ಸ್ವಂತ ತಾಯಿಯೇ ಸಾಥ್.. ನ್ಯಾಯಾಲಯದಿಂದ ಗರಿಷ್ಠ ಶಿಕ್ಷೆ
ಆತನ ಹೆಸರು ಶಿಶುಪಾಲನ್. ಹೆಸರಿನ ರೀತಿಯಲ್ಲಿ ಇರಲಿಲ್ಲ ಆತನ ಸ್ವಭಾವ. ಮೃಗೀಯವಾಗಿ ಇಬ್ಬರು ಅಪ್ರಾಪ್ತ ಹೆಣ್ಣು ಮಕ್ಕಳನ್ನೇ ಅತ್ಯಾಚಾರಕ್ಕೆ ಬಳಸಿಕೊಂಡಿದ್ದ. ಕ್ರೂರ ಕೃತ್ಯಕ್ಕೆ ಹೆಣ್ಣು ಮಕ್ಕಳ ಸ್ವಂತ ತಾಯಿಯೇ ಸಾಥ್ ಕೊಟ್ಟಿದ್ದಳು. ಇದೀಗ ನ್ಯಾಯಾಲಯವು ರಾಕ್ಷಸೀ ತಾಯಿಗೆ ಕಠಿಣ ಶಿಕ್ಷೆ ವಿಧಿಸಿ ತೀರ್ಪು ನೀಡಿದೆ. ಕೇರಳದ ತಿರುವನಂತಪುರದಲ್ಲಿ ನಡೆದಿದ್ದ ಭಯಾನಕ ಘಟನೆಗೆ ಸಂಬಂಧಿಸಿದಂತೆ ತ್ವರಿತಗತಿ ವಿಚಾರಣಾ ನ್ಯಾಯಾಲಯ ತಾಯಿಗೆ 40 ವರ್ಷಗಳ ಕಠಿಣ ಶಿಕ್ಷೆಯ ತೀರ್ಪು ನೀಡಿದೆ.
ಸ್ವಂತ ತಾಯಿ ತಮ್ಮ ಇಬ್ಬರು ಅಪ್ರಾಪ್ತ ಪುತ್ರಿಯರನ್ನು ತನ್ನ ಪ್ರೇಮಿಗೆ ಅತ್ಯಾಚಾರ ನಡೆಸಲು ಸಹಕಾರ ನೀಡಿದ ಕಾರಣಕ್ಕಾಗಿ ಈ ಶಿಕ್ಷೆ ಪ್ರಕಟವಾಗಿದೆ. ಮಕ್ಕಳ ಲಾಲನೆ ಪೋಷಣೆಯಲ್ಲಿ ಪ್ರಧಾನ ಪಾತ್ರ ವಹಿಸಬೇಕಿದ್ದ ತಾಯಿಯೇ ಮಕ್ಕಳ ಪಾಲಿಗೆ ದುಷ್ಟಳಾಗಿದ್ದು, ಕ್ಷಮಿಸಲು ಸಾಧ್ಯವಿಲ್ಲ ಎಂದು ಪರಿಗಣಿಸಿ ನ್ಯಾಯಾಲಯ ಕ್ರಮ ಜರುಗಿಸಿದೆ.
ತ್ವರಿತಗತಿ ವಿಚಾರಣಾ ನ್ಯಾಯಾಲಯವೊಂದು ಪೋಕ್ಸೊ ಕಾಯಿದೆಯಡಿ 40 ವರ್ಷ ಕಠಿಣ ಕಾರಾಗೃಹ ಶಿಕ್ಷೆ ವಿಧಿಸಿರುವುದರ ಜತೆಗೆ 20 ಸಾವಿರ ರೂ. ದಂಡ ವಿಧಿಸಿ ಅಪರೂಪದ ತೀರ್ಪು ನೀಡಿದೆ. ಪೋಕ್ಸೊ ಕೇಸ್‌ನಲ್ಲಿ ಮಹಿಳೆಯೊಬ್ಬರು ಶಿಕ್ಷೆಗೆ ಗುರಿಯಾದ ಪ್ರಕರಣ ಇದಾಗಿದೆ.
ಗಂಡನನ್ನು ತೊರೆದು ಇನ್ನೊಬ್ಬನೊಂದಿಗೆ ಅಕ್ರಮ ಸಂಬಂಧ ಹೊಂದಿದ್ದ ತಾಯಿ ತನ್ನ ಇಬ್ಬರು ಅಪ್ರಾಪ್ತ ಪುತ್ರಿಯರನ್ನು ಆತನೊಂದಿಗೆ ಮಲಗಲು ಸಹಕರಿಸಿದ್ದರು. 2018 ರಲ್ಲಿ ನಡೆದಿದ್ದ ಘಟನೆ ಹೆಣ್ಣುಮಕ್ಕಳ ಅಜ್ಜಿಯ ಗಮನಕ್ಕೆ ಬಂದು ಪೊಲೀಸ್ ದೂರು ನೀಡಿದ್ದರು. ಈ ಬಗ್ಗೆ ತನಿಖೆ ನಡೆಸಿದ ಪೊಲೀಸರು ಪೋಕ್ಸೋ ಪ್ರಕರಣದಲ್ಲಿ ಆರೋಪಿಗಳನ್ನು ಬಂಧಿಸಿದ್ದರು.
ಪ್ರಕರಣದ ವಿಚಾರಣೆ ನಡೆಸಿದ ತ್ವರಿತಗತಿ ನ್ಯಾಯಾಲಯದ ನ್ಯಾ. ಆರ್. ರೇಖಾ, ”ಹೆತ್ತ ಮಕ್ಕಳ ಮೇಲೆ ದೌರ್ಜನ್ಯಕ್ಕೆ ಬೆಂಗಾವಲಾಗಿ ನಿಂತ ಆಪಾದಿತ ಮಹಿಳೆ ತಾಯಿ ಕುಲಕ್ಕೆ ಅವಮಾನ. ಮಕ್ಕಳ ಸುಂದರ ಭವಿಷ್ಯ ಹಾಳು ಮಾಡಿದ ಈಕೆ ಯಾವುದೇ ರೀತಿಯಲ್ಲೂ ಕರುಣೆಗೆ ಅರ್ಹಳಲ್ಲ. ಇಂಥವರಿಗೆ ಕಠಿಣ ಶಿಕ್ಷೆಯೊಂದೆ ದಾರಿ” ಎಂದು ತೀರ್ಪಿನಲ್ಲಿ ಹೇಳಿದರು. ಮಹಿಳೆಗೆ 40 ವರ್ಷ 6 ತಿಂಗಳ ಕಠಿಣ ಸಜೆ ವಿಧಿಸಿದರು. ಆಕೆ 20 ಸಾವಿರ ರೂ ದಂಡ ತೆರುವಲ್ಲಿ ವಿಫಲಳಾದರೆ ಮತ್ತೆ ಆರು ತಿಂಗಳು ಸೆರೆವಾಸ ಮುಂದುವರಿಸಬೇಕು ಎಂದು ನ್ಯಾಯಮೂರ್ತಿ ತೀರ್ಪಿನಲ್ಲಿ ತಿಳಿಸಿದ್ದಾರೆ.
ತಾಯಿಯ ಪ್ರಿಯಕರ ಶಿಶುಪಾಲನ್ ಎಂಬಾತ ಏಳು ವರ್ಷದ ಅಪ್ರಾಪ್ತ ಮಗಳನ್ನು ಲೈಂಗಿಕ ದೌರ್ಜನ್ಯಕ್ಕೆ ಬಳಸಿಕೊಂಡಿದ್ದ. ಜೊತೆಗೆ 11 ವರ್ಷದ ಇನ್ನೊಬ್ಬ ಮಗಳ ಮೇಲೂ ಅತ್ಯಾಚಾರ ಎಸಗಿದ್ದ. ಸ್ವಂತ ತಾಯಿಯೇ ಈತನಿಗೆ ಸಾಥ್ ಕೊಟ್ಟಿದ್ದಳು. ನಿರಂತರ ಲೈಂಗಿಕ ದೌರ್ಜನ್ಯಕ್ಕೆ ಬೇಸತ್ತು ಮಕ್ಕಳಿಬ್ಬರು ತಪ್ಪಿಸಿಕೊಂಡು ಅಜ್ಜಿ ಮನೆಗೆ ಹೋಗಿದ್ದರು. ಆ ನಂತರ ಇಂತಹ ಘನಘೋರ ಕೃತ್ಯ ಬಯಲಿಗೆ ಬಂದಿತ್ತು.