ಅಕ್ರಮ ದಂಧೆಯಲ್ಲಿ ಬಿಜೆಪಿ -ಕಾಂಗ್ರೆಸ್ ಭಾಯಿ -ಭಾಯಿ.!ಅಧಿಕಾರಿಗಳು ಮೌನಕ್ಕೆ ಶರಣು
ಬಿಕರ್ನಕಟ್ಟೆ- ಸಾಣೂರು ರಾಷ್ಟ್ರೀಯ ಹೆದ್ದಾರಿ 169 ಕಾಮಗಾರಿ ಪ್ರಗತಿಯಲ್ಲಿದೆ. ಕಾಮಗಾರಿ ಬೇಜವಬ್ದಾರಿತನದಿಂದ ನಡೆಯುತ್ತಿದೆ. ಸಾರ್ವಜನಿಕರಿಂದ ಸಾಕಷ್ಟು ದೂರುಗಳು ಬರುತ್ತಿದೆ. ಈ ಮಧ್ಯೆಯೇ ಗಂಜಿಮಠ ಸಮೀಪದ ಒಂಡೇಲಾ ಹಾಲ್ ಎದುರುಗಡೆ ಇರುವ ಬಲ್ಲಾಳ್ ಹಂಚಿನ ಕಾರ್ಖಾನೆ ಮುಂಭಾಗ ಮುಚ್ಚೂರು ಕ್ರಾಸ್ ರಸ್ತೆಯಿಂದ ಮುಂದುವರಿದು ರಸ್ತೆಗೆ ಸಂಬಂಧಿಸಿದ ಸರಿಸುಮಾರು ಎರಡು ಎಕ್ರೆ ಜಾಗದಲ್ಲಿ ಅಕ್ರಮ ಕಲ್ಲಿನ ಗಣಿಗಾರಿಕೆ ನಡೆಯುತ್ತಿರುವುದು ಬೆಳಕಿಗೆ ಬಂದಿದೆ. ಈ ಅಕ್ರಮ ಗಣಿಗಾರಿಕೆಗೆ ಪ್ರಭಾವಿಗಳು ಸಾಥ್ ನೀಡುತ್ತಿದ್ದು, ಇಲಾಖೆ ಮೌನ ವಹಿಸಿದೆ.

ರಾಷ್ಟ್ರೀಯ ಹೆದ್ದಾರಿಗೆ ಸಂಬಂಧಿಸಿದ ಜಾಗದಲ್ಲೇ ಸಮತಟ್ಟು ಮಾಡುವ ನೆಪದಲ್ಲಿ ನಾಲ್ಕರಿಂದ ಐದು ಮಂದಿ ಐದಾರು ಯಂತ್ರ ಹಾಕಿ ಅಕ್ರಮವಾಗಿ ಕಲ್ಲು ತೆಗೆಯುತ್ತಿದ್ದು ಈ ಅಕ್ರಮದಲ್ಲಿ ಪ್ರಭಾವಶಾಲಿಗಳು ಭಾಗಿಯಾಗಿದ್ದಾರೆ ಅನ್ನುವ ಮಾಹಿತಿ ಇದೆ. ಚುನಾವಣೆ ಸಂದರ್ಭದಲ್ಲಿ ಬಿಜೆಪಿ ಕಾಂಗ್ರೆಸ್ ಎಂದು ಕಾರ್ಯಕರ್ತರು ಪರಸ್ಪರ ಯುದ್ಧದ ರೀತಿಯಲ್ಲಿ ಕೆಲಸ ಮಾಡುತ್ತಾರೆ. ಆದರೆ ನಾಯಕರು ಅಕ್ರಮ ಚಟುವಟಿಕೆಗಳಲ್ಲಿ ಬಿಜೆಪಿ -ಕಾಂಗ್ರೆಸ್ ಎಂದು ಭೇದವಿಲ್ಲದೇ ಬಂಧುತ್ವದಲ್ಲಿ ತೊಡಗಿದ್ದಾರೆ. ಗಂಜಿಮಠ ಬಳಿಯ ಅಕ್ರಮ ಗಣಿಗಾರಿಕೆಯಲ್ಲಿ ಕಾಂಗ್ರೆಸ್ -ಬಿಜೆಪಿ ಪಕ್ಷದಲ್ಲಿ ಗುರುತಿಸಿ ಕೊಂಡವರೇ ಭಾಯಿ -ಭಾಯಿ ಆಗಿ ಅಕ್ರಮ ಗಣಿಗಾರಿಕೆಯಲ್ಲಿ ತೊಡಗಿದ್ದಾರೆ.

ರಾಜಾ ರಸ್ತೆಯಲ್ಲೇ ಅಕ್ರಮ ಗಣಿಗಾರಿಕೆ ನಡೆಯುತ್ತಿದ್ದರೂ ರಾಷ್ಟ್ರೀಯ ಹೆದ್ದಾರಿ ಇಲಾಖೆ ಕಣ್ಣು ಮುಚ್ಚಿ ಕುಳಿತಿದೆ. ರಾಷ್ಟ್ರೀಯ ಹೆದ್ದಾರಿ ಇಂಜಿನಿಯರ್ ಗಳು ಈ ಅಕ್ರಮದಲ್ಲಿ ಭಾಗಿಯಾಗಿದ್ದರಾ ಅನ್ನುವ ಅನುಮಾನ ಕೇಳಿ ಬರುತ್ತಿದೆ. ರಾಜಾ ರಸ್ತೆಯಲ್ಲೇ ದಿನವೊಂದಕ್ಕೆ 7 ರಿಂದ 8 ಸಾವಿರ ಕಲ್ಲು ಅಕ್ರಮವಾಗಿ ಸಾಗಿಸಲಾಗುತ್ತಿದೆ. ಈ ದಂಧೆಗೆ ಇಲಾಖೆಯೇ ಬೆನ್ನೆಲುಬಾಗಿ ನಿಂತಿದೆಯಾ? ಇನ್ನಾದರೂ ರಾಷ್ಟ್ರೀಯ ಹೆದ್ದಾರಿ, ಜಿಲ್ಲಾಧಿಕಾರಿ, ಗಣಿ ಇಲಾಖೆ, ತಹಶೀಲ್ದಾರರು ಹಾಗೂ ಸಂಬಂಧಪಟ್ಟ ಇಲಾಖೆ ಈ ಅಕ್ರಮ ದಂಧೆಗೆ ಕಡಿವಾಣ ಹಾಕಬೇಕಿದೆ.
