ಜನಾಂಗೀಯ ದ್ವೇಷ, ಧಾರ್ಮಿಕ ತಾರತಮ್ಯ, ಹಿಂಸೆಗೆ ಪ್ರಚೋದಿಸಿದ ಡಾ. ಅರುಣ್ ಉಳ್ಳಾಲ್ ಮೇಲೆ ಐಟಿ ಸೆಕ್ಷನ್ ಅಡಿ ಸೆನ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದು ಸರಿಯಲ್ಲ.

ಕರಾವಳಿ

ಕಾಮ್ರೇಡ್ ಮುನೀರ್ ಕಾಟಿಪಳ್ಳ

“ಕ್ರೈಸ್ತ ಹಾಗೂ ಮುಸ್ಲಿಮರ ಮದುವೆ ಹಾಲ್ ಗಳು, ಶಿಕ್ಷಣ ಸಂಸ್ಥೆಗಳನ್ನು ಹಿಂದುಗಳು ಬಹಿಷ್ಕರಿಸಬೇಕು…” ಎಂದು ಜನಾಂಗೀಯ ದ್ವೇಷ, ಧಾರ್ಮಿಕ ತಾರತಮ್ಯ, ಹಿಂಸೆಗೆ ಪ್ರಚೋದಿಸುವ ಭಾಷಣ ಮಾಡಿದ ಡಾ. ಅರುಣ್ ಉಳ್ಳಾಲ್ ಮೇಲೆ ಮಂಗಳೂರು ಪೊಲೀಸ್ ಇಲಾಖೆ ಸ್ವಯಂಪ್ರೇರಿತ ಪ್ರಕರಣ ದಾಖಲಿಸಿರುವುದು ಸ್ವಾಗತಾರ್ಹ.

ಆದರೆ, ಪ್ರಕರಣ ಐಟಿ ಸೆಕ್ಷನ್ ಅಡಿ ಸೆನ್ ಠಾಣೆಯಲ್ಲಿ ದಾಖಲಿಸಿದ್ದು ಸರಿಯಲ್ಲ. ಘಟನೆ ನಡೆದದ್ದು ಸಾಮಾಜಿಕ ಜಾಲತಾಣದಲ್ಲಿ ಅಲ್ಲ, ಉಳ್ಳಾಲ ಠಾಣಾ ವ್ಯಾಪ್ತಿಯ ಕಿನ್ಯಾ ಗ್ರಾಮದ ಕೇಶವ ಶಿಶು ಮಂದಿರದಲ್ಲಿ ಅದರ ಆಡಳಿತ ಸಮಿತಿ ಆಯೋಜಿಸಿದ ಕಾರ್ಯಕ್ರಮದ ವೇದಿಕೆಯಲ್ಲಿ ಘಟನೆ ನಡೆದಿದೆ. ಆದುದರಿಂದ ಪ್ರಕರಣ ದಾಖಲಾಗಬೇಕಿರುವುದು ಉಳ್ಳಾಲ ಪೊಲೀಸ್ ಠಾಣೆಯಲ್ಲಿ. ಕಾರ್ಯಕ್ರಮದ ಆಯೋಜಕರು, ಇಂತಹ ಭಾಷಣಕ್ಕೆ ಅರುಣ್ ಉಳ್ಳಾಲ ಅವರಿಗೆ ಪ್ರೇರಣೆ ಒದಗಿಸಿದ ವೇದಿಕೆಯಲ್ಲಿದ್ದ ಕಲ್ಲಡ್ಕ ಪ್ರಭಾಕರ ಭಟ್ ಮುಂತಾದವರನ್ನು ಆರೋಪಿಯಾಗಿಸಿ ಪ್ರಕರಣ ದಾಖಲಿಸಬೇಕಿತ್ತು.

ಅದರ ಬದಲಿಗೆ ಐಟಿ ಸೆಕ್ಷನ್ ಅಡಿ ಪ್ರಕರಣ ದಾಖಲಿಸಿರುವುದರಿಂದ ಪ್ರಕರಣ ದುರ್ಬಲಗೊಳ್ಳುವ, ಆರೋಪಿ ಬಚಾವಾಗುವ ಸಾಧ್ಯತೆಗಳಿವೆ. ಮಂಗಳೂರು ಪೊಲೀಸ್ ಕಮೀಷನರ್ ಈ ಕುರಿತು ಗಮನ ಹರಿಸಿ, ಜನಾಂಗ ದ್ವೇಷದ ಮಾತುಗಾರರು ತಪ್ಪಿಸಿಕೊಳ್ಳದಂತೆ ಎಫ್ಐಆರ್ ಬಲಗೊಳಿಸಲು ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸುತ್ತೇವೆ.