ಏಕನಾಥ್ ಶಿಂಧೆ ಸರ್ಕಾರ ಮಹಾರಾಷ್ಟ್ರದ ಜನರ ಮನಸ್ಸು ಗೆಲ್ಲುವಲ್ಲಿ ವಿಫಲ: ಲೋಕ್ ಪೋಲ್ ಸಮೀಕ್ಷೆ
ಡಿಸೆಂಬರ್ ತಿಂಗಳಿನಲ್ಲಿ ಮಹಾರಾಷ್ಟ್ರ ವಿಧಾನಸಭೆಗೆ ಚುನಾವಣೆ ನಡೆಯಲಿದೆ. ಈಗಾಗಲೇ ಎಲ್ಲಾ ಪ್ರಮುಖ ಪಕ್ಷಗಳು ಚುನಾವಣೆಗೆ ಸಿದ್ಧತೆ ಮಾಡಿಕೊಳ್ಳುತ್ತಿವೆ. ಅಧಿಕಾರದಲ್ಲಿರುವ ಎನ್‌ಡಿಎ ಮತ್ತೊಮ್ಮೆ ಅಧಿಕಾರ ಚುಕ್ಕಾಣಿ ಹಿಡಿಯಲು ಭಗೀರಥ ಪ್ರಯತ್ನ ನಡೆಸುತ್ತಿದೆ. ಈ ಬಾರಿ ಎನ್ ಡಿ ಎ ಗೆ ಆಘಾತ ಎದುರಾಗುವ ಸೂಚನೆ ಸಿಕ್ಕಿದೆ. ಲೋಕ್‌ಪೋಲ್ ಚುನಾವಣಾ ಪೂರ್ವ ಸಮೀಕ್ಷೆ ಪ್ರಕಟವಾಗಿದ್ದು, ಎನ್‌ಡಿಎಗೆ ಹಿನ್ನಡೆಯಾಗಲಿದೆ ಎಂದು ವರದಿಯಾಗಿದೆ.
ಹಲವು ರಾಜ್ಯಗಳ ವಿಧಾನಸಭಾ ಚುನಾವಣೆಯಲ್ಲಿ ಲೋಕ್‌ಪೋಲ್ ಬಹುತೇಕ ನಿಖರ ಅಂಕಿ ಅಂಶಗಳನ್ನು ನೀಡಿತ್ತು. ಲೋಕ್ ಪೋಲ್ ಸಮೀಕ್ಷೆಯಲ್ಲಿ ಹೇಳಿದ ಅಂಕಿಗಳಲ್ಲಿ ಅಲ್ಪ ವ್ಯತ್ಯಾಸವಾಗಿದ್ದರೂ, ಬೇರೆ ಸಮೀಕ್ಷೆಗಳಿಗಿಂತ ನಿಖರವಾಗಿತ್ತು. ಇದೇ ಕಾರಣಕ್ಕೆ ಇದೀಗ ಮಹಾರಾಷ್ಟ್ರ ವಿಧಾನಸಭೆ ಚುನಾವಣ ಪೂರ್ವ ಸಮೀಕ್ಷೆಯಲ್ಲಿ ಅವರು ನೀಡಿರುವ ಅಂಕಿ ಅಂಶ ಮಹತ್ವ ಪಡೆದುಕೊಂಡಿದೆ. ಲೋಕ್ ಪೋಲ್ ಚುನಾವಣಾ ಪೂರ್ವ ಸಮೀಕ್ಷೆಯ ಪ್ರಕಾರ ಮಹಾರಾಷ್ಟ್ರ ವಿಧಾನಸಭೆ ಚುನಾವಣೆಯಲ್ಲಿ ಮಹಾ ವಿಕಾಸ ಅಘಾಡಿ 141 ರಿಂದ 154 ಸ್ಥಾನಗಳಲ್ಲಿ ಗೆಲುವು ಸಾಧಿಸುತ್ತದೆ ಎಂದು ಅಂದಾಜಿಸಿದೆ.

ಇನ್ನು ಆಡಳಿತಾರೂಢ ಎನ್‌ಡಿಎ 115 ರಿಂದ 128 ಸ್ಥಾನಗಳಲ್ಲಿ ಗೆಲುವು ಸಾಧಿಸಬಹುದು ಎಂದು ಹೇಳಿದೆ. ಇತರೆ ಅಭ್ಯರ್ಥಿಗಳು 5 ರಿಂದ 18 ಕ್ಷೇತ್ರಗಳಲ್ಲಿ ಗೆಲ್ಲಬಹುದು ಎಂದಿದೆ. 288 ವಿಧಾನಸಭಾ ಕ್ಷೇತ್ರ ಹೊಂದಿರುವ ಮಹಾರಾಷ್ಟ್ರದಲ್ಲಿ ಸರ್ಕಾರ ರಚನೆ ಮಾಡಲು 145 ಸದಸ್ಯರ ಬಲ ಬೇಕಾಗಿದೆ. ಈ ಲೆಕ್ಕಾಚಾರದಲ್ಲಿ ಮಹಾ ವಿಕಾಸ ಅಘಾಡಿ ಸರಳ ಬಹುಮತ ಪಡೆಯಬಹುದು ಎಂದು ಸಮೀಕ್ಷೆ ಹೇಳಿದೆ.
ಏಕನಾಥ್ ಶಿಂಧೆ ಅವರ ಸರ್ಕಾರ ಮಹಾರಾಷ್ಟ್ರದ ಜನರ ಮನಸ್ಸು ಗೆಲ್ಲುವಲ್ಲಿ ವಿಫಲವಾಗಿದೆ ಎನ್ನುವುದು ಮಾತ್ರ ಈ ಸಮೀಕ್ಷೆಯಿಂದ ಸಾಬೀತಾಗಿದೆ. ಪ್ರಧಾನಿ ನರೇಂದ್ರ ಮೋದಿ, ಅಮಿತ್ ಶಾ ಸೇರಿದಂತೆ ಹಲವು ಪ್ರಮುಖ ಬಿಜೆಪಿ ನಾಯಕರು ಈಗಾಗಲೇ ಮಹಾರಾಷ್ಟ್ರ ಚುನಾವಣೆಯತ್ತ ಗಮನ ಹರಿಸಿದ್ದಾರೆ. ಕಾಂಗ್ರೆಸ್ ಕೂಡ ಈ ಚುನಾವಣೆಯನ್ನು ಪ್ರತಿಷ್ಠೆಯಾಗಿ ತೆಗೆದುಕೊಳ್ಳುವ ಎಲ್ಲಾ ಲಕ್ಷಣಗಳು ಕಂಡುಬರುತ್ತಿದೆ.
