✍️. ಪತ್ರಕರ್ತ ನವೀನ್ ಸೂರಿಂಜೆ
02 ಏಪ್ರಿಲ್ 2010ರಂದು ತೆಹಲ್ಕಾ ಪತ್ರಿಕೆಯು ಒಂದು ರಹಸ್ಯ ಕಾರ್ಯಾಚರಣೆಯನ್ನು ಬಯಲು ಮಾಡಿತ್ತು. ಶ್ರೀರಾಮ ಸೇನೆಯ ಪ್ರಮೋದ್ ಮುತಾಲಿಕ್ ಕೋಮುಗಲಭೆಗಾಗಿ ಹಣಕಾಸಿನ ಡೀಲ್‌ಗೆ ಒಪ್ಪಿಕೊಳ್ಳುತ್ತಾರೆ ಸಂಘಪರಿವಾರದ ಕಾಲಾಳುಗಳು ಬೆಳೆದು ಬಂದಿರುವುದೇ ಕುಂದಾಪುರದ ಚೈತ್ರಾ ಮಾದರಿಯಲ್ಲಿ. ಈ ರೀತಿ ಕೇಸರಿಯನ್ನು ಅಡವಿಟ್ಟು ಹಣ ಮಾಡುವ ದಂಧೆ ಮಾಡಿರುವುದು ಚೈತ್ರ ಮೊದಲೂ ಅಲ್ಲ, ಕೊನೆಯೂ ಅಲ್ಲ. ಭಜರಂಗದಳ, ಹಿಂದೂ ಜಾಗರಣಾ ವೇದಿಕೆ, ಶ್ರೀರಾಮಸೇನೆಯ ಇತಿಹಾಸದಲ್ಲಿ ಇಂತಹ ಹಲವು ವಸೂಲಿ ಪ್ರಕರಣಗಳು ದಾಖಲಾಗಿವೆ.
ಮಂಗಳೂರು ಉಡುಪಿಯಲ್ಲಿ ಈವರೆಗೆ ಸಾವಿರಾರು ನೈತಿಕ ಪೊಲೀಸ್ ಗಿರಿ ಘಟನೆಗಳು ನಡೆದಿವೆ. ಹಿಂದುತ್ವ, ಸಂಸ್ಕೃತಿ, ಹಿಂದೂ ಹೆಣ್ಣು ಮಕ್ಕಳ ರಕ್ಷಣೆ ಹೆಸರಲ್ಲಿ ಭಜರಂಗದಳ, ಹಿಂದೂ ಜಾಗರಣಾ ವೇದಿಕೆ, ಶ್ರೀರಾಮ ಸೇನೆ ನಡೆಸುವ ನೈತಿಕ ಪೊಲೀಸ್ ಗಿರಿಯ ಹೆಚ್ಚಿನ ಪ್ರಕರಣಗಳ ಎಫ್ಐಆರ್‌ನಲ್ಲಿ IPC 390 ಕೂಡಾ ಹಾಕಲಾಗಿರುತ್ತದೆ. ಅಂದರೆ ಹಿಂದುತ್ವ, ಹಿಂದೂ ಹೆಣ್ಣು ಮಕ್ಕಳ ರಕ್ಷಣೆ ಹೆಸರಲ್ಲಿ ಇವರುಗಳು ‘ದರೋಡೆ’ ನಡೆಸುತ್ತಾರೆ ಎಂದರ್ಥ!
ತಣ್ಣೀರುಬಾವಿ ಬೀಚ್‌ನಲ್ಲಿ ಹಿಂದೂ ಯುವತಿ ಮತ್ತು ಮುಸ್ಲಿಂ ಹುಡುಗ ಕುಳಿತು ಹರಟುತ್ತಿದ್ದಾಗ ಹಿಂದುತ್ವ ಕಾರ್ಯಕರ್ತರು ದಾಳಿ ನಡೆಸಿದ್ದರು. “ನಿನಗೆ ಮುಸ್ಲಿಂ ಹುಡುಗರೇ ಆಗಬೇಕಾ? ನಾವು ಆಗೋದಿಲ್ವಾ?” ಎಂದು ಪ್ರಶ್ನೆಯಿಂದ ಆರಂಭವಾಗುವ ದಾಳಿ ಹುಡುಗ ಹುಡುಗಿಯ ಮೇಲೆ ಹಲ್ಲೆ ನಡೆಸಿ ಹುಡುಗಿಯ ಕುತ್ತಿಗೆಯಲ್ಲಿದ್ದ ಚೈನ್, ಕೈಯಲ್ಲಿದ್ದ ಬಳೆ, ವಾಚ್‌ಗಳನ್ನು ದರೋಡೆ ಮಾಡುವುದರೊಂದಿಗೆ ಕೊನೆಗೊಳ್ಳುತ್ತದೆ. ದಾಳಿಯ ಸಮಯದಲ್ಲಿ ನಡೆಯುವ ಹಲ್ಲೆ, ಗದ್ದಲ, ಓಡಾಟದಲ್ಲಿ ತಮ್ಮ ಕೈಯ್ಯಲ್ಲಿದ್ದ ಅಮೂಲ್ಯ ವಸ್ತುಗಳು ಬಿದ್ದು ಕಳೆದು ಹೋದವೇನೋ ಎಂದು ಸಂತ್ರಸ್ತ ಹುಡುಗ ಹುಡುಗಿ ಅಂದುಕೊಂಡು ಸುಮ್ಮನಿರಬೇಕು ಅನ್ನುವಂತಹ ವಾತಾವರಣವನ್ನು ಹಿಂದುತ್ವವಾದಿಗಳು ಸೃಷ್ಟಿಸುತ್ತಾರೆ.
2015 ಆಗಸ್ಟ್ 25ರಂದು ಅತ್ತಾವರದ ಬಾಬುಗುಡ್ಢೆ ಸಮೀಪ ಹಿಂದುತ್ವ ಕಾರ್ಯಕರ್ತರು ಕಾರೊಂದನ್ನು ತಡೆದು ನಿಲ್ಲಿಸುತ್ತಾರೆ. ಅತ್ತಾವರ ಸೂಪರ್ ಮಾರ್ಕೆಟ್‌ನ ಮ್ಯಾನೇಜರ್ ಶಾಕಿರ್ ಎಂಬವರು ಜೊತೆಗೆ ಕೆಲಸ ಮಾಡುವ ಹಿಂದೂ ಯುವತಿಗೆ ಕಾರಿನಲ್ಲಿ ಡ್ರಾಪ್ ಕೊಡುವಾಗ ಹಿಂದುತ್ವ ಸಂಘಟನೆಯವರು ಕಾರನ್ನು ತಡೆಯುತ್ತಾರೆ. ಶಾಕೀರ್‌ನ ಬಳಿ ಇದ್ದ ಹಣ, ಮೊಬೈಲ್‌ಗಳನ್ನು ದರೋಡೆ ಮಾಡಿ ಶಾಕೀರ್‌ನನ್ನು ಬೆತ್ತಲೆ ಮಾಡಿ ಕಂಬಕ್ಕೆ ಕಟ್ಟಿ ಹಾಕಿ ಹಲ್ಲೆ ನಡೆಸುತ್ತಾರೆ. ಹಿಂದೂ ಯುವತಿ ಜೊತೆ ಇದ್ದರು ಎಂಬುದು ಕಾರಣವಾದರೂ ಅದರ ಹಿನ್ನಲೆಯಲ್ಲಿ ಇದ್ದಿದ್ದು ದರೋಡೆ. ಹಾಗಾಗಿ ಪಾಂಡೇಶ್ವರ ಪೊಲೀಸರು 13 ಹಿಂದುತ್ವ ಕಾರ್ಯಕರ್ತರ ವಿರುದ್ದ ಐಪಿಸಿ 395 (ದರೋಡೆ), 307(ಕೊಲೆಯತ್ನ) ಸೆಕ್ಷನ್‌ಗಳ ಅಡಿಯಲ್ಲಿ ಕೇಸ್ ದಾಖಲಿಸುತ್ತಾರೆ.
2009 ಜನವರಿ 24 ಮಂಗಳೂರಿನ ಅಮ್ನೇಶಿಯಾ ಪಬ್ ಮೇಲೆ ಶ್ರೀರಾಮ ಸೇನೆ ದಾಳಿ ನಡೆಸಿತ್ತು. “ಹಿಂದೂ ಹುಡುಗಿಯರು ತುಂಡುಡುಗೆ ಹಾಕಿ ಅನ್ಯಧರ್ಮಿಯರ ಜೊತೆ ಕುಣಿಯುತ್ತಿದ್ದರು ಮತ್ತು ಹುಡುಗಿಯರು ಕುಡಿಯುತ್ತಿದ್ದರು. ಹಾಗಾಗಿ ಹಿಂದೂ ಸಂಸ್ಕೃತಿಯ ರಕ್ಷಣೆಗಾಗಿ ದಾಳಿ ನಡೆಸಲಾಯಿತು” ಎಂದು ಶ್ರೀರಾಮ ಸೇನೆ ಹೇಳಿತ್ತು. ವಾಸ್ತವವಾಗಿ ಶ್ರೀರಾಮ ಸೇನೆಯ ಮಂಗಳೂರು ಅಧ್ಯಕ್ಷ ಪ್ರಸಾದ್ ಅತ್ತಾವರರ ಸೆಕ್ಯೂರಿಟಿ ಏಜೆನ್ಸಿಗೆ ಅಮ್ನೇಶಿಯಾ ಪಬ್ ಸೆಕ್ಯೂರಿಟಿ ಗುತ್ತಿಗೆಯನ್ನು ಕೊಡಲಿಲ್ಲ ಅನ್ನುವ ಕಾರಣಕ್ಕಾಗಿ ಹಿಂದುತ್ವದ ಹೆಸರಿನಲ್ಲಿ ದಾಳಿ ನಡೆಸಲಾಯಿತು. ದಾಳಿ ನಡೆಸಿದ ಶ್ರೀರಾಮ ಸೇನೆ ಸದಸ್ಯರು ಪಬ್‌ನಲ್ಲಿ ಹುಡುಗಿಯರ ದರೋಡೆ ನಡೆಸಿದರು.
ಇದೇ ಶ್ರೀರಾಮ ಸೇನೆಯ ಅಧ್ಯಕ್ಷನಾಗಿದ್ದ ಪ್ರಸಾದ್ ಅತ್ತಾವರ ಭೂಗತ ಪಾತಕಿ ರವಿ ಪೂಜಾರಿ ಜೊತೆ ಶಾಮೀಲಾಗಿ ಉದ್ಯಮಿಗಳಿಗೆ, ಬಿಲ್ಡರ್‌ಗಳಿಗೆ ಹಫ್ತಾಕ್ಕಾಗಿ ಬೆದರಿಕೆ ಒಡ್ಡಿದ್ದರು ಎಂದು 2010 ಮಾರ್ಚ್ 1 ರಂದು ಕದ್ರಿ ಪೊಲೀಸರು ಬಂಧಿಸಿದ್ದರು.
02 ಏಪ್ರಿಲ್ 2010ರಂದು ತೆಹಲ್ಕಾ ಪತ್ರಿಕೆಯು ಒಂದು ರಹಸ್ಯ ಕಾರ್ಯಾಚರಣೆಯನ್ನು ಬಯಲು ಮಾಡಿತ್ತು. ಶ್ರೀರಾಮ ಸೇನೆಯ ಸ್ಥಾಪಕ ಅಧ್ಯಕ್ಷ ಪ್ರಮೋದ್ ಮುತಾಲಿಕ್ ಕೋಮುಗಲಭೆಗಾಗಿ ಹಣಕಾಸಿನ ಡೀಲ್‌ಗೆ ಒಪ್ಪಿಕೊಳ್ಳುತ್ತಾರೆ.
2012 ಜುಲೈ 28ರಂದು ಹಿಂದೂ ಜಾಗರಣಾ ವೇದಿಕೆಯ ಸದಸ್ಯರು ಪಡೀಲ್‌ನಲ್ಲಿರುವ ಹೋಂ ಸ್ಟೇ ಮೇಲೆ ದಾಳಿ ನಡೆಸುತ್ತಾರೆ. ಹೋಂ ಸ್ಟೇನಲ್ಲಿ ಹಿಂದೂ ಹುಡುಗಿಯರು ರೇವ್ ಪಾರ್ಟಿ ಮಾಡುತ್ತಿದ್ದಾರೆ ಎಂದು ಆರೋಪಿಸಲು ಈ ದಾಳಿ ಆಯೋಜಿಸಲಾಗಿತ್ತು. ಆದರೆ ನಾನು ಕ್ಯಾಮೆರಾ ಜೊತೆ ಸ್ಥಳಕ್ಕೆ ತಲುಪಿದ್ದರಿಂದ ಈ ದಾಳಿ “ದರೋಡೆ”ಗಾಗಿ ನಡೆದ ದಾಳಿ ಎಂಬ ಸತ್ಯವನ್ನು ಬಹಿರಂಗಪಡಿಸಲು ಸಾಧ್ಯವಾಯಿತು. ವಾಸ್ತವವಾಗಿ ಹೋಂ ಸ್ಟೇನಲ್ಲಿ ಬರ್ತ್ ಡೇ ಪಾರ್ಟಿ ನಡೆಯುತ್ತಿತ್ತು. ಹುಡುಗಿಯರು ಹಾಕಿದ್ದ ವಸ್ತ್ರಗಳನ್ನು ಹಿಂದೂ ಜಾಗರಣಾ ವೇದಿಕೆಯ ಸದಸ್ಯರೇ ಎಳೆದು ಕಿತ್ತುಕೊಂಡು ಹುಡುಗಿಯರನ್ನು ಕೋಣೆಯೊಂದರ ಬೆಡ್ ಮೇಲೆ ಕೂಡಿ ಹಾಕಿ ಫೋಟೊ ತೆಗೆಯಲಾರಂಭಿಸಿದರು. ಇನ್ನೂ ಮುಂದುವರೆದ ಕೆಲ ಹಿಂಜಾವೇ ಸದಸ್ಯರು, ಹುಡುಗಿಯರ ಕುತ್ತಿಗೆಗೆ ಕೈ ಹಾಕಿ ಬಂಗಾರದ ಸರಗಳನ್ನು ದರೋಡೆ ಮಾಡಿದರು. ಎಫ್ಐಆರ್‌ನಲ್ಲೂ ಈ ಘಟನೆಗಳು ದಾಖಲಾಗಿವೆ.

23 ಮೇ 2018ರ ಸಂಜೆ ಮಂಗಳೂರು ತಣ್ಣೀರು ಬಾವಿ ಬೀಚ್‌ನಲ್ಲಿ ಯುವಕ ಯುವತಿಯರು ಹುಟ್ಟು ಹಬ್ಬ ಆಚರಣೆ ಮಾಡುತ್ತಿದ್ದರು. ಬೀಚ್ ಪಾರ್ಟಿಯಲ್ಲಿ ಅಶ್ಲೀಲತೆ ಇದೆ ಎಂದು ಹಿಂದುತ್ವ ಸಂಘಟನೆ ದಾಳಿ ನಡೆಸಿತ್ತು. ಕತ್ತಲಿನ ಸಮಯವಾದ್ದರಿಂದ ಪರಿಸ್ಥಿತಿಯ ಲಾಭ ಮಾಡಿಕೊಂಡ ಹಿಂದೂ ಕಾರ್ಯಕರ್ತರು ಅಲ್ಲಿದ್ದ ಯುವಕ ಯುವತಿಯರ ಬೆಲೆಬಾಳುವ ಮೊಬೈಲ್, ಹಣ, ಚಿನ್ನವನ್ನು ದರೋಡೆ ಮಾಡಿದ್ದಾರೆ. ಈ ಬಗ್ಗೆ 24 ಮೇ 2018 ರಂದು ಹಿಂದೂ ಕಾರ್ಯಕರ್ತರ ವಿರುದ್ದ ಮಹಿಳೆಯರ ಮೇಲೆ ದೌರ್ಜನ್ಯ, ಡಕಾಯಿತಿ ಸೆಕ್ಷನ್‌ಗಳಡಿಯಲ್ಲಿ ಪಣಂಬೂರು ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.
ಇಂತಹ ನೂರಾರು ಉದಾಹರಣೆ ಹಿಂದುತ್ವ ರಕ್ಷಣೆಯ ಕಾರ್ಯದಲ್ಲಿ ದಂಡಿಯಾಗಿ ಸಿಗುತ್ತವೆ. ಕುಂದಾಪುರದ ಚೈತ್ರಾ ಅವರದ್ದು ಅದರ ರಾಜಕೀಯದ ವರ್ಷನ್ ಅಷ್ಟೆ. ಭಾಷಣಕಾರ್ತಿಯಾಗದೇ ಕಾಲಾಳು ಆಗಿದ್ದರೆ ಚೈತ್ರಾ ಕೂಡಾ ನೈತಿಕ ಪೊಲೀಸ್ ಗಿರಿಯನ್ನೇ ಹಣಕ್ಕಾಗಿ ಆಶ್ರಯಿಸುತ್ತಿದ್ದಾರೇನೋ? ಚೈತ್ರಾ ಅವರನ್ನು ಚುನಾವಣಾ ಪ್ರಚಾರ ಭಾಷಣಗಳಿಗಾಗಿ ಬಳಕೆ ಮಾಡಿದ್ದರಿಂದ ಅವರು ರಾಜಕೀಯ ಭ್ರಷ್ಟಾಚಾರದಲ್ಲಿ ತೊಡಗಿಕೊಂಡರು. ಕೋಮುದ್ವೇಷದ ಭಾಷಣಗಳನ್ನೇ ಬಂಡವಾಳ ಮಾಡಿಕೊಂಡು ಬಿಜೆಪಿ ಉನ್ನತ ನಾಯಕರನ್ನು ಪರಿಚಯಿಸಿಕೊಂಡು ಅದನ್ನೇ ದಂಧೆಯನ್ನಾಗಿ ಪರಿವರ್ತಿಸಿಕೊಂಡರು.
ಕುಂದಾಪುರದ ಮಾಡಿದ್ದು ಸೊಫೆಸ್ಟಿಕೇಟ್ ದರೋಡೆ. ನಾನು ಹಿಂದುತ್ವದ ದೊಡ್ಡ ನಾಯಕಿ, ನನಗೆ ಹಿಂದುತ್ವ ನಾಯಕರ ಪರಿಚಯವಿದೆ. ಬಿಜೆಪಿಯಲ್ಲಿ ಟಿಕೆಟ್ ನೀಡುವುದೇ ಹಿಂದುತ್ವ ನಾಯಕರು ಎಂದು ನಂಬಿಸಿ ಐದು ಕೋಟಿ ರೂ.ಗಳನ್ನು ಬಿಜೆಪಿ ಹಿತೈಷಿ ಉದ್ಯಮಿಯಿಂದ ಚೈತ್ರಾ ದರೋಡೆ ಮಾಡಿದರು. ಇದರ ಮುಂದುವರೆದ ಭಾಗವೇ ಆರ್‌ಎಸ್ಎಸ್‌ನ ರಾಜಕೀಯ ವಿಭಾಗವಾಗಿರುವ ಬಿಜೆಪಿ ನಡೆಸಿದ ಅಪರೇಷನ್ ಕಮಲ ಎಂಬ ಹಣಕಾಸಿನ ದಂಧೆ. ಬಿ.ಎಲ್.ಸಂತೋಷ್ ಎಂಬ ಆರ್‌ಎಸ್‌ಎಸ್ ಮಾಜಿ ಪ್ರಚಾರಕ, ಹಾಲಿ ಬಿಜೆಪಿಯ ರಾಷ್ಟ್ರೀಯ ಪ್ರಧಾನ ಸಂಘಟನಾ ಕಾರ್ಯದರ್ಶಿ ವಿರುದ್ದ ತೆಲಂಗಾಣದಲ್ಲೂ ಇಂತದ್ದೇ ಪ್ರಕರಣ ದಾಖಲಾಗಿತ್ತು.
ಚೈತ್ರಾ ಮತ್ತು ಬಲಪಂಥೀಯರು ಮಾತ್ರ ವ್ಯವಹಾರ ಮಾಡಿ ಸಿಕ್ಕಿ ಬೀಳುತ್ತಾರೆಯೇ? ಕಾಂಗ್ರೆಸ್ ಮತ್ತು ಎಡಪಂಥೀಯರು ಅಕ್ರಮ ವ್ಯವಹಾರಗಳನ್ನು ಮಾಡಿದ್ದೇ ಇಲ್ಲವೇ? ಎಂಬ ಪ್ರಶ್ನೆ ಕೇಳಬಹುದು. ಎಡಪಂಥೀಯರು ಅಕ್ರಮ ವ್ಯವಹಾರ(?) ಮಾಡಿರಬಹುದೇನೋ. ಹಾಗಂತ ನಿಮಗೆ ಸಮಾನತೆ, ಸಹೋದರತೆ, ಸೌಹಾರ್ದತೆ, ಜಾತ್ಯತೀತತೆ ತಂದುಕೊಡುತ್ತೇನೆ ಎಂಬ ಹೆಸರಿನಲ್ಲಿ ಹಣಕಾಸಿನ ವ್ಯವಹಾರ ಮಾಡಿದ ಒಂದೇ ಒಂದು ಉದಾಹರಣೆ ಸಿಗಲಿಕ್ಕಿಲ್ಲ. ಸಿದ್ದಾಂತಕ್ಕೂ ವ್ಯವಹಾರಕ್ಕೂ ಸಂಬಂಧ ಇರಕೂಡದು. ಆದರೆ ಚೈತ್ರಾ ಮತ್ತು ಗ್ಯಾಂಗ್ ನಡೆಸಿರುವುದು ಸಿದ್ದಾಂತದ ವ್ಯವಹಾರ. ಹಿಂದುತ್ವ ಸಂಘಟನೆಯ ಪ್ರತೀ ಕಾರ್ಯಾಚರಣೆಯಲ್ಲೂ ಇಂತದ್ದೊಂದು ವ್ಯವಹಾರದ ಎಳೆ ಸಿಕ್ಕೇ ಸಿಗುತ್ತದೆ.
ಸಂಘಪರಿವಾರದ ಕಾಲಾಳುಗಳು ಬೆಳೆದು ಬಂದ ದಾರಿಯ ಸಮಸ್ಯೆ ಅದು. ಚೈತ್ರಾ ಮಾತ್ರವಲ್ಲ, ಭಜರಂಗದಳ- ಹಿಂದೂ ಜಾಗರಣಾ ವೇದಿಕೆ ಸೇರಿದಂತೆ ಸಂಘಪರಿವಾರದ ಉಗ್ರವಾದಿ ಸಂಘಟನೆಗಳ ನಿರುದ್ಯೋಗಿ ಸದಸ್ಯರುಗಳು ತಮ್ಮ ಆರ್ಥಿಕ ಸಂಕಷ್ಟವನ್ನು ನೀಗಿಸಿಕೊಳ್ಳಲು ‘ದರೋಡೆ‘ಗೆ ಹಿಂದುತ್ವ ಅಸ್ತ್ರವನ್ನು ಬಳಸುವುದು ಒಂದು ಆಶ್ವರ್ಯಕರ ಬೆಳವಣಿಗೆಯೇ ಅಲ್ಲ. ಸಂಘಪರಿವಾರದ ಅಂಗ ಸಂಘಟನೆಗಳ ಕಾರ್ಯಶೈಲಿಯೇ ದರೋಡೆ ಮಾದರಿಯದ್ದು!