ರಾಷ್ಟ್ರಮಟ್ಟದಲ್ಲಿ ಸಂಚಲನ ಸೃಷ್ಟಿಸಿ, ರಾಜ್ಯ ರಾಜಕೀಯ ನಾಯಕರು ಹಾಗೂ ಐಪಿಎಸ್ ಅಧಿಕಾರಿಗಳಲ್ಲಿ ನಡುಕ ಹುಟ್ಟಿಸಿರುವ ‘ಬಿಟ್ ಕಾಯಿನ್’ ಹಗರಣದ ದಿಕ್ಕನ್ನೇ ಬದಲಿಸುವ ಸ್ಪೋಟಕ ಮಾಹಿತಿ ಬಹಿರಂಗವಾಗಿದೆ. ಪ್ರಕರಣದ ಪ್ರಮುಖ ಆರೋಪಿ ಎನ್ನಲಾದ ಹ್ಯಾಕರ್ ಶ್ರೀಕಿ ಅಲಿಯಾಸ್ ಶ್ರೀಕೃಷ್ಣನಿಗೂ ಮುನ್ನವೇ ಬಿಟ್ ಕಾಯಿನ್ ಹ್ಯಾಕಿಂಗ್ನಲ್ಲಿ ಕೈಚಳಕ ತೋರಿ ಭೂಗತನಾಗಿದ್ದ ಇನ್ನೊಬ್ಬ ಅಂತಾರಾಷ್ಟ್ರೀಯ ಹ್ಯಾಕರ್ನನ್ನು ವಿಶೇಷ ತನಿಖಾ ದಳ ಬಂಧಿಸಿದೆ.ಇದೇ ವೇಳೆ ಹಗರಣ ಸಾಬೀತುಪಡಿಸುವ ಸಾಕ್ಷ್ಯ ಸಂಗ್ರಹಕ್ಕಾಗಿ ಎಸ್ಐಟಿ ತಂಡವು ಕೇಂದ್ರ ತನಿಖಾ ಸಂಸ್ಥೆಗಳ ನೆರವು ಕೋರಿರುವುದರಿಂದ ಶೀಘ್ರದಲ್ಲೇ ತನಿಖೆ ಇನ್ನಷ್ಟು ವೇಗ ಪಡೆದುಕೊಳ್ಳಲಿದೆ.
ಬರೋಬ್ಬರಿ 4 ವರ್ಷಗಳಿಂದ ತಲೆಮರೆಸಿಕೊಂಡಿದ್ದ ಆರೋಪಿಯನ್ನು ಕರ್ನಾಟಕ ಪೊಲೀಸರು ಪಂಜಾಬ್ನಲ್ಲಿ ಬಂಧಿಸಿದ್ದಾರೆ.ರಾಜೇಂದ್ರ ಸಿಂಗ್ ಹಗರಣದ ಕಿಂಗ್ಪಿನ್ ಎಂದು ಹೇಳಲಾಗುತ್ತಿದ್ದು, ವಿಚಾರಣೆ ಸಂದರ್ಭದಲ್ಲಿ ಈತ ಬಾಯ್ಬಿಡುವ ಸಂಗತಿಗಳಿಂದ ಪ್ರಕರಣ ಇನ್ನಷ್ಟು ಗಂಭೀರತೆ ಪಡೆದುಕೊಳ್ಳುವ ಸಾಧ್ಯತೆ ಇದೆ. ಆರೋಪಿಯನ್ನು ಈಗಾಗಲೇ ಪಂಜಾಬ್ನಿಂದ ಬೆಂಗಳೂರಿಗೆ ಕರೆತಂದು ತೀವ್ರ ವಿಚಾರಣೆಗೆ ಒಳಪಡಿಸಲಾಗಿದೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.ದೇಶ, ವಿದೇಶದ ಸರ್ಕಾರಿ ಮತ್ತು ಖಾಸಗಿ ವೆಬ್ಸೈಟ್ಗಳನ್ನು ಹ್ಯಾಕ್ ಮಾಡಿ ಹಣ ಲಪಟಾಯಿಸುತ್ತಿದ್ದ ಗ್ಯಾಂಗ್ನಲ್ಲಿ ಈವರೆಗೆ ಶ್ರೀಕಿಯೇ ಕಿಂಗ್ಪಿನ್ ಎನ್ನಲಾಗಿತ್ತು. ಆದರೆ, ಶ್ರೀಕಿಗೂ ಮೊದಲೇ ರಾಜೇಂದ್ರ ಸಿಂಗ್ ಈ ಗ್ಯಾಂಗ್ ಜತೆಗೆ ಕೈ ಜೋಡಿಸಿದ್ದ ಸಂಗತಿ ಈಗ ಬೆಳಕಿಗೆ ಬಂದಿದೆ. ಮೊದಲಿಗೆ ರಾಜೇಂದ್ರ ಸಿಂಗ್ ವೆಬ್ಸೈಟ್ಗಳನ್ನು ಹ್ಯಾಕ್ ಮಾಡುತ್ತಿದ್ದ. ಆನಂತರ ಶ್ರೀಕಿ ಈ ಗ್ಯಾಂಗ್ಗೆ ಪರಿಚಯವಾಗಿ ಸಕ್ರಿಯನಾಗಿದ್ದ.

ಹ್ಯಾಕರ್ ಶ್ರೀಕಿ ಕಡೆಯಿಂದ ಸಿಸಿಬಿ ಪೊಲೀಸರು 9 ಕೋಟಿ ರೂ. ಮೌಲ್ಯದ 31 ಬಿಟ್ ಕಾಯಿನ್ಗಳನ್ನು ವಶಕ್ಕೆ ಪಡೆದಿದ್ದರು. ಇದೇ ಪ್ರಕರಣದ ಕುರಿತು ಈಗ ಎಸ್ಐಟಿ ತನಿಖೆ ಆರಂಭಿಸಿದಾಗ ಪ್ರಕರಣದಲ್ಲಿ ರಾಜೇಂದ್ರ ಸಿಂಗ್ ಎಂಬಾತ ಭಾಗಿಯಾಗಿರುವ ಮಾಹಿತಿ ಸಿಕ್ಕಿತ್ತು. ಆತನ ಇರುವಿಕೆಯ ಬಗ್ಗೆ ಖಚಿತ ಮಾಹಿತಿ ಪಡೆದುಕೊಂಡ ಎಸ್ಐಟಿ ಅಧಿಕಾರಿಗಳು ಇತ್ತೀಚೆಗೆ ಪಂಜಾಬ್ನಲ್ಲಿ ಬಂಧಿಸಿದ್ದಾರೆ ಎಂದು ಪೊಲೀಸ್ ಉನ್ನತ ಮೂಲಗಳು ತಿಳಿಸಿವೆ. ಕೆಂಪೇಗೌಡನಗರ ಠಾಣೆಯಲ್ಲಿ 2020ರಲ್ಲಿ ದಾಖಲಾಗಿದ್ದ ಡ್ರಗ್ಸ್ ಪ್ರಕರಣದಲ್ಲಿ ಕಾಟನ್ಪೇಟೆ ಠಾಣೆಯ ಬಿಟ್ ಕಾಯಿನ್ ಪ್ರಕರಣ ಮತ್ತು ಸಿಐಡಿ ಸೈಬರ್ ಕ್ರೖೆಂ ಠಾಣೆಯಲ್ಲಿ ದಾಖಲಾಗಿದ್ದ ಇ-ಪ್ರಾಕ್ಯೂರ್ವೆುಂಟ್ ವೆಬ್ಸೈಟ್ ಕನ್ನ ಪ್ರಕರಣಗಳನ್ನು ಒಟ್ಟಾಗಿ ಎಸ್ಐಟಿ ತನಿಖೆ ಕೈಗೊಂಡಿದೆ. ಶ್ರೀಕಿ ವ್ಯಾಲೆಟ್ ಮತ್ತು ಇತರ ವ್ಯಾಲೆಟ್ಗಳಲ್ಲಿ ಪ್ರೖೆವೇಟ್ ಕೀ ಬಳಸಿ ಬಿಟ್ ಕಾಯಿನ್ಗಳನ್ನು ಬೇರೆಡೆಗೆ ವರ್ಗಾವಣೆ ಮಾಡಿಕೊಳ್ಳಲಾಗಿದೆ ಎಂಬ ಆರೋಪವಿದೆ. ಈ ತನಿಖೆ ಮೇರೆಗೆ ಶ್ರೀಕಿ ಸೇರಿ ಮೂವರು ಆರೋಪಿಗಳ ಮನೆ ಮೇಲೆ ದಾಳಿ ನಡೆಸಿ ಡಿಜಿಟಲ್ ಮಾಹಿತಿ, ಬ್ಯಾಂಕ್ ಖಾತೆ ವಿವರ ಕಲೆ ಹಾಕಲಾಗಿದೆ. ಸಾಕಷ್ಟು ರಿಕವರಿ ಸಹ ಆಗುತ್ತಿರುವುದು ಉತ್ತಮ ಬೆಳವಣಿಗೆ ಎಂದು ಅಧಿಕಾರಿಗಳು ವಿಶ್ವಾಸ ವ್ಯಕ್ತಪಡಿಸಿದ್ದಾರೆ