ಸುಳ್ಯ: ದೇಶಸೇವೆಗೆ ಮಗಳನ್ನು ಕೊಟ್ಟ ತಾಯಿಯ ಆತ್ಮಸ್ಥೈರ್ಯ ಕುಗ್ಗಿಸುವ ಪ್ರಯತ್ನಕ್ಕೆ ಮುಂದಾದ ವಿರೋಧಿ ಗುಂಪು

ಕರಾವಳಿ

ದೈವದ ವೇಷಧಾರಿಯನ್ನೇ ಬುಕ್ ಮಾಡಿಕೊಂಡು ಜೀವ ಬೆದರಿಕೆ; ನಂಬಿಕೆಯ ಹೆಸರಲ್ಲಿ ಮೋಸ: ಪೊಲೀಸರಿಗೆ ದೂರು

ಮನುಷ್ಯ ತನ್ನ ಲಾಭದ ಸ್ವಾರ್ಥಕ್ಕಾಗಿ ಏನು ಬೇಕಾದರೂ ಮಾಡಬಲ್ಲ. ಆಸೆ-ಆಮೀಷಗಳನ್ನು ನೀಡಿ ತನ್ನ ಸ್ವಾರ್ಥ ಈಡೇರಿಸಬಲ್ಲ. ಆದರೆ ದೈವ ಪಾತ್ರಿಗೆ ಲಂಚಕೊಟ್ಟು ಪಾತ್ರಿಯ ಬಾಯಿಯಿಂದ ತನ್ನ ಲಾಭಕ್ಕಾಗಿ ಆದೇಶ ಹೊರಡಿಸುವಷ್ಟು ಮುಂದುವರಿದಿದ್ದಾನೆ, ಅಂದರೆ ನೀವು ನಂಬಲೇಬೇಕು. ಲಂಚಕ್ಕಾಗಿ ದೈವದ ನೇಮೋತ್ಸವದ ವೇಷಧಾರಿಯನ್ನು ತಮಗೆ ಬೇಕಾದಂತೆ ಬಳಸಿಕೊಳ್ಳುವ ಪ್ರಸಂಗಗಳು ಇತ್ತೀಚೆಗೆ ಜಾಸ್ತಿಯಾಗುತ್ತಿದ್ದು, ನಂಬಿಕೆ ಹೆಸರಿನಲ್ಲಿ ಮೋಸ ಮಾಡುವ ಪ್ರಕರಣಗಳು ಅಲ್ಲಲ್ಲಿ ಬೆಳಕಿಗೆ ಬರುತ್ತಲೇ ಇದೆ. ಜನರ ನಂಬಿಕೆಗೆ ಮೋಸ ಮಾಡುತ್ತಿದ್ದಾರೆ.

ದಕ್ಷಿಣ ಕನ್ನಡ ಜಿಲ್ಲೆಯು ಧಾರ್ಮಿಕ ನಂಬಿಕೆಗಳ ತವರೂರು. ನೇಮೋತ್ಸವ, ಹರಕೆ ಕಾರ್ಯಕ್ರಮಗಳಲ್ಲೂ ದೈವದ ವೇಷ ತೊಡುವವರನ್ನು ಬುಕ್ ಮಾಡಿಕೊಂಡು ತಮಗೆ ಬೇಕಾದಂತೆ ಬಳಸಿಕೊಳ್ಳುವ ವಿಚಿತ್ರ ಖಯಾಲಿಗಳು ಇತ್ತೀಚೆಗೆ ಹೆಚ್ಚಾಗುತ್ತಿದೆ. ಸುಳ್ಯ ತಾಲೂಕಿನ ಐವರ್ನಾಡು ಗ್ರಾಮದಲ್ಲಿ ಮಡ್ತಿಲಮನೆ ಕುಟುಂಬದ ಜಾಗದ ತಕರಾರು ಸುಳ್ಯದ ಸಿವಿಲ್ ಕೋರ್ಟ್ (ವ್ಯಾಜ್ಯ ಸಂಖ್ಯೆ 49/23-24) ವಿಚಾರಣಾ ಹಂತದಲ್ಲಿದೆ. ಭಾಸ್ಕರ ಮಡ್ತಿಲ ಹಾಗೂ ಸಚಿನ್ ಮಡ್ತಿಲ ಇವರ ನಡುವೆ ಜಾಗಕ್ಕೆ ಸಂಬಂಧಿಸಿದ ವ್ಯಾಜ್ಯ ವಿಚಾರಣಾ ಹಂತದಲ್ಲಿರುವಾಗ ಕುಟುಂಬದ ಮಡ್ತಿಲ ಮನೆಯಲ್ಲಿ 24-2-2026 ರಂದು ಜರುಗಿದ ದೈವ ನೇಮೋತ್ಸವ ಸಂದರ್ಭದಲ್ಲಿ ಸಚಿನ್ ಮಡ್ತಿಲ ಎಂಬವರು ದೈವದ ವೇಷಧಾರಿಯಾದ ಮೋಹನ ಎಂಬವರಿಗೆ ಹಣದ ಆಮಿಷವೊಡ್ಡಿ ಕುಟುಂಬ ಸದಸ್ಯರ ಸಮ್ಮುಖದಲ್ಲಿ ‘ನಿನಗೆ ಮಗು ಬೇಕಾ.? ಜಾಗ ಬೇಕಾ.? ಎಂದು ಈಗಲೇ ಹೇಳು..? ಎಂದು ಹೇಳುತ್ತಾ ಜಾಗಕ್ಕೆ ಸಂಬಂಧಿಸಿ ಹೂಡಿರುವ ಕೇಸನ್ನು ವಾಪಾಸು ತೆಗೆಯುವಂತೆ ಬೆದರಿಕೆ ಹಾಕಿರುವುದಾಗಿ ಭಾಸ್ಕರ ಮಡ್ತಿಲ ಪತ್ನಿ ಮಮತಾ ದ.ಕ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳಿಗೆ ದೂರು ನೀಡಿದ್ದಾರೆ.

ದೈವದ ಮುಖಾಂತರ ಇಂತಹ ಹೇಳಿಕೆ ನೀಡಿರುವುದರಿಂದ ನನ್ನ ಮಗುವಿಗೆ ಏನಾದರೂ ತೊಂದರೆ ಆಗಬಹುದಾ ಅನ್ನುವ ಆತಂಕಕ್ಕೆ ಮಮತ ಸಿಲುಕಿದ್ದಾರೆ. ಮಮತ ತನ್ನ ಮಗಳನ್ನು ರಾಷ್ಟ್ರಕ್ಕಾಗಿ ಅರ್ಪಿಸಿದ್ದು, ಅಸ್ಸಾಂ ರೈಫಲ್ ವಿಭಾಗದಲ್ಲಿ ಸೈನಿಕರಾಗಿ ದೇಶ ಸೇವೆ ಮಾಡುತ್ತಿದ್ದಾಳೆ. ತನ್ನ ಮಗಳನ್ನು ದೇಶದ ಸೈನಿಕರಾಗಿ ಸೇವೆ ಸಲ್ಲಿಸಲು ಕಳುಹಿಸಿಕೊಟ್ಟಿರುವುದು ಅ ಮಹಾ ತಾಯಿಯೊಬ್ಬಳ ಆತ್ಮಸ್ಥೈರ್ಯ ಹೇಗಿರಬಹುದು ಅನ್ನುವುದನ್ನು ನೀವೇ ಊಹಿಸಿ. ಅಂತಹ ತಾಯಿಗೆ ಈಗ ಜಾಗದ ವಿಚಾರದಲ್ಲಿ ಅನ್ಯಾಯವಾಗುತ್ತಿರುವುದು ಎಷ್ಟು ಸರಿ? ದೈವದ ಹೆಸರಿನಲ್ಲಿ ತಾಯಿಯ ಆತ್ಮಸ್ಥೈರ್ಯ ಕುಗ್ಗಿಸುವ ಪ್ರಯತ್ನಕ್ಕೆ ಕುಟುಂಬದ ವಿರೋಧಿ ಗುಂಪು ಮುಂದಾಗಿರುವುದು ನ್ಯಾಯವೇ? ಎಂದು ಸ್ಥಳೀಯರು ಮಾತನಾಡುತ್ತಿದ್ದಾರೆ.

ಅಸ್ಸಾಂ ರೈಫಲ್ಸ್ ಭಾರತದ ಅತ್ಯಂತ ಹಳೆಯ ಅರೆಸೈನಿಕ ಪಡೆಯಾಗಿದೆ (1835 ರಲ್ಲಿ ಸ್ಥಾಪಿತ), ಇದು ಮುಖ್ಯವಾಗಿ ಈಶಾನ್ಯ ಭಾರತದ ಗಡಿ ಭದ್ರತೆ, ದಂಗೆ ನಿಗ್ರಹ ಮತ್ತು ಕಾನೂನು ಸುವ್ಯವಸ್ಥೆಯನ್ನು ನಿರ್ವಹಿಸುತ್ತದೆ. ಗೃಹ ಸಚಿವಾಲಯದ ಅಡಿಯಲ್ಲಿ ಬರುವ ಈ ಪಡೆಯು ಭಾರತೀಯ ಸೇನೆಯೊಂದಿಗೆ ಕಾರ್ಯನಿರ್ವಹಿಸುತ್ತದೆ. ಇಂತಹ ಪಡೆಯಲ್ಲಿ ದೇಶದ ಸೇವೆಗಾಗಿ ತಾಯಿಯಾದವಳೊಬ್ಬಳು ತನ್ನ ಹೆಣ್ಣು ಮಗಳನ್ನು ದೇಶದ ಸೇವೆಗಾಗಿ ಅರ್ಪಿಸಿದ್ದಾಳೆ ಆ ತಾಯಿಯ ಕುಟುಂಬಕ್ಕೆ ಜಾಗದ ಹೆಸರಲ್ಲಿ, ಧಾರ್ಮಿಕ ನಂಬಿಕೆಯನ್ನು ಮುಂದಿಟ್ಟು ನಡೆಸಿದ ಈ ಕೃತ್ಯ ಮೆಚ್ಚುವಂತದ್ದಲ್ಲ. ಜನರು ಜಾಗ್ರತರಾಗಬೇಕಾಗಿದೆ. ಅ ಕುಟುಂಬ ಪರವಾಗಿ ಧ್ವನಿ ಎತ್ತುವುದು ನಾಗರಿಕ ಸಮಾಜದ ಕರ್ತವ್ಯವಾಗಿದೆ.

ಜನರ ಭಾವನೆಯ ನಂಬಿಕೆಗೆ ದ್ರೋಹ ಮಾಡಿ ದೈವದ ಹೆಸರಿನಲ್ಲಿ ಬೆದರಿಕೆ ಒಡ್ಡಿದವರ ಮೇಲೆ ಹಾಗೂ ಬೆದರಿಕೆ ಒಡ್ಡಲು ಪ್ರೇರೇಪಣೆ ನೀಡಿದವರ ಮೇಲೆ ಕಾನೂನು ರೀತಿಯ ಕ್ರಮ ಕೈಗೊಂಡು ನ್ಯಾಯಕ್ಕಾಗಿ ಮಮತ ಪೊಲೀಸ್ ಇಲಾಖೆಯ ಕದ ತಟ್ಟಿದ್ದಾರೆ.