ಮೂಡಬಿದಿರೆ: ಗುಂಡುಕಲ್ಲು ಮೊಹಿಯುದ್ದೀನ್ ಜುಮ್ಮಾ ಮಸೀದಿ ಚುನಾವಣೆ ಮುಂದಕ್ಕೆ.!

ಕರಾವಳಿ

ಮೂಡಬಿದಿರೆಯ ಪಡುಮಾರ್ನಾಡು ಗುಂಡುಕಲ್ಲು ಮೊಹಿಯುದ್ದೀನ್ ಜುಮ್ಮಾ ಮಸೀದಿ ಜಮಾಅತಿನಲ್ಲಿ ಕೆಲವು ಸಮಯಗಳಿಂದ ಸುನ್ನೀ ಸಂಘಟನೆಯ ಎರಡು ವಿಭಾಗಗಳ ಮಧ್ಯೆ ಭಿನ್ನಮತ ತಾರಕಕ್ಕೇರಿತ್ತು. ಇಲ್ಲಿ ಹಿಂದಿನಿಂದಲೂ ಇ.ಕೆ ವಿಭಾಗದ ಪಠ್ಯಕ್ರಮ ಸಿಲೆಬಸ್ ಹಾಗೂ ಇ.ಕೆ ವಿಭಾಗದ ಜಮಾಅತ್ ಹೆಚ್ಚಿರುವುದರಿಂದ ಇನ್ನೊಂದು ವಿಭಾಗ ಮಸೀದಿ ಆಡಳಿತ ಸಮಿತಿಯನ್ನು ವಶಪಡಿಸಲು ಮುಂದಾಗಿತ್ತು. ದ.ಕ ಜಿಲ್ಲಾ ವಕ್ಫ್ ಸಮಿತಿಯ ಮಧ್ಯಸ್ಥಿಕೆಯನ್ನು ಕೋರಿತ್ತು.

ಜಿಲ್ಲಾ ವಕ್ಫ್ ಗುಂಡುಕಲ್ಲು ಜಮಾಅತಿ ಆಡಳಿತ ಸಮಿತಿಯನ್ನು ಬರ್ಖಾಸ್ತುಗೊಳಿಸಿ ಅಡಳಿತಧಿಕಾರಿಯನ್ನಾಗಿ ಬೆಳ್ತಂಗಡಿಯ ಮಹಮ್ಮದ್ ರಫೀ ಎಂಬವರನ್ನು ನೇಮಕ ಮಾಡಿ, ಚುನಾವಣೆಗೆ ಸಂಬಂಧಿಸಿದಂತೆ ಪಟ್ಟಿ ತಯಾರಿಸಿ, ಅಂತಿಮ ಪಟ್ಟಿಯಲ್ಲಿ ಗುಂಡುಕಲ್ಲು ಜಮಾಅತಿಗೆ ಸಂಬಂಧ ಪಟ್ಟ ಜಮಾಅತಿನ 30 ಮಂದಿ ಸದಸ್ಯರನ್ನು ಅಡಳಿತಧಿಕಾರಿ ಕೈಬಿಟ್ಟು ಪರಿಷ್ಕ್ರತ ಪಟ್ಟಿ ತಯಾರಿಸಿ ಮತದಾನದ ಹಕ್ಕನ್ನು ಕಸಿಯುವಂತ ಕೆಲಸಕ್ಕೆ ಕೈಹಾಕಿದ್ದರು. ತದ ನಂತರ ಚುನಾವಣಾಧಿಕಾರಿಯನ್ನು ನೇಮಿಸಿ ಚುನಾವಣೆ ನಡೆಸುವಂತೆ ಆದೇಶ ಮಾಡಿತ್ತು. ಜಮಾಅತಿನ 30 ಮಂದಿಯನ್ನು ಕೈ ಬಿಟ್ಟ ಬಗ್ಗೆ ಚುನಾವಣಾಧಿಕಾರಿಗಳು ಸಂಬಂಧ ಪಟ್ಟ ಇಲಾಖೆಯ ಗಮನಕ್ಕೂ ತಂದಿದ್ದರು. ಆದರೂ ಚುನಾವಣೆ ನಡೆಸುವಂತೆ ವಕ್ಫ್ ಆದೇಶಿಸಿತ್ತು. ಈ ಬಗ್ಗೆ ನೊಂದವರು ತಮಗಾದ ಅನ್ಯಾಯದ ಬಗ್ಗೆ ಕಾನೂನು ಹೋರಾಟ ನಡೆಸಿದ್ದರು.

ಈ ಬಗ್ಗೆ ಮೊಹಿಯುದ್ದೀನ್ ಜುಮ್ಮಾ ಮಸೀದಿ ಆಡಳಿತ ಸಮಿತಿ ಹೈಕೋರ್ಟ್ ಮೆಟ್ಟಿಲೇರಿತ್ತು. ನ್ಯಾಯಾಲಯವು ಕಳೆದ ಪೆಬ್ರವರಿ ತಿಂಗಳಲ್ಲಿ ಚುನಾವಣೆ ನಡೆಸಲು ದಿನಾಂಕ ಪ್ರಕಟಿಸಿತ್ತು. ಆದರೆ ಲೋಕಸಭಾ ಚುನಾವಣೆಯ ನೀತಿಸಂಹಿತೆಯಿಂದಾಗಿ ಚುನಾವಣೆ ನಡೆದಿರುವುದಿಲ್ಲ. ಆದರೆ ಇತ್ತೀಚೆಗೆ ಜಮಾಅತಿನ ನೊಂದ 30 ಮಂದಿ ಸಂಬಂಧ ಪಟ್ಟವರಿಗೆ ದೂರು ನೀಡಿ ತಮ್ಮ ಮತಧಾನದ ಹಕ್ಕನ್ನು ಪ್ರಶ್ನಿಸಿದ್ದರು. ಇದೀಗ ಮೂಡಬಿದಿರೆ ತಹಶೀಲ್ದಾರರು ದಕ್ಷಿಣ ಕನ್ನಡ ಸ್ಥಳೀಯ ಸಂಸ್ಥೆಗಳ ಉಪ ಚುನಾವಣೆಯ ನೀತಿ ಸಂಹಿತೆ ಜಾರಿಯಲ್ಲಿರುವುದರಿಂದ ಚುನಾವಣೆಯನ್ನು ಮುಂದೂಡುವಂತೆ ಜಿಲ್ಲಾ ವಕ್ಫ್ ಸಮಿತಿಗೆ ಆದೇಶಿಸಿದೆ. ಆಡಳಿತ ಸಮಿತಿ ಸದಸ್ಯರ ಮಧ್ಯೆ ಭಿನ್ನಾಭಿಪ್ರಾಯ ಇರುವುದರಿಂದ ಸ್ಥಳದಲ್ಲಿ ಶಾಂತಿ ಭಂಗ ಉಂಟಾಗಿ ಕಾನೂನು ಸುವ್ಯವಸ್ಥೆಗೆ ಧಕ್ಕೆ ಉಂಟಾಗುವ ಸಾಧ್ಯತೆ ಇರುವುದರಿಂದ ಅಕ್ಟೋಬರ್ 3 ರಂದು ನಡೆಸಲು ಉದ್ದೇಶಿಸಿರುವ ಚುನಾವಣೆಯನ್ನು ಮುಂದೂಡುವಂತೆ ಆದೇಶಿಸಿದ್ದಾರೆ. ಈ ಬಗ್ಗೆ ಜಿಲ್ಲಾ ವಕ್ಫ್ ಸಮಿತಿಗೂ, ಮೂಡಬಿದಿರೆ ಪೊಲೀಸ್ ಠಾಣೆಗೂ ಮಾಹಿತಿ ರವಾನಿಸಿದ್ದಾರೆ.