ಕೇಂದ್ರ ಸಚಿವ ಪ್ರಹ್ಲಾದ್ ಜೋಷಿಯವರ ಪೂರ್ವಜರು ಮುಸ್ಲೀಮರ ಮತ್ತು ಬ್ರಿಟೀಷರ ಆಡಳಿತದ ಅವಧಿಯಲ್ಲಿ ಯಾರ ಕೈ ಕೆಳಗೆ ದಾಸ್ಯ ಮಾಡುತ್ತಿದ್ದರು ಎನ್ನುವುದನ್ನು ಮೊದಲು ನೆನಪು ಮಾಡಿಕೊಂಡು ನಂತರ ಕಾಂಗ್ರೇಸ್ ಪಕ್ಷ ಮತ್ತು ಕಾಂಗ್ರೇಸ್ ಪಕ್ಷದ ನಾಯಕರ ಬಗ್ಗೆ ಮಾತನಾಡಬೇಕೆಂದು ಶಿವಮೊಗ್ಗ ಜಿಲ್ಲಾ ಕಾಂಗ್ರೇಸ್ ವಕ್ತಾರರಾದ ವೈ.ಬಿ.ಚಂದ್ರಕಾಂತ್ ತಿರುಗೇಟು ನೀಡಿದ್ದಾರೆ.
ಪ್ರಹ್ಲಾದ್ ಜೋಷಿಯವರು ಒಬ್ಬ ಹಿರಿಯ ಮತ್ತು ಅನುಭವಿ ರಾಜಕಾರಣಿ ಮತ್ತು ಕೇಂದ್ರದ ಸಚಿವರಾಗಿ, ಸೋನಿಯಾಗಾಂಧಿ ಮತ್ತು ರಾಹುಲ್ ಗಾಂಧಿಯವರನ್ನು ನಕಲಿ ಗಾಂಧಿ ಕುಟುಂಬವೆಂದು ಹೇಳಿರುವುದು, ಕಾಂಗ್ರೇಸ್ ಪಕ್ಷವನ್ನು ಭಯೋತ್ಪಾದಕರ ಪಕ್ಷವೆಂಬಂತೆ ಮಾತನಾಡಿರುವುದು ನಾಚಿಗೇಡಿನ ಸಂಗತಿಯಾಗಿದೆ ಎಂದು ತಮ್ಮ ಹೇಳಿಕೆಯಲ್ಲಿ ತಿಳಿಸಿದ್ದಾರೆ.
ಸ್ವಾತಂತ್ರ್ಯ ಪೂರ್ವದಲ್ಲಿ ನೆಹರು ಕುಟುಂಬ, ಪ್ರಹ್ಲಾದ್ ಜೋಷಿಯವರ ಪೂರ್ವಜರಂತೆ ಯಾರದೋ ಕೈಕೆಳಗೆ ದಾಸ್ಯದ ಕೆಲಸ ಮಾಡಿ ಅವರು ಕೊಡುತ್ತಿದ್ದ ಎಂಜಲು ಕಾಸಿನಲ್ಲಿ ಜೀವನ ನಡೆಸಿದ್ದರೆ ಇಂದು ಪ್ರಹ್ಲಾದ್ ಜೋಷಿಯವರು ಗೂಟದ ಕಾರಿನಲ್ಲಿ ಓಡಾಡುತ್ತಿರಲಿಲ್ಲ. ವೇತನ ಇತ್ಯಾದಿ ಸೌಲಭ್ಯಗಳ ಪಡೆದು ಐಶಾರಾಮಿ ಜೀವನ ನಡೆಸಲು ಆಗುತ್ತಿರಲ್ಲ. ಆಗ ನೆಹರೂ ಕುಟುಂಬ ಮತ್ತು ದೇಶದ ಜನರು ಬ್ರಿಟೀಷರ ವಿರುದ್ದ ಹೋರಾಡುತ್ತಿದ್ದರೆ ಪ್ರಹ್ಲಾದ್ ಜೋಷಿಯವರ ಪೂರ್ವಜರು ಏನು ಮಾಡುತ್ತಿದ್ದರು ಎನ್ನುವ ಸತ್ಯವು ಇಡೀ ದೇಶಕ್ಕೆ ತಿಳಿದಿದೆ. ಪ್ರಹ್ಲಾದ್ ಜೋಷಿಯವರು ಈಗ ದೇಶ ಪ್ರೇಮದ ಬಗ್ಗೆ ಮಾತನಾಡುವ ಯಾವುದೆ ನೈತಿಕ ಹಕ್ಕನ್ನು ಹೊಂದಿಲ್ಲ. ಸೋನಿಯಾ ಗಾಂಧಿಯವರು ಇಟಲಿಯ ಮಗಳಾದರೂ ಭಾರತದ ಹೆಮ್ಮೆಯ ಸೊಸೆ ಎನ್ನುವುದನ್ನು ಮರೆತಿರುವ ಪ್ರಹ್ಲಾದ್ ಜೋಷಿಯವರು ತಮ್ಮ ಮೂಲದ ಬಗ್ಗೆ ಅರಿತುಕೊಂಡು ಮಾತನಾಡಲಿ ಎಂದು ವೈ.ಬಿ.ಚಂದ್ರಕಾಂತ್ ಎದುರೇಟು ನೀಡಿದ್ದಾರೆ.

ಆಡಳಿತದಲ್ಲಿರುವ ಸರ್ಕಾರಕ್ಕೆ ಸುಳ್ಳು ಮತ್ತು ದ್ವೇಶದ ಹಿನ್ನೆಲೆಯಲ್ಲಿ ಹಾಕಲಾದ ಪ್ರಕರಣಗಳನ್ನು ಹಿಂದಕ್ಕೆ ಪಡೆಯುವ ಸಂವಿಧಾನ ಬದ್ದ ಅಧಿಕಾರವಿದೆ. ಬಿ.ಜೆ.ಪಿ.ಯ ಕೇಂದ್ರ ಸರ್ಕಾರದಂತೆ ಜೀವಾವಧಿ ಶಿಕ್ಷೆಗೆ ಗುರಿಯಾದ ಆರೋಪಿಗಳನ್ನು ಜೈಲಿನಿಂದ ಬಿಡುಗಡೆ ಮಾಡಿ ಸುಪ್ರೀಂ ಕೋರ್ಟ್ ನಿಂದ ಛೀಮಾರಿ ಹಾಕಿಸಿಕೊಂಡಿಲ್ಲ. ಇಂತಹ ಪಕ್ಷದ ನಾಯಕರಾದ ಪ್ರಹ್ಲಾದ್ ಜೋಷಿಯವರು ಕಾಂಗ್ರೇಸ್ ಪಕ್ಷದವರನ್ನು ಬೂಟು ನೆಕ್ಕುವವರು ಎಂದು ತಮ್ಮ ಹೊಲಸು ಬಾಯಿಯಲ್ಲಿ ಹೇಳಿರುವುದು ನೋಡಿದರೆ ಇವರ ಸಂಸ್ಕಾರ ಎಂತದ್ದು ಎಂದು ಸ್ಪಷ್ಠವಾಗಿ ಗೊತ್ತಾಗುತ್ತದೆ ಎಂದು ಕಾಂಗ್ರೇಸ್ ವಕ್ತಾರರಾದ ವೈ.ಬಿ.ಚಂದ್ರಕಾಂತ್ ತಿರುಗೇಟು ನೀಡಿದ್ದಾರೆ.
