ಪೆರುವಾಯಿ ಕಡೆಯಿಂದ ವಿಟ್ಲದ ಶಾಲೆಗಳಿಗೆ ಮಕ್ಕಳ ಸಾಗಿಸುತ್ತಿದ್ದ ಟವೆರಾ ಮುಚ್ಚಿರಪದವು ಎಂಬಲ್ಲಿ ಪಲ್ಟಿ ಹೊಡೆದಿದೆ. ಹಲವು ಮಕ್ಕಳು ಹಾಗೂ ಚಾಲಕ ಗಾಯಗೊಂಡಿದ್ದಾರೆ. ಅಪಘಾತದಲ್ಲಿ ಟವೆರಾ ಅಪ್ಪಚ್ಚಿಯಾಗಿದ್ದರೂ ಪುಟಾಣಿಗಳು ಬದುಕಿರುವುದೇ ಪವಾಡವಾಗಿದೆ.
ವಿಟ್ಲ ಪರಿಸರದ ಏಳು ಶಾಲೆಗಳಿಗೆ ಸುಮಾರು ಇನ್ನೂರಕ್ಕೂ ಹೆಚ್ಚು ವಾಹನಗಳು ಮಕ್ಕಳ ಸಾಗಿಸುತ್ತಿದ್ದಾರೆ.
ಕೇಳೋರೇ ಇಲ್ಲ..
ಆಟೋಗಳಲ್ಲಿ ಹದಿನೈದು, ಮಾರುತಿ ವ್ಯಾನಲ್ಲಿ ಇಪ್ಪತ್ತು, ಟೆಂಪೋ, ಮಿನಿ ಬಸ್ಸುಗಳಲ್ಲಿ ನಲುವತ್ತಕ್ಕೂ ಹೆಚ್ಚು ಮಕ್ಕಳನ್ನು ತುಂಬಿಸಿ ಬೇಕಾಬಿಟ್ಟಿಯಾಗಿ ಚಾಲಕರು ಸಾಗಾಟ ಮಾಡುತ್ತಿದ್ದರೂ ಕೇಳೋರೇ ಇಲ್ಲವಾಗಿದೆ.

ಡಿ.ಎಲ್ಲೂ ಇಲ್ಲ..ಇನ್ಸೂರೆನ್ಸ್ ಇಲ್ಲಾ..
ಸಾರಿಗೆ ನಿಯಮಗಳನ್ನು ಗಾಳಿಗೆ ತೂರಿ ಮಕ್ಕಳ ಸಾಗಿಸುತ್ತಿದ್ದ ಅದೆಷ್ಟೋ ವಾಹನಗಳಲ್ಲಿ ಇನ್ಸೂರೆನ್ಸೂ ಇಲ್ಲ. ಚಾಲಕರಿಗೆ ಲೈಸನ್ಸೂ ಇಲ್ಲ..ಅಪಘಾತವಾದರೆ ಇನ್ಯಾರದೋ ವಾಹನಗಳ ತೋರಿಸಿ ಬಚಾವಾಗುತ್ತಿದ್ದಾರೆ. ಸಾರಿಗೆ ಅಧಿಕಾರಿಗಳು, ಪೊಲೀಸರು ಇದ್ಯಾವುದನ್ನೂ ಕೇಳಲು, ನೋಡಲು ಮುಂದಾಗದಿರುವುದು ಮತ್ತಷ್ಟು ಅನಾಹುತಗಳಿಗೆ ಕಾರಣವಾಗಿದೆ. ದ್ವಿಚಕ್ರ ವಾಹನಗಳನ್ನು ಮಾತ್ರ ತಪಾಸಣೆ ಮಾಡಿ ಐನೂರು, ಒಂದು ಸಾವಿರ ದಂಡದ ನೆಪದಲ್ಲಿ ಹಣ ಸುಲಿಗೆ ಮಾಡುವ ಪೊಲೀಸರಿಗೆ ಶಾಲಾ ಮಕ್ಕಳ ಕಸಾಯಿಖಾನೆಗೆ ಸಾಗಿಸುವ ಕುರಿ, ಗೋವುಗಳಂತೆ ತುಂಬಿಸುವುದು ಕಾಣುತ್ತಿಲ್ಲವೇ ಎಂದು ಪೋಷಕರು ಆರೋಪಿಸುತ್ತಿದ್ದಾರೆ.
