ಕಟ್ಟರ್ ಹಿಂದುತ್ವವಾದಿ ಅರುಣ್ ಕುಮಾರ್ ಪುತ್ತಿಲ ಲೈಂಗಿಕ ದೌರ್ಜನ್ಯ ಪ್ರಕರಣ; ಸಂತ್ರಸ್ತೆ ಮಹಿಳೆಯಿಂದ ರಾಜ್ಯಮಾನವ ಹಕ್ಕುಗಳ ಆಯೋಗಕ್ಕೆ ದೂರು

ಕರಾವಳಿ

ಪೊಲೀಸ್ ಅಧಿಕಾರಿ, ಸಿಬ್ಬಂದಿಗಳು ಶಾಮೀಲಾಗಿ ನನಗೆ ನ್ಯಾಯ ಕೊಡಿಸುವಲ್ಲಿ ವಿಫಲರಾಗಿದ್ದಾರೆ

ಕಟ್ಟರ್ ಹಿಂದುತ್ವವಾದಿ, ಬಿಜೆಪಿ ಮುಖಂಡ ಅರುಣ್ ಕುಮಾರ್‌ ಪುತ್ತಿಲ ವಿರುದ್ಧ ಪುತ್ತೂರಿನ ಮಹಿಳೆಯೊಬ್ಬರು ನೀಡಿರುವ ಅತ್ಯಾಚಾರ ಪ್ರಕರಣದ ದೂರನ್ನು ದಾಖಲಿಸಿಕೊಳ್ಳಲು ವಿಳಂಬ ಮಾಡಿದ್ದಲ್ಲದೇ, ನನಗೆ ನ್ಯಾಯ ಕೊಡಿಸುವಲ್ಲಿ ಪೊಲೀಸರು ವಿಫಲರಾಗಿದ್ದಾರೆ’ ಎಂದು ಆರೋಪಿಸಿರುವ ಸಂತ್ರಸ್ತೆ ಮಹಿಳೆ ರಾಜ್ಯಮಾನವ ಹಕ್ಕುಗಳ ಆಯೋಗಕ್ಕೆ ದೂರು ನೀಡಿದ್ದಾರೆ. ಮಹಿಳೆಯೊಬ್ಬರ ಮೇಲೆ ಲೈಂಗಿಕ ದೌರ್ಜನ್ಯ ನಡೆಸಿ, ನಂಬಿಕೆ ದ್ರೋಹ, ಕೊಲೆ ಬೆದರಿಕೆ ಒಡ್ಡಿದ ಆರೋಪದಲ್ಲಿ ಅರುಣ್ ಕುಮಾರ್ ಪುತ್ತಿಲ ವಿರುದ್ಧ ಪ್ರಕರಣ ದಾಖಲಾಗಿತ್ತು. ನಂತರ ಪೊಲೀಸರು ಅತ್ಯಾಚಾರದ ಕಲಂನ್ನು ಸೇರ್ಪಡೆಗೊಳಿಸಿದ್ದರು.

ಮಹಿಳೆಗೆ ಅನ್ಯಾಯ ಆಗಿರುವ ಬಗ್ಗೆ ದೂರು ನೀಡಲು ಪುತ್ತೂರು ನಗರ ಠಾಣೆಗೆ ಆಗಸ್ಟ್‌ 30ರಂದು ಹೋದಾಗ ಠಾಣಾಧಿಕಾರಿ ಮತ್ತು ಸಿಬ್ಬಂದಿ ದೂರು ಸ್ವೀಕರಿಸದೆ, 3 ದಿನ ಕಾಯಿಸಿದ್ದಾರೆ. ದೂರು ನೀಡಲು ಬಂದ ವಿಚಾರವನ್ನು ಆರೋಪಿಗೆ ತಿಳಿಸಿ, ದೂರು ಸ್ವೀಕರಿಸಲು ನಿರಾಕರಿಸಿದ್ದರು. ಈ ಕಾರಣದಿಂದ ಸೆ. 1ರಂದು ಪುತ್ತೂರಿನ ಮಹಿಳಾ ಠಾಣೆಯಲ್ಲಿ ಧರಣಿ ಮಾಡಿದ್ದೆ. ಅಂದು ಸಂಜೆ ನಾನು ನೀಡಿದ ಅತ್ಯಾಚಾರ ದೂರನ್ನು ಬದಲಾಯಿಸಿದ ಪೊಲೀಸರು, ಆರೋಪಿಗೆ ಜಾಮೀನು ದೊರೆಯಲು ಅನುಕೂಲವಾಗುವಂತೆ ಐಪಿಸಿ ಕಲಂ 376ರ ಬದಲು ಕಲಂ 354(ಎ) ಅಡಿ ದೂರು ದಾಖಲಿಸಿದ್ದಾರೆ’ ಎಂದು ಅವರು ಆರೋಪಿಸಿದ್ದಾರೆ.

ದೂರು ನೀಡದಂತೆ ಹಾಗೂ ಪ್ರಕರಣದಲ್ಲಿ ಸಾಕ್ಷಿ ನುಡಿಯದಂತೆ ನನಗೆ ಆತನ ಕಡೆಯವರು ಜೀವ ಬೆದರಿಕೆಯೊಡ್ಡುತ್ತಿದ್ದಾರೆ. ಪುತ್ತೂರು ನಗರ ಠಾಣೆ ಮತ್ತು ಮಹಿಳಾ ಠಾಣೆಯ ಪೊಲೀಸ್ ಅಧಿಕಾರಿ, ಸಿಬ್ಬಂದಿ ಆತನೊಂದಿಗೆ ಶಾಮೀಲಾಗಿ ನನಗೆ ನ್ಯಾಯ ಕೊಡಿಸುವಲ್ಲಿ ವಿಫಲರಾಗಿದ್ದಾರೆ. ನನಗೆ ನ್ಯಾಯ ಒದಗಿಸಬೇಕು ಎಂದು ಅವರು ದೂರಿನಲ್ಲಿ ಮನವಿ ಮಾಡಿದ್ದಾರೆ.