ಕಂಪೆನಿಯೊಂದರ ಬಡಾ ದೋಸ್ತ್ ವಾಹನ ಖರೀದಿಸಿದ ನಂತರ ವಾಹನದಲ್ಲಿ ನಿರಂತರವಾಗಿ ಸಮಸ್ಯೆಗಳು ಉಂಟಾದ ಕಾರಣ ದ.ಕ ಜಿಲ್ಲಾ ಗ್ರಾಹಕ ನ್ಯಾಯಾಲಯದಲ್ಲಿ ದೂರು ಸಲ್ಲಿಕೆಯಾದ ಪ್ರಕರಣದಲ್ಲಿ ನ್ಯಾಯಾಲಯವು ದೂರುದಾರರ ದೂರನ್ನು ಮಾನ್ಯ ಮಾಡಿ ವಾಹನದಲ್ಲಿ ತಯಾರಿಕಾ ದೋಷ ಇದೆ ಎಂಬುದನ್ನು ಎತ್ತಿ ಹಿಡಿದಿದೆ.
ಪುತ್ತೂರಿನ ಪದ್ಮನಾಭ ಪ್ರಭು ಎಂಬವರು 2021 ರಲ್ಲಿ ಖರೀದಿಸಿದ ಬಡಾ ದೋಸ್ತ್ ವಾಹನ ನಿರಂತರವಾಗಿ ಸೆನ್ಸಾರ್ ಹಾಳಾಗುವಿಕೆ, ಲೋ ಪಿಕ್ ಆಪ್, ಹಾಳಾಗುವಿಕೆ ಉಂಟಾದ ಸಮಸ್ಯೆ ಎದುರಿಸಿದ್ದರು. ಈ ಬಗ್ಗೆ ಅವರು 2022 ರಲ್ಲಿ ಜಿಲ್ಲಾ ಗ್ರಾಹಕ ನ್ಯಾಯಾಲಯದಲ್ಲಿ ದೂರು ಸಲ್ಲಿಸಿದ್ದರು. ತಜ್ಞರಿಂದ ವಾಹನ ಪರಿಶೀಲನೆಗೆ ಅರ್ಜಿ ಸಲ್ಲಿಸಲಾಗಿತ್ತು. ಈ ವಾಹನದ ತಯಾರಿಕಾ ಸಂಸ್ಥೆ ಡೀಲರ್ ಮತ್ತು ಅದರ ಪುತ್ತೂರು ಶಾಖೆಗಳನ್ನು ಪ್ರತಿವಾದಿಗಳೆಂದು ಹೆಸರಿಸಲಾಗಿತ್ತು. ದೂರುದಾರರ ಮತ್ತು ಪ್ರತಿವಾದಿಗಳ ಸಾಕ್ಷಿ ವಿಚಾರಣೆ ನಡೆದ ನಂತರ ವಾದಗಳನ್ನು ಆಲಿಸಿ ಗ್ರಾಹಕರ ನ್ಯಾಯಾಲಯ ವಾಹನದಲ್ಲಿ ತಯಾರಿಕಾ ದೋಷ ಇದೆ ಎಂಬ ದೂರುದಾರರ ವಾದವನ್ನು ಎತ್ತಿ ಹಿಡಿದಿದೆ.

ಪ್ರತಿವಾದಿಗಳ ವಾಹನ ಕಂಪನಿ ಮತ್ತು ಡೀಲರ್ ಸಂಸ್ಥೆಗಳು ದೂರುದಾರರಿಗೆ ವಾಹನದ ವೆಚ್ಚ 7,50,321 ರೂಪಾಯಿ ಮೊತ್ತವನ್ನು ಶೇಕಡಾ 6 ರ ಬಡ್ಡಿದರದಲ್ಲಿ ದೂರಿನ ದಿನಾಂಕದಿಂದ ಪರಿಗಣಿಸಿ, ಹಿಂದಿರುಗಿಸುವಂತೆ ಆದೇಶ ನೀಡಿದೆ. ಪ್ರತಿವಾದಿಗಳು ದೂರುದಾರರಿಗೆ ಆದ ಸೇವಾ ನ್ಯೂನತೆ ಮಾನಸಿಕ 25 ಸಾವಿರ ರೂಪಾಯಿ ಹಾಗೂ ವ್ಯಾಜ್ಯ ವೆಚ್ಚವಾಗಿ 10 ಸಾವಿರ ರೂಪಾಯಿ ನೀಡಲು ಆದೇಶ ನೀಡಿದೆ. ದೂರುದಾರರ ಪರವಾಗಿ ಜಿಲ್ಲಾ ಗ್ರಾಹಕ ನ್ಯಾಯಾಲಯದಲ್ಲಿ ಪುತ್ತೂರಿನ ಎಚ್ ಆಂಡ್ ಡಿ ಲೀಗಲ್ ಇದರ ನ್ಯಾಯವಾದಿಗಳಾದ ಹರೀಶ್ ಕುಮಾರ್ ಬಳಕ್ಕ, ದೀಪಕ್ ಬೊಳುವಾರು, ಭುವನೇಶ್ವರಿ ಎಂ, ರಕ್ಷಿತಾ ಬಂಗೇರ ವಾದಿಸಿದ್ದರು.
