ಅಕ್ರಮ ಗೋ ಮಾಂಸ ಕಾದಾಟ..ಹತ್ಯಾಯತ್ನ ಸುತ್ತಮುತ್ತ..

ವಾರದ ಹಿಂದೆ ಜಿಲ್ಲೆಯನ್ನು ಬೆಚ್ಚಿಬೀಳಿಸಿದ ಫರಂಗಿಪೇಟೆಯ ಗ್ಯಾಂಗ್ ವಾರ್ ಆರೋಪಿಗಳ ಪೈಕಿ ಎಂಟು ಮಂದಿಯನ್ನು ಪೊಲೀಸರು ಬಂಧಿಸಿದ್ದು, ಉಳಿದ ಆರು ಮಂದಿ ಆರೋಪಿಗಳಿಗೆ ಪೊಲೀಸರು ಬಲೆ ಬೀಸಿದ್ದಾರೆ. ಫರಂಗಿಪೇಟೆಯ ಅಮ್ಮೆಮ್ಮಾರ್ ನಲ್ಲಿ ನಡೆಯುತ್ತಿದ್ದ ಅಕ್ರಮ ಗೋ ಮಾಂಸ ಕಾದಾಟಕ್ಕೆ ಎರಡು ಗ್ಯಾಂಗ್ ಮಧ್ಯೆ ತಲವಾರು ಕಾಳಗ ನಡೆದಿತ್ತು. ಗ್ಯಾಂಗಿನ ಹುಡುಗರು ಕತ್ತಿಯನ್ನು ಕೈಯಲ್ಲಿಡಿದು ಝಳಪಿಸುವ ಹಾಗೂ ಹಲ್ಲೆ ನಡೆಸುವ ದೃಶ್ಯಾವಳಿಗಳು ಆ ನಂತರ ಸೋಶಿಯಲ್ ಮೀಡಿಯಾಗಳಲ್ಲಿ ವೈರಲ್ ಆಗಿತ್ತು.

ಅಮ್ಮೆಮ್ಮಾರ್ ನಲ್ಲಿ ಮನ್ಸೂರ್ ಎಂಬಾತ ಅಕ್ರಮ ದನದ ವ್ಯಾಪಾರ ನಡೆಸುತ್ತಿದ್ದು, ಈತನ ಜೊತೆಯಲ್ಲೇ ಕೆಲಸಕ್ಕಿದ್ದ ತಸ್ಲೀಮ್ ಹಾಗೂ ಕುಟ್ಟ ಇಮ್ರಾನ್ ಮನ್ಸೂರ್ ಗೆ ಪ್ರತಿಸ್ಪರ್ಧಿ ಎಂಬಂತೆ ವ್ಯಾಪಾರ ಶುರು ಮಾಡಿದ್ರು. ತಸ್ಲೀಂ ಜೊತೆ ಗಳಸ್ಯ ಕಂಠಸ್ಯ ಸ್ನೇಹ ಹೊಂದಿದ್ದ ಪಲ್ಟಿ ಫರಂಗಿಪೇಟೆ ಡಬ್ಬಲ್ ಮರ್ಡರ್ ನಲ್ಲಿ ಜೊತೆಯಾಗಿಯೇ ಕೃತ್ಯದಲ್ಲಿ ಭಾಗಿಯಾಗಿದ್ದರು. ಆನಂತರ ಪಲ್ಟಿ ಮನ್ಸೂರ್ ಜೊತೆ ಸಖ್ಯ ಬೆಳೆಸಿ ತನ್ನ ಗ್ಯಾಂಗ್ ಮೂಲಕ ತಸ್ಲೀಮ್ ಹಾಗೂ ಮುಹಮ್ಮದ್ ಶಾಕೀರ್ ವಿರುದ್ಧ ತಲ್ವಾರ್ ದಾಳಿ ನಡೆಸಿದ್ದರು. ಅಕ್ಟೋಬರ್ 23 ರಂದು ಮಧ್ಯರಾತ್ರಿಯಲ್ಲಿ ನಡೆದ ತಲವಾರು ಕಾಳಗದಲ್ಲಿ ಅದೃಷ್ಟವಶಾತ್ ತಸ್ಲೀಂ, ಶಾಕೀರ್ ಪ್ರಾಣಾಪಾಯದಿಂದ ಬಚಾವಾಗಿ, ಗಂಭೀರ ಗಾಯಗೊಂಡು ಆಸ್ಪತ್ರೆಗೆ ದಾಖಲಾಗಿದ್ದರು. ಈ ಸಂಬಂಧ ಬಂಟ್ವಾಳ ಗ್ರಾಮಾಂತರ ಠಾಣೆಯಲ್ಲಿ 14 ಮಂದಿಯ ವಿರುದ್ಧ ಕೊಲೆಯತ್ನ ಪ್ರಕರಣ ದಾಖಲಾಗಿತ್ತು.

ಇವರ ಪೈಕಿ ಪ್ರಮುಖ ಆರೋಪಿಯಾಗಿರುವ ಮನ್ಸೂರ್ ಯಾನೆ ಮಂಚು ಹಾಗೂ ಈತನ ತಂಡದಲ್ಲಿದ್ದ ಮಿಚ್ಚ ಯಾನೆ ಮಿಸ್ತಕ್, ಸರ್ಪುದ್ದೀನ್ ಯಾನೆ ತಾಟು, ರಿಜ್ವಾನ್ ಯಾನೆ ರಿಜ್ಜು, ಅದ್ನಾನ್ ಯಾನೆ ಅದ್ದು, ಸುಹೈಲ್ ಯಾನೆ ಚೋಯಿ, ಜಾಹೀದ್, ಸಾದಿಕ್ ಎಂಬವರನ್ನು ಬಂಧಿಸಲಾಗಿದೆ. ಆರೋಪಿಗಳನ್ನು ಶರಣಾಗತಿ ಮಾಡಲಾಗಿದೆ ಅನ್ನುವ ಗುಸು ಗುಸು ಕೇಳಿ ಬರುತ್ತಿದೆ. ಈ ಪೈಕಿ ಪಲ್ಟಿ ಇನ್ನೂ ಭೂಗತನಾಗಿದ್ದು ಈವರೆಗೂ ಬಂಧನವಾಗಿಲ್ಲ. ಈತನ ಜೊತೆ ಇನ್ನು ಐವರ ಬಂಧನ ಬಾಕಿ ಇದೆ. ಒಂದೇ ಗ್ಯಾಂಗ್ ಹೋಳಾಗಿ ಪರಸ್ಪರ ಕಾದಾಟಕ್ಕೆ ಇಳಿದಿದ್ದು ಫರಂಗಿಪೇಟೆ ಸುತ್ತಮುತ್ತ ಭಯದ ವಾತಾವರಣಕ್ಕೆ ಕಾರಣವಾಗಿದೆ. ಒಂದಂತು ಸತ್ಯ ಪ್ರತಿಕಾರಕ್ಕಾಗಿ ಸದ್ಯ ಇನ್ನೊಂದು ತಲೆ ಉರುಳುವುದಂತು ಗ್ಯಾರಂಟಿ. ಪೊಲೀಸ್ ಇಲಾಖೆಯಂತು ಎಚ್ಚರಿಕೆಯ ಹೆಜ್ಜೆ ಇಡಬೇಕಾಗಿದೆ.
