ಟಿ, ಕಾರ್ಮಿಕ ಮುಖಂಡರಾದ ಎಚ್.ವಿ ರಾವ್, ಬಿ.ಎಮ್ ಭಟ್, ಸುಕುಮಾರ್ ತೊಕ್ಕೊಟ್ಟು, ಕೃಷ್ಣಪ್ಪ ಸಾಲ್ಯಾನ್, ಸುನೀಲ್ ಕುಮಾರ್ ಬಜಾಲ್, ಜಯಂತ ನಾಯ್ಕ್, ಹಿರಿಯ ದಲಿತ ಮುಖಂಡರು ಎಮ್ ದೇವದಾಸ್, ಡಿವೈಎಫ್ಐ ಮುಖಂಡರಾದ ಬಿ.ಕೆ ಇಮ್ತಿಯಾಜ್, ಸಂತೋಷ್ ಬಜಾಲ್, ಮನೋಜ್ ವಾಮಂಜೂರು, ಜಗತ್ಪಾಲ್ ಧರಣಿಯನ್ನು ಉದ್ದೇಶಿಸಿ ಮಾತನಾಡಿದರು.

ಪ್ರತಿಭಟನಾ ಧರಣಿಯಲ್ಲಿ ವಿವಿಧ ಪ್ರಗತಿಪರ ಸಂಘಟನೆಗಳ ಮುಖಂಡರುಗಳು ಉಪಸ್ಥಿತರಿದ್ದರು. ಪ್ರತಿಭಟನಾ ಧರಣಿಯನ್ನು ಹೋರಾಟ ಸಮಿತಿಯ ಸಂಚಾಲಕ ರಿಜ್ವಾನ್ ಹರೇಕಳ ಸ್ವಾಗತಿಸಿ ನಿರೂಪಿಸಿದರು. ಉಪಕುಲಪತಿ ಡಾ. ಪಿ. ಧರ್ಮ, ರಿಜಿಸ್ಟ್ರರ್ ರಾಜು ಮೊಗವೀರ ಧರಣಿ ಸ್ಥಳಕ್ಕೆ ಆಗಮಿಸಿ ಮನವಿ ಸ್ವೀಕರಿಸಿದರು.