ಭಾರತದ ನೆತ್ತಿಯ ಮೇಲಿರುವ ಕಣಿವೆ ರಾಜ್ಯ ಜಮ್ಮು ಕಾಶ್ಮೀರದಲ್ಲಿ ಬಿಜೆಪಿ – ಪಿಡಿಪಿ ಕಿಕ್ ಔಟ್ ಆಗಿದೆ. ನ್ಯಾಷನಲ್ ಕಾನ್ಫರೆನ್ಸ್, ಕಾಂಗ್ರೆಸ್ ಮೈತ್ರಿಕೂಟಕ್ಕೆ ಅಧಿಕಾರ ಲಭಿಸಿದೆ. ಈ ಚುನಾವಣೆ ರಾಷ್ಟ್ರದ ಗಮನ ಸೆಳೆದಿತ್ತು. ಕೇಂದ್ರಾಡಳಿತ ಪ್ರದೇಶದಲ್ಲಿ ಮೂರು ಹಂತಗಳಲ್ಲಿ ಚುನಾವಣೆ ನಡೆದಿತ್ತು. ರಾಜ್ಯಕ್ಕೆ ಸಂವಿಧಾನದ 370 ನೇ ವಿಧಿ ಅನ್ವಯ ನೀಡಿದ್ದ ವಿಶೇಷ ಸ್ಥಾನಮಾನವನ್ನು ಕೇಂದ್ರ ಸರಕಾರ ರದ್ದುಪಡಿಸಿದ ನಂತರ ನಡೆದ ಮೊದಲ ಚುನಾವಣೆ ಇದಾಗಿತ್ತು. ಈ ನಿರ್ಧಾರ ಐತಿಹಾಸಿಕ ಅಂತ ಹೇಳಿ ಬೀಗುತ್ತಿದ್ದ ಬಿಜೆಪಿಗೆ ಅಲ್ಲಿನ ಮತದಾರ ಸರಿಯಾದ ಏಟು ನೀಡಿದ್ದಾರೆ. ಹಲವಾರು ಗ್ಯಾರಂಟಿ ಯೋಜನೆಗಳನ್ನು ಪ್ರಕಟಿಸಿ ಬಿಜೆಪಿ ಮತದಾರರನ್ನು ಸೆಳೆಯುವ ಪ್ರಯತ್ನ ಮಾಡಿತ್ತು. ಆದರೆ ಅದಕ್ಕೆ ಕಾಶ್ಮೀರ ಜನತೆ ಸೊಪ್ಪು ಹಾಕಿಲ್ಲ.

ಜಮ್ಮು ಕಾಶ್ಮೀರದಲ್ಲಿ ಕೊನೆಯ ಬಾರಿ ವಿಧಾನಸಭೆ ನಡೆದಿದ್ದು 2014 ರಲ್ಲಿ. ಅತಿ ದೊಡ್ಡ ಪಕ್ಷವಾಗಿ ಹೊರಹೊಮ್ಮಿದ್ದ ಪಿಡಿಪಿ ಬಿಜೆಪಿಯೊಂದಿಗೆ ಮೈತ್ರಿ ಮಾಡಿಕೊಂಡು ಅಧಿಕಾರ ನಡೆಸಿತ್ತು. 2018 ರಲ್ಲಿ ಸರಕಾರ ಪತನಗೊಂಡಿತ್ತು. ಆ ನಂತರ ಇಲ್ಲಿ ಚುನಾವಣೆ ನಡೆದಿಲ್ಲ . ಆದರೆ ಇದೀಗ ನಡೆದ ಚುನಾವಣೆಯಲ್ಲಿ ಕಾಂಗ್ರೆಸ್ -ನ್ಯಾಷನಲ್ ಕಾನ್ಫರೆನ್ಸ್ ಮೈತ್ರಿಕೂಟ ಭರ್ಜರಿ ಜಯ ಭೇರಿ ಭಾರಿಸಿದೆ. ಕಾಶ್ಮೀರದ ಜನತೆಗೆ ರಾಹುಲ್ ಗಾಂಧಿ ಡರೋ ಮತ್ ಅಭಯ ನೀಡಿದ್ದರು. ಇದು ಮ್ಯಾಜಿಕ್ ಮಾಡಿದೆ. ಮೋದಿ ಸರಕಾರಕ್ಕೆ ದೊಡ್ಡ ಹಿನ್ನಡೆ ಉಂಟು ಮಾಡಿದೆ.
