ಸ್ವಚ್ಛ ಭಾರತ್ ಮಿಷನ್ ಯೋಜನೆಯಲ್ಲಿ ಶೂನ್ಯ ಪ್ರಗತಿ ಸಾಧಿಸಿರುವ 318 ಮಂದಿ ಪಿಡಿಓಗಳ ಅಮಾನತಿಗೆ ಬ್ರೇಕ್

ರಾಷ್ಟ್ರೀಯ

ಸ್ವಚ್ಛ ಭಾರತ್ ಮಿಷನ್(ಗ್ರಾಮೀಣ) ಶೂನ್ಯ ಪ್ರಗತಿ ಸಾಧಿಸಿರುವ 318 ಗ್ರಾಪಂ ನೌಕರರ ಅಮಾನತಿಗೆ ಬ್ರೇಕ್ ಹಾಕಲಾಗಿದೆ. ಬೇಡಿಕೆಗೆ ಅನುಗುಣವಾಗಿ ಅನುದಾನ ಬಿಡುಗಡೆ ಮಾಡಿದ್ದರೂ ಸಹ ವೆಚ್ಚ ಮಾಡದೇ ಹೆಚ್ಚು ಅನುದಾನ ಬಾಕಿ ಉಳಿಸಿಕೊಂಡಿರುವ ಹಾಗೂ ಅನುದಾನವನ್ನು ಬಿಡುಗಡೆಗೊಳಿಸಲು ತಡೆ ನೀಡಿರುವ ಗ್ರಾಮ ಪಂಚಾಯಿತಿಗಳ ಪಿಡಿಒ ಮತ್ತು ಜಿಲ್ಲೆಗಳಿಗೆ ಸಂಬಂಧಿಸಿದ ಅಧಿಕಾರಿಗಳನ್ನು ತಕ್ಷಣ ಅಮಾನತು ಮಾಡಲು ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆ ನಿರ್ದೇಶಕರು 30 ಜಿಲ್ಲೆಗಳ ಸಿಇಒಗಳಿಗೆ ಸೂಚಿಸಿದ್ದರು.

30 ಜಿಲ್ಲೆಗಳ 318 ಗ್ರಾಮ ಪಂಚಾಯಿತಿಗಳಿಗೆ ಬಿಡುಗಡೆ ಮಾಡಿದ 60.10 ಕೋಟಿ ರೂ. ಅನುದಾನವನ್ನು ವೆಚ್ಚ ಮಾಡದೇ ಉಳಿಸಿಕೊಂಡಿರುವ ಹಿನ್ನೆಲೆಯಲ್ಲಿ ಆ ಅಧಿಕಾರಿಗಳನ್ನು ಅಮಾನತು ಮಾಡುವಂತೆ ಸೂಚನೆ ನೀಡಲಾಗಿತ್ತು.

ಈ ಬಗ್ಗೆ ನೌಕರರು ಯೋಜನೆ ಅನುಷ್ಠಾನಗೊಳಿಸುವಾಗ ಎದುರಾಗಬಹುದಾದ ಸಮಸ್ಯೆ ಮತ್ತು ಸವಾಲುಗಳನ್ನು ಪರಿಗಣಿಸದೇ ಏಕಾಏಕಿ ನಿರ್ಧಾರ ಕೈಗೊಳ್ಳಲಾಗಿದೆ. ಹಣ ಪಾವತಿಗೆ K2 ವಿಧಾನ ಅಳವಡಿಸಿರುವುದು ತ್ರಾಸದಾಯಕವಾಗಿದೆ. ಈ ಬಗ್ಗೆ ತರಬೇತಿ ಕೊರತೆ, ಖಜಾನೆ ಇಲಾಖೆ ಅಸಹಕಾರ ಗೊಂದಲ ಉಂಟು ಮಾಡಿದೆ. K2 ಮೂಲಕ ಹಣ ಸೆಳೆಯುವುದು ತುಂಬ ವಿಳಂಬಕಾರಿಯಾಗಿದೆ. ಇದರ ಜೊತೆಗೆ ಹಲವು ತಾಂತ್ರಿಕ ಕಾರಣಗಳು ಯೋಜನೆ ಅನುಷ್ಠಾನಕ್ಕೆ ತೊಡಕುಂಟು ಮಾಡಿವೆ. ಅಲ್ಲದೆ, K2 ಮೂಲಕ ಪಾವತಿಯ ವಿಧಾನದಲ್ಲಿ ಗ್ರಾಮ ಪಂಚಾಯಿತಿ ಅಧ್ಯಕ್ಷರ ಪಾತ್ರವೇ ಇಲ್ಲದಿರುವುದರಿಂದ ಸ್ವಚ್ಛ ಭಾರತ್ ಮಿಷನ್ ಯೋಜನೆ ಅನುಷ್ಠಾನದಲ್ಲಿ ಗೊಂದಲ ಸೃಷ್ಟಿಯಾಗಿವೆ. ಈ ಎಲ್ಲ ಅಂಶಗಳನ್ನು ಪರಿಗಣಿಸಿ 318 ಮಂದಿ ಪಿಡಿಒ ವಿರುದ್ಧ ಶಿಸ್ತು ಕ್ರಮದ ನಿರ್ಧಾರ ಕೈಬಿಡಬೇಕೆಂದು ಅಧಿಕಾರಿಗಳು ಆಗ್ರಹಿಸಿದ್ದರು. ಈ ಹಿನ್ನೆಲೆಯಲ್ಲಿ ಅಮಾನತಿಗೆ ತಡೆ ಬಿದ್ದಿದೆ ಎನ್ನಲಾಗಿದೆ.