ವಿಟ್ಲ ಠಾಣಾ ವ್ಯಾಪ್ತಿಯ ವಿಟ್ಲ ಪಡ್ನೂರು ಗ್ರಾಮದ ಕುಂಟುಕುಡೇಲು ಎಂಬಲ್ಲಿ ತೀರಾ ಬಡಕುಟುಂಬದ ದಿ. ಸದಾಶಿವ ನಾಯ್ಕರ ಪತ್ನಿ ಲೀಲಾ ಮತ್ತು ಪುತ್ರಿ ಪೇಟೆಗೆ ಹೋಗಿದ್ದ ಸಂದರ್ಭ ಹಿಂಬದಿಯ ಬಾಗಿಲು ಮುರಿದು ಚೋರರು ಒಳನುಗ್ಗಿದ್ದಾರೆ.
ಮಧ್ಯಾಹ್ನ ಪೇಟೆಯಿಂದ ಹಿಂತಿರುಗುವಷ್ಟರಲ್ಲಿ ಬ್ಯಾಗಲ್ಲಿಟ್ಟಿದ್ದ ಮೂರು ಲಕ್ಷ ಮೌಲ್ಯದ ಚಿನ್ನಾಭರಣ ಕಳ್ಳತನವಾಗಿದೆ. ಪತಿ ಮರಣಾನಂತರ ಬಡಕುಟುಂಬದ ಲೀಲಾ ನಾಯ್ಕ ಅವರ ಪುತ್ರಿ ಚೈತ್ರಾ ಟೈಲರಿಂಗ್ ವೃತ್ತಿ ಮಾಡುತ್ತಾ ಬದುಕುತ್ತಿದ್ಜರು. ಚೈತ್ರಾ ಅವರಿಗೆ ಕೆಲದಿನಗಳ ಹಿಂದಷ್ಟೇ ವಿವಾಹ ನಿಶ್ಚಿತಾರ್ಥವಾಗಿದ್ದು ಇದ್ದ ಚಿನ್ನಾಭರಣವೂ ಕಳ್ಳರು ಹೊತ್ತೊಯ್ದಿದ್ದಾರೆ.

ನಮಗೆ ಇನ್ಯಾರು ಗತಿಯೆಂದು ಸೇರಿದ ಜನರ ಮುಂದೆ ತಾಯಿ ಮತ್ತು ಪುತ್ರಿ ಕಣ್ಣೀರು ಹಾಕುತ್ತಿದ್ದುದು ಎಂತಹ ಕಲ್ಲು ಹೃದಯವನ್ನೂ ಕರಗಿಸುತ್ತಿದೆ. ಸ್ಥಳಕ್ಕೆ ವಿಟ್ಲ ಪೊಲೀಸರು ಆಗಮಿಸಿ ತನಿಖೆ ಕೈಗೆತ್ತಿಕೊಂಡಿದ್ದಾರೆ. ಬೆರಳಚ್ಚು ತಜ್ಞರು, ಶ್ವಾನದಳ ಆಗಮಿಸಿದ್ದು ಖದೀಮರ ಬಗ್ಗೆ ಮಾಹಿತಿ ಕಲೆ ಹಾಕುತ್ತಿದೆ. ಪರಿಚಿತರಿಂದಲೇ ಕಳ್ಳತನ ಕೃತ್ಯ ನಡೆದಿರುವ ಬಗ್ಗೆ ಸ್ಥಳೀಯರು ಸಂಶಯ ವ್ಯಕ್ತಪಡಿಸಿದ್ದಾರೆ.
