ಪೊಲೀಸ್ ಇಲಾಖೆ ಉತ್ತರಿಸಬೇಕು. ಮುಸ್ಲಿಮರು ಈ ರೀತಿ ವರ್ತಿಸಿದ್ದರೆ ನಿಮ್ಮ (ಪೊಲೀಸರ) ಪ್ರತಿಕ್ರಿಯೆ ಹೀಗೆಯೆ ಇರುತ್ತಿತ್ತೆ ?
ಮುನೀರ್ ಕಾಟಿಪಳ್ಳ
ಈದ್ ಮಿಲಾದ್ ತಡೆಯುತ್ತೇನೆ ಅಂದ ಶರಣ್ ಪಂಪ್ ವೆಲ್ ಗೆ ಸವಾಲಿನ ಸಂದೇಶ ಕಳುಹಿಸಿದ ಕಾಂಗ್ರೆಸ್ ನಾಯಕರಾರ ಹಸೈನಾರ್, ಶೆರೀಫ್ ರನ್ನು FIR ದಾಖಲಿಸಿ ಬಂಧಿಸಿದಿರಿ. ಅದೇ ಸಂದರ್ಭ ಮತೀಯ ದ್ವೇಷದ ಸವಾಲಿನ ಹೇಳಿಕೆಗಾಗಿ FIR ದಾಖಲಾಗಿರುವ ಶರಣ್ ಪಂಪ್ ವೆಲ್, ಪುನೀತ್ ಅತ್ತಾವರರನ್ನು ಯಾಕೆ ಬಂಧಿಸಲಿಲ್ಲ ?
ಈದ್ ಮಿಲಾದ್ ಮೆರವಣಿಗೆ ತಡೆಯಲು ಗುಂಪು ಸೇರಿದ, ಅನುಮತಿ ಇಲ್ಲದೆ ಹೆದ್ದಾರಿ ತಡೆದ, ಅನುಮತಿ ಇಲ್ಲದೆ ಪ್ರತಿಭಟನೆ ನಡೆಸಿದ ಬಜರಂಗ ದಳ, ಬಿಜೆಪಿ ಕಾರ್ಯಕರ್ತರ ಮೇಲೆ ಯಾಕೆ FIR ದಾಖಲಾಗಲಿಲ್ಲ. ಈ ರೀತಿ ಕೋಮು ಗಲಭೆ ಪ್ರಚೋದಕ, ಒಂದು ಧರ್ಮದ ಹಬ್ಬದ ಮೆರವಣಿಗೆಗೆ ಮುತ್ತಿಗೆ ಹಾಕುವ ಯತ್ನವನ್ನು ಪ್ರತಿಭಟನಾ ಸಭೆ ಎಂದು ಯಾವ ಆಧಾರದಲ್ಲಿ ಪರಿಗಣಿಸಿದಿರಿ ? ಈ ಮುತ್ತಿಗೆ ಹಾಕುವ ಗುಂಪಿನಲ್ಲಿ ಈ ಹಿಂದೆ ಮತೀಯ ದ್ವೇಷದಿಂದ ಮುಸ್ಲಿಮರನ್ನು ಕೊಲೆಗೈದ, ಹಿಂಸಾಚಾರದಲ್ಲಿ ಭಾಗಿಯಾದ ಆರೋಪಿಗಳು, ಕ್ರಿಮಿನಲ್ ಗಳೂ ಇದ್ದರಲ್ವ ? ಅವರನ್ನೆಲ್ಲಾ ಪ್ರತಿಭಟನಾಕಾರರು ಹೋರಾಟಗಾರರು ಎಂದು ಹೇಗೆ ವ್ಯಾಖ್ಯಾನಿಸಿದಿರಿ ?

ಈ ದ್ವೇಷದ ಗುಂಪಿನಲ್ಲಿ ಬಂದು ಸೇರಲು, ಭಾಷಣ ಮಾಡಲು ಹಿಂದಿನ ರಾತ್ರಿಯಷ್ಟೆ “ಈದ್ ಮಿಲಾದ್ ತಡೆಯುತ್ತೇವೆ” ಹೇಳಿಕೆಗಾಗಿ ಪ್ರಕರಣ ದಾಖಲಿಸಲ್ಪಟ್ಟಿದ್ದ ಶರಣ್ ಪಂಪ್ ವೆಲ್ ಗೆ ಹೇಗೆ ಅವಕಾಶ ಒದಗಿಸಿದಿರಿ. ಇಂತಹದ್ದೇ ಹೇಳಿಕೆಗಾಗಿ ಮುಸ್ಲಿಂ ಸಮುದಾಯಕ್ಕೆ ಸೇರಿದ್ದ ಕಾಂಗ್ರೆಸ್ ಪಕ್ಷದ ಇಬ್ಬರು ಪುರಸಭಾ ಸದಸ್ಯರನ್ನು ವಶಕ್ಕೆ ಪಡೆದು ದಿನವಿಡೀ ಠಾಣೆಯಲ್ಲಿ ಕುಳ್ಳಿರಿಸಿದ ನೀವು, ಅದೇ ಪ್ರಕರಣಕ್ಕೆ ಸಂಬಂಧಿಸಿದ ಶರಣ್ ಪಂಪ್ ವೆಲ್ , ಪುನೀತ್ ಅತ್ತಾವರ ಹೀರೋ ತರಹ, ಜನನಾಯಕರ ತರಹ ಪ್ರಚೋದಕ ಗುಂಪಿನಲ್ಲಿ ಬಂದು ಭಾಷಣ ಮಾಡಲು ಸಾಧ್ಯವಾಗಿಸಿದ್ದು ಹೇಗೆ ?
ಅದೇ ಸಂದರ್ಭದಲ್ಲಿ ಬಿ ಸಿ ರೋಡ್ ಜಂಕ್ಷನ್ ನಲ್ಲಿ ಸೇರಿದ ಗುಂಪನ್ನು ಉದ್ದೇಶಿಸಿ “ಮುಂದಕ್ಕೆ ಮಸೀದಿಗೂ ಬರುತ್ತೇವೆ” ಎಂದು ಪ್ರಚೋದನಾಕಾರಿ ಹೇಳಿಕೆ ನೀಡಿದ ಶರಣ್ ಪಂಪ್ ವೆಲ್ ಹಾಗೂ ಉಳಿದ ಮುಖಂಡರ ಮೇಲೆ ಸ್ವಯಂ ಪ್ರೇರಣೆ ಪ್ರಕರಣ ಯಾಕೆ ದಾಖಲಾಗಿಲ್ಲ ?
ಪೊಲೀಸ್ ಇಲಾಖೆ ಈ ಪ್ರಶ್ನೆಗಳಿಗೆ ಉತ್ತರಿಸಬೇಕು. ಮುಸ್ಲಿಮರು ಈ ರೀತಿ ವರ್ತಿಸಿದ್ದರೆ ನಿಮ್ಮ (ಪೊಲೀಸರ) ಪ್ರತಿಕ್ರಿಯೆ ಹೀಗೆಯೆ ಇರುತ್ತಿತ್ತೆ ?
