ಮೂಡಾ ಅಧ್ಯಕ್ಷರು ಭಾರೀ ಚಪ್ಪೆಯಂತೆ; ತಿಂಗಳಿಗೆ ಲಕ್ಷ, ಲಕ್ಷ ಮಾಮೂಲಿ ಹೋಗುತ್ತಿದೆಯಂತೆ.! ಕಮೀಷನರ್ ಕಮ್ಯುನಲ್ ಅಂತೆ. ಮೂಡಾ ದಲ್ಲಾಳಿಗಳ ಆಡಿಯೋ ಬಹಿರಂಗ..!

ಕರಾವಳಿ

ಮುಗಿಯದ ಮೂಡಾ ಕರ್ಮಕಾಂಡ.!

ಮಂಗಳೂರು ನಗರಾಭಿವೃದ್ಧಿ ಪ್ರಾಧಿಕಾರದ ಮುಂಡಾಮೋಚ್ ಪುರಾಣಕ್ಕೆ ಕೊನೆಯೇ ಇಲ್ಲವೇ ಅನ್ನುವ ಮಾತುಗಳು ಎಲ್ಲೆಡೆ ಕೇಳಿ ಬರುತ್ತಿದೆ. ಹಿಂದಿನ ಆಯುಕ್ತರಾಗಿದ್ದ ಮನ್ಸೂರ್ ಅಲಿ ಲೋಕಾಯುಕ್ತ ರೈಡ್ ಗೆ ಸಿಲುಕಿ ಜೈಲು ಪಾಲಾಗಿದ್ದರು. ಆನಂತರ ಬಂದ ಆಯುಕ್ತೆ ರಫ್ ಅಂಡ್ ಟಫ್ ಅನ್ನುವ ಮಾತುಗಳು ಕೇಳಿ ಬಂದಿತ್ತು. ಮೂಡಾದ ಹಣೆಬರಹವೋ ಏನೋ ಮೂರೇ ತಿಂಗಳಲ್ಲಿ ಟಫ್ ಅಧಿಕಾರಿ ಠುಸ್ ಆಗಿದ್ದರು. ಲೋಕಾಯುಕ್ತ ಭೇಟೆ ಕಚೇರಿಗೆ ಮಾಮೂಲಿಯಾಯಿತು. ದಲ್ಲಾಳಿಗಳ ಸಾಮ್ರಾಜ್ಯವಾಗಿ ಮೂಡಾ ಪರಿವರ್ತನೆಗೊಂಡಿತು. ಅಧಿಕಾರಿಗಳು ಇಲ್ಲದೇ ಇದ್ದಾಗ ಕಚೇರಿಗೆ ದಲ್ಲಾಳಿಗಳು ನುಗ್ಗಿ ಫೈಲ್ ತಿದ್ದುವಷ್ಟರ ಮಟ್ಟಿಗೆ ಮೂಡಾ ಹಣೆಬರಹ ಬದಲಾಯಿತು. ದಲ್ಲಾಳಿಯ ವಿಡಿಯೋ ಬಹಿರಂಗಗೊಂಡಂತೆ ಸಾರ್ವಜನಿಕರಿಗೆ ದಿಗ್ಬಂಧನ ವಿಧಿಸಲಾಯಿತು. ಇದೀಗ ಯಾವುದೇ ಫೈಲ್ ಮೂಡಾಕ್ಕೆ ಹೋದರೆ ಹಿಂಬರಹ ನೀಡಿ ಕಳುಹಿಸಲಾಗುತ್ತಿದೆಯಂತೆ.

ಈ ನಡುವೆಯೇ ದಲ್ಲಾಳಿಗಳ ಸಂಬಾಷಣೆಯ ಮತ್ತೊಂದು ಬಿಸಿ ಬಿಸಿ ಆಡಿಯೋ ಬಹಿರಂಗಗೊಂಡಿದ್ದು, ಮೂಡಾ ದಲ್ಲಿ ಯಾವುದೂ ಸರಿ ಇಲ್ಲ ಅನ್ನುವುದು ಮತ್ತೆ ಮತ್ತೆ ಸಾಬೀತಾಗುತ್ತಿದೆ. ಮೂಡಾದ ದಲ್ಲಾಳಿ, ಕಾಂಗ್ರೆಸ್ ಕಾರ್ಯಕರ್ತ ಕಣ್ಣೂರು ನಿವಾಸಿಯೊಬ್ಬ ಮಾತನಾಡಿದ ಎನ್ನಲಾದ ಆಡಿಯೋ ದೊಡ್ಡ ಸಂಚಲನವನ್ನೇ ಸೃಷ್ಟಿಸಿದೆ. ಮೂಡಾ ಅಧ್ಯಕ್ಷರು ಭಾರೀ ಚಪ್ಪೆಯಂತೆ. ಅವರು ಯಾವುದೇ ವಿಷಯ ಮಾತನಾಡುತ್ತಿಲ್ಲವಂತೆ. ಕಮೀಷನರ್ ಕಡೆಯಿಂದ ಪ್ರತಿ ತಿಂಗಳು ಲಕ್ಷ, ಲಕ್ಷ ಹೋಗುತ್ತಿದೆಯಂತೆ. ಅನ್ನುವ ಆಡಿಯೋ ಇದೀಗ ಬಹಿರಂಗಗೊಂಡಿದೆ. ಇವಿಷ್ಟೇ ಮಾತ್ರವಲ್ಲ, ಕಾಂಗ್ರೆಸ್ ಕಾರ್ಯಕರ್ತನಾಗಿರುವ ಈ ದಲ್ಲಾಳಿ ಮೂಡಾ ದಲ್ಲಿ ಹಿಂದೂ -ಮುಸ್ಲಿಂ ಮಾಡಲಾಗುತ್ತಿದೆ ಎಂದಿದ್ದಾನೆ. ಇದರಲ್ಲಿ ಎಷ್ಟು ಸತ್ಯ, ಎಷ್ಟು ಸುಳ್ಳು ಬೆರಸಲಾಗಿದೆ ಎಂಬ ಅನುಮಾನವಿದೆ. ಬ್ರೋಕರ್ ಗಳು ಇಲಾಖೆಯಲ್ಲಿ ತಮ್ಮ ಬೇಳೆ ಬೇಯದಿದ್ದಲ್ಲಿ ಯಾವ ಮಾಟ್ಟಕ್ಕೂ ಇಳಿಯುತ್ತಾರೆ ಎಂಬ ಹಲವು ನಿದರ್ಶನಗಳಿವೆ. ಅದರಲ್ಲಿ ಇದೂ ಒಂದಾಗಿರಬಹುದೇ.?

ದಲ್ಲಾಳಿಗಳನ್ನು ಇದೀಗ ಮೂಡಾದೊಳಗೆ ಸ್ಟ್ರಿಕ್ಟ್ ಮಾಡಲಾದ ಕಾರಣಕ್ಕೆ ಈತ ಈ ರೀತಿ ಮಾತನಾಡಿದ್ದಾನೆ ಅನ್ನುವ ಮಾತುಗಳು ಇವೆ.‌ ಇನ್ನೊಂದೆಡೆ ಇಲ್ಲಿ ಅಲ್ಪಸಂಖ್ಯಾತ ಸಮುದಾಯದ ಅಧಿಕಾರಿಗಳು ಕೆಲಸ ಮಾಡದಂತಹ ವಾತಾವರಣವನ್ನು ಸೃಷ್ಟಿಸಲಾಗುತ್ತಿದೆ. ಈ ಹಿಂದಿನ ಆಯುಕ್ತರನ್ನು ಹಿಂದೂ ಸಂಘಟನೆಗಳು ಇಲ್ಲಿ ದೊಡ್ಡ ರಾದ್ಧಾಂತ ಮಾಡಿ ಓಡಿಸುವ ಪ್ರಯತ್ನ ಮಾಡಿದ್ದವು. ಇದೀಗ ಕಾಂಗ್ರೆಸ್ ಕಾರ್ಯಕರ್ತರೇ ಕಮ್ಯುನಲ್ ಲೇಪ ಕೊಡುವ ಮೂಲಕ ಮತ್ತೊಂದು ಯುದ್ಧಕ್ಕೆ ತಯಾರಿ ಮಾಡುತ್ತಿದ್ದಾರಾ ಅನ್ನುವ ಪ್ರಶ್ನೆ ಎದುರಾಗಿದೆ. ಒಟ್ಟಾರೆ ಮೂಡಾ ದ ಹಣೆಬರಹ ಸರಿ ಇದ್ದಂತೆ ಕಾಣುತ್ತಿಲ್ಲ.