1,20,708 ಮಂದಿ ಸಾವಿನ ಬಗ್ಗೆ ಶಂಕೆ ಇದ್ದು, ಇದು ಮಹಾಪರಾಧ ಅಂತ ಆಯೋಗ ಹೇಳಿದೆ.
ಬಿ ಎಸ್ ಯಡಿಯೂರಪ್ಪ ನೇತ್ರತ್ವದ ಬಿಜೆಪಿ ಸರ್ಕಾರವಿದ್ದಾಗ ಕೋವಿಡ್ ವೇಳೆಯಲ್ಲಿ ಭಾರೀ ಹಗರಣ ನಡೆಸಿದೆ ಅಂತ ಆರೋಪವಿದ್ದು, ಈಗಾಗಲೇ ಅದರ ತನಿಖೆಗೆ ನ್ಯಾ.ಕುನ್ಹಾ ನೇತೃತ್ವದಲ್ಲಿ ತನಿಖಾ ಸಮಿತಿ ರಚಿಸಿ ಸಮಿತಿಯು ಮಧ್ಯಂತರ ವರದಿಯನ್ನು ನೀಡಿದೆ. ಸರಿ-ಸುಮಾರು 1,57,914 ಮಂದಿ ಕೋವಿಡ್ ಅವಧಿಯಲ್ಲಿ ಸಾವನ್ನಪ್ಪಿರುವ ಬಗ್ಗೆ ಸಾಂಖ್ಯಿಕ ನಿರ್ದೇಶನಾಲಯದ ಮಾಹಿತಿ ನೀಡಿದೆ. ಆದರೆ ಅದನ್ನು ಬಚ್ಚಿಟ್ಟು 37,206 ಮಂದಿ ಸಾವನ್ನಪ್ಪಿರುವ ಲೆಕ್ಕ ನೀಡಿರುವ ಬಗ್ಗೆ ಆರೋಗ್ಯ ಇಲಾಖೆ ಮಾಹಿತಿ ನೀಡಿದೆ. ಆದರೆ ಹೆಚ್ಚುವರಿ 1,20,708 ಮಂದಿ ಸಾವಿನ ಬಗ್ಗೆ ಶಂಕೆ ಇದ್ದು, ಇದು ಮಹಾಪರಾಧ ಅಂತ ಆಯೋಗ ಹೇಳಿದೆ. ಇದು ಸರ್ಕಾರದ ಬೇಜವಾಬ್ದಾರಿ ಕಾರಣ ಎಂದು ಉಲ್ಲೇಖಿಸಿದೆ.

ಕೋವಿಡ್‌ಗೆ ಮೀಸಲಿಟ್ಟಿದ್ದ ಹಣ ಬಳಕೆ ಮಾಡದೇ ಕೇಂದ್ರ ಸರ್ಕಾರಕ್ಕೆ ವಂಚನೆ ಮಾಡಿದ್ದಾಗಿಯೂ ವರದಿಯಲ್ಲಿ ಆರೋಪ ಮಾಡಲಾಗಿದೆ. ನಿಯಮಾನುಸಾರ ಬಳಕೆ ಮಾಡಲು ಕೇಂದ್ರ ಸರ್ಕಾರ ಸೂಚಿಸಿತ್ತು, ಕೋವಿಡ್ ನಿಯಂತ್ರಣಕ್ಕೆ ಮೀಸಲಿಟ್ಟಿದ್ದ ಹಣ 1747 ಕೋಟಿ 47 ಲಕ್ಷ ಮೀಸಲಿಟ್ಟಿತ್ತು. ಆದರೆ 1406 ಕೋಟಿ ಬಳಸಿದ್ದಕ್ಕೆ ಮಾತ್ರ ಲೆಕ್ಕ ಪತ್ರ ನೀಡಿತ್ತು. 340 ಕೋಟಿ ಹಣ ಸಮರ್ಪಕ ಬಳಕೆ ಮಾಡದೇ ವ್ಯರ್ಥ ಮಾಡಿರುವ ಬಗ್ಗೆ ಆಯೋಗದ ವರದಿಯಲ್ಲಿ ಉಲ್ಲೇಖಿಸಲಾಗಿದೆ.
ECRP ಹಣ ಬಳಕೆಯಲ್ಲೂ ಲೋಪವಾಗಿದೆ ಅಂತ ವರದಿಯಲ್ಲಿ ಹೇಳಿದೆ. ಇದಕ್ಕಾಗಿ ಇಟ್ಟಿದ್ದ 447 ಕೋಟಿ ಇಟ್ಟಿದ್ದು, ಇದರಲ್ಲಿ 330 ಕೋಟಿ 90 ಲಕ್ಷ ರೂಪಾಯಿ ಮಾತ್ರ ಬಳಕೆ ಆಗಿರೋ ದಾಖಲೆ ಸಿಕ್ಕಿದೆ. ಅದರಲ್ಲೂ 106 ಕೋಟಿ ಬಳಕೆ ಆಗದೇ ವ್ಯರ್ಥವಾಗಿದ್ದು, ಒಟ್ಟು ಸುಮಾರು 446 ಕೋಟಿ ವ್ಯರ್ಥವಾಗಿದೆ ಅಂತ ವರದಿಯಲ್ಲಿ ಉಲ್ಲೇಖಿಸಲಾಗಿದೆ. ಮಾಜಿ ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ ಹಾಗೂ ಅಂದಿನ ಆರೋಗ್ಯ ಸಚಿವ ಬಿ. ಶ್ರೀರಾಮುಲು ಅವಧಿಯಲ್ಲಿ ಕೋವಿಡ್ ವೇಳೆಯಲ್ಲಿ ಕೈಗೊಂಡ ಕೋವಿಡ್ ನಿಯಂತ್ರಣ ಕ್ರಮಕ್ಕೆ ಸಮಿತಿ ಆಕ್ಷೇಪ ವ್ಯಕ್ತಪಡಿಸಿದೆ.
