ಗುಂಡಿನ ಚಕಮಕಿ ನಕ್ಸಲ್ ನಾಯಕ ವಿಕ್ರಂ ಗೌಡ ಬಲಿ. ವಿಕ್ರಂ ಗೌಡ ಕಬ್ಬಿನಾಲೆ ಮೂಲದವರು.

ಕರಾವಳಿ

ಉಡುಪಿ: ಪಶ್ಚಿಮ ಘಟ್ಟದ ತಪ್ಪಲಿನ ಅರಣ್ಯದಂಚಿನ ಪ್ರದೇಶಗಳಲ್ಲಿ ನಕ್ಸಲ್ ನಿಗ್ರಹ ದಳದ ಕಾರ್ಯಾಚರಣೆ ತೀವ್ರಗೊಂಡಿದ್ದು, ಉಡುಪಿ ಜಿಲ್ಲೆಯ ಹೆಬ್ರಿ ಠಾಣೆ ವ್ಯಾಪ್ತಿಯ ಕಬ್ಬಿನಾಲೆಯಲ್ಲಿ ಎನ್​ಕೌಂಟರ್ ನಡೆದಿದೆ. ನಕ್ಸಲ್ ನಾಯಕ ವಿಕ್ರಂ ಗೌಡ ಎಂಬಾತನನ್ನು ನಕ್ಸಲ್ ನಿಗ್ರಹ ಪಡೆ ಹತ್ಯೆ ಮಾಡಿದೆ. ನಕ್ಸಲ್ ನಾಯಕ ವಿಕ್ರಂ ಗೌಡ ಕಬ್ಬಿನಾಲೆ ಮೂಲದವನಾಗಿದ್ದಾನೆ. ಕಳೆದ ಕೆಲವು ದಿನಗಳಿಂದ ಈ ಭಾಗದಲ್ಲಿ ನಕ್ಸಲ್ ಚಟುವಟಿಕೆ ಬಿರುಸುಗೊಂಡಿತ್ತು. ಹೀಗಾಗಿ ನಕ್ಸಲ್ ನಿಗ್ರಹ ಪಡೆ ಕಾರ್ಯಾಚರಣೆ ಆರಂಭಿಸಿತ್ತು.

ಚಿಕ್ಕಮಗಳೂರು ಜಿಲ್ಲೆಯ ಶೃಂಗೇರಿ, ಎನ್‌ಆರ್ ಪುರ ಹಾಗೂ ಉಡುಪಿ, ಕಾರ್ಕಳ ಭಾಗದಲ್ಲಿ ಸಕ್ರಿಯನಾಗಿದ್ದ ವಿಕ್ರಂ ಗೌಡ, ಕೇರಳ, ಕೊಡಗು ಭಾಗದಲ್ಲಿಯೂ ನಕ್ಸಲ್ ಚಟುವಟಿಕೆಯಲ್ಲಿ ತೊಡಗಿಕೊಂಡಿದ್ದ.

ಇತ್ತೀಚೆಗೆ ಚಿಕ್ಕಮಗಳೂರು ಭಾಗದಲ್ಲಿ ಮುಂಡಗಾರು ಲತಾ ನೇತೃತ್ವದ ನಕ್ಸಲರ ತಂಡ ಓಡಾಡಿದ ಬಗ್ಗೆ ಮಾಹಿತಿ ಗೊತ್ತಾಗಿದ್ದು, ಎಎನ್‌ಎಫ್, ಪೊಲೀಸರು ಕೂಂಬಿಂಗ್ ಕಾರ್ಯಾಚರಣೆ ತೀವ್ರಗೊಳಿಸಿದ್ದರು.

ಉಡುಪಿ ಜಿಲ್ಲೆ ಹೆಬ್ರಿ ಸಮೀಪ ಪೀತಬೈಲ್ ಎಂಬಲ್ಲಿ ಶೂಟ್ ಔಟ್ ನಲ್ಲಿ ವಿಕ್ರಂ ಗೌಡ ಮೃತಪಟ್ಟಿದ್ದಾರೆ, ಎಎನ್‌ಎಫ್ ತಂಡದ ಕೂಂಬಿಂಗ್ ವೇಳೆ ವಿಕ್ರಂ ಗೌಡ ನೇತೃತ್ವದ ನಕ್ಸಲರ ತಂಡ ಮುಖಾಮುಖಿಯಾಗಿದ್ದು, ಗುಂಡಿನ ಚಕುಮತಿಯಲ್ಲಿ ವಿಕ್ರಂ ಗೌಡ ಮೃತಪಟ್ಟಿರುವ ಮಾಹಿತಿ ಲಭ್ಯವಾಗಿದೆ.

ಕಬ್ಬಿನಾಲೆ ಅರಣ್ಯದಲ್ಲಿ ನಡೆದ ಎನ್​ಕೌಂಟರ್​ನೊಂದಿಗೆ ಉಡುಪಿ ಭಾಗದಲ್ಲಿ 13 ವರ್ಷಗಳ ನಂತರ ಗುಂಡಿನ ಮೊರತೆ ಕೇಳಿದಂತಾಗಿದೆ. ಸೋಮವಾರ ರಾತ್ರಿ ಐದು ಮಂದಿ ಇದ್ದ ನಕ್ಸಲರ ತಂಡ ಗ್ರಾಮಕ್ಕೆ ದಿನಸಿ ಸಾಮಗ್ರಿ ಖರೀದಿಗೆಂದು ಬಂದಿದ್ದಾಗ ನಕ್ಸಲ್ ನಿಗ್ರಹ ಪಡೆ ಕಾರ್ಯಾಚರಣೆ ನಡೆಸಿದೆ. ಅಷ್ಟರಲ್ಲಿ ನಕ್ಸಲರು ಪೊಲೀಸರ ಮೇಲೆ ದಾಳಿ ನಡೆಸಿದ್ದಾರೆ. ಈ ವೇಳೆ ನಡೆದ ಎನ್​ಕೌಂಟರ್​​ನಲ್ಲಿ ವಿಕ್ರಂ ಗೌಡ ಹತನಾದರೆ, ಉಳಿದ ನಕ್ಸಲರು ಪರಾರಿಯಾಗಿದ್ದಾರೆ. ಇನ್ನುಳಿದ ನಕ್ಸಲರಿಗಾಗಿ ತೀವ್ರ ಶೋಧಕಾರ್ಯ ಮುಂದುವರೆದಿದೆ. ಹತನಾಗಿದರುವ ವಿಕ್ರಮ್ ಗೌಡ ನಕ್ಸಲರ ನೇತ್ರಾವತಿ ದಳದ ನಾಯಕನಾಗಿದ್ದ.

ಇತ್ತೀಚೆಗೆ ಕೆಲವು ದಿನಗಳ ಹಿಂದೆ ದಕ್ಷಿಣ ಕನ್ನಡ ಜಿಲ್ಲೆಯ ಕಡಬ, ಸುಳ್ಯ ಭಾಗದಲ್ಲಿ ಕೆಲವು ಗ್ರಾಮಗಳಿಗೆ ನಕ್ಸಲರು ಭೇಟಿ ನೀಡಿದ ಬಗ್ಗೆ ವರದಿಯಾಗಿತ್ತು. ಅದೇ ರೀತಿ, ಚಿಕ್ಕಮಗಳೂರು ಜಿಲ್ಲೆಯ ಕೊಪ್ಪ ತಾಲೂಕಿನ ಕೆಲವೆಡೆ ನಕ್ಸಲರು ಭೇಟಿ ನೀಡಿದ ಸುಳಿವು ದೊರೆತಿತ್ತು. ಕೊಪ್ಪ ತಾಲೂಕಿನ ಕಡೆಗುಂಡಿ ಗ್ರಾಮದ ಸುಬ್ಬೆಗೌಡ ಎಂಬವರ ಮನೆಯಲ್ಲಿ 3 ಬಂದೂಕುಗಳು ಪತ್ತೆಯಾಗಿದ್ದವು. ಆ ಮನೆಗೆ ನಕ್ಸಲ್ ನಾಯಕಿ ಮುಂಗಾರು ಲತಾ ಮತ್ತು ಆಕೆಯ ತಂಡ ಭೇಟಿ ನೀಡಿರುವ ಸುಳಿವು ಸಿಕ್ಕಿತ್ತು.