ಮಂಗಳೂರು ನಗರದಲ್ಲಿ ಜನರು ಉಸಿರಾಡುವ ಗಾಳಿಯ ಗುಣಮಟ್ಟ ತೀವ್ರ ಕುಸಿದಿದೆ: ಗ್ರೀನ್ ಪೀಸ್ ಇಂಡಿಯಾ ವರದಿ

ಕರಾವಳಿ

ಮಾಲಿನ್ಯದ ಪ್ರಮಾಣ ಅಪಾಯಕಾರಿ; ವಾಯುಮಾಲಿನ್ಯ ತಗ್ಗಿಸಲು ಸೂಕ್ತ ಕ್ರಮ ಕೈಗೊಳ್ಳದಿದ್ದರೆ ಆರೋಗ್ಯದ ಮೇಲೆ ದುಷ್ಪರಿಣಾಮ

ಮಂಗಳೂರು ನಗರದಲ್ಲಿ ಜನರು ಉಸಿರಾಡುವ ಗಾಳಿಯ ಗುಣಮಟ್ಟ ತೀವ್ರ ಕುಸಿದಿದೆ ಎನ್ನುವ ಎಚ್ಚರಿಕೆ ಸಂದೇಶವನ್ನು ಗ್ರೀನ್ ಪೀಸ್ ಸಂಶೋಧನಾ ವರದಿ ರವಾನಿಸಿದೆ.

ಕರ್ನಾಟಕದ ಮೂರು ಪ್ರಮುಖ ನಗರಗಳಾದ ಬೆಂಗಳೂರು, ಮೈಸೂರು ಹಾಗೂ ಮಂಗಳೂರಿನಲ್ಲಿ ನಾವು ಉಸಿರಾಡುವ ಗಾಳಿಯ ಗುಣಮಟ್ಟ ತೀವ್ರ ಕುಸಿದಿದ್ದು, ಮಾಲಿನ್ಯದ ಪ್ರಮಾಣ ಅಪಾಯಕಾರಿ ಮಟ್ಟಕ್ಕೆ ತಲುಪಿದೆ. ಈ ಕೂಡಲೇ ವಾಯುಮಾಲಿನ್ಯ ತಗ್ಗಿಸಲು ಸೂಕ್ತ ಕ್ರಮ ಕೈಗೊಳ್ಳದಿದ್ದರೆ, ನಮ್ಮ ಆರೋಗ್ಯದ ಮೇಲೆ ದುಷ್ಪರಿಣಾಮ ಬೀರಬಲ್ಲದು ಎಂದು ವರದಿಯಲ್ಲಿ ಉಲ್ಲೇಖಿಸಲಾಗಿದೆ.

ದಕ್ಷಿಣ ಭಾರತದ 10 ಪ್ರಮುಖ ನಗರಗಳ ಗಾಳಿಯಲ್ಲಿ ಮಾಲಿನ್ಯಕಾರಕ ಕಣಗಳಾದ ಪಿಎಂ 2.5 (ಸೂಕ್ಷ್ಮ) ಮತ್ತು ಪಿಎಂ 10 (ಅತಿಸೂಕ್ಷ್ಮ) ಗಳ ಪ್ರಮಾಣವು ಡಬ್ಲ್ಯು ಎಚ್ ಒ ಮಾರ್ಗಸೂಚಿ ನಿಗದಿಪಡಿಸಿದ ಸರಾಸರಿ ಮಟ್ಟಗಳನ್ನು ಮೀರಿದ್ದು ಇದು ಗಂಭೀರ ಆರೋಗ್ಯ ಸಮಸ್ಯೆಗಳಿಗೆ ಕಾರಣವಾಗಬಹುದು ಎಂದು ಗ್ರೀನ್ ಪೀಸ್ ಇಂಡಿಯಾದ ‘ಸ್ಪೇರ್ ಡಿ ಏರ್ -2’ ವರದಿ ಎಚ್ಚರಿಸಿದೆ. ಈ ವರದಿ ದಕ್ಷಿಣ ಭಾರತದ ಪ್ರಮುಖ ನಗರಗಳಾದ ಬೆಂಗಳೂರು, ಮೈಸೂರು, ಹೈದರಾಬಾದ್, ಚೆನೈ, ವಿಶಾಖಪಟ್ಟಣ, ಕೊಚ್ಚಿ, ಅಮರಾವತಿ, ವಿಜಯವಾಡ ಮತ್ತು ಪುದುಚೇರಿ ನಗರಗಳಲ್ಲಿ ಗಾಳಿಯ ಗುಣಮಟ್ಟವನ್ನು ವಿಶ್ಲೇಷಿಸುತ್ತದೆ. ಈ ಹತ್ತು ನಗರಗಳ ಪೈಕಿ ವಿಶಾಖಪಟ್ಟಣಂ ನಲ್ಲಿ ಗಾಳಿಯ ಗುಣಮಟ್ಟ ತೀವ್ರ ಕುಸಿದಿದೆ.