ಮೂಡಬಿದ್ರೆ ತಾಲೂಕು ಆಡಳಿತ ಸೌಧ ಬ್ರೋಕರ್ ಗಳ ಕೊಂಪೆಯಾಗಿಬಿಟ್ಟಿದೆ. ಇಲ್ಲಿ ತಾಲೂಕು ರಚನೆಯಾದರೂ ಪರ್ಮನೆಂಟ್ ತಹಶೀಲ್ದಾರ್ ಇಲ್ಲದೇ ಇರುವುದು ಇಲ್ಲಿನ ಆಡಳಿತದ ವೈಫಲ್ಯ ಎಂದು ಹೇಳಬಹುದು. ತಾಲೂಕು ಆಡಳಿತ ಸೌಧ ಬಕಾಸುರರ ಅಡ್ಡೆಯಾದರೂ, ಇದ್ದುದರಲ್ಲಿ ತಹಶೀಲ್ದಾರ್ ಪರವಾಗಿಲ್ಲ ಅನ್ನುವ ಮಾತು ನಾಗರಿಕ ವಲಯಗಳಿಂದ ಕೇಳಿ ಬರುತ್ತಿದೆ. ಮೂಲ್ಕಿ ತಹಶೀಲ್ದಾರ್ ಆಗಿರುವ ಪ್ರದೀಪ್ ಕುರ್ಡೇಕರ್ ಮೂಡಬಿದ್ರೆಯ ಪ್ರಭಾರ ತಹಶೀಲ್ದಾರ್. ಜನಮೆಚ್ಚಿದ, ಜನಸ್ನೇಹಿ ಅಧಿಕಾರಿ ಅನ್ನುವ ಇಮೇಜಿದೆ. ಸಾರ್ವಜನಿಕರೊಂದಿಗೆ ಉತ್ತಮ ಒಡನಾಟ ಹೊಂದಿದ್ದಾರೆ. ಉತ್ತಮ ಬಾಂಧವ್ಯ ಕೂಡ ಇದೆ. ಸಾರ್ವಜನಿಕರು ಸಮಸ್ಯೆ ಹೇಳಿಕೊಂಡು ಫೋನ್ ಕರೆ ಮಾಡಿದರೂ ತಕ್ಷಣ ಸ್ವೀಕರಿಸುವ ತಹಶೀಲ್ದಾರ್ ಸಾರ್ವಜನಿಕರ ಸಮಸ್ಯೆಗೆ ಸ್ಪಂದಿಸುತ್ತಾರೆ. ಆದರೆ ಇವರು ಇಲ್ಲಿ ಪ್ರಭಾರೀಯಾಗಿರುವುದರಿಂದ ವಾರಕ್ಕೆ ಎರಡೇ ದಿನ ಮಾತ್ರ ಬರುತ್ತಾರೆ. ಉಳಿದ ಅವಧಿಯಲ್ಲಿ ಮೂಲ್ಕಿಯಲ್ಲಿ ಸೇವೆಯಲ್ಲಿರುತ್ತಾರೆ. ಇದನ್ನೇ ಬಂಡವಾಳ ಮಾಡಿಕೊಂಡಿರುವ ಕೆಳಹಂತದ ಅಧಿಕಾರಿಗಳು ಇವರ ಗಮನಕ್ಕೆ ತರದೆ ಅಂಧಾ ದರ್ಬಾರ್ ನಡೆಸುತ್ತಾರೆ. ಸಾರ್ವಜನಿಕರನ್ನು ಸತಾಯಿಸುತ್ತಾರೆ. ಮೂಡಬಿದ್ರೆಗೆ ಇವರು ಪರ್ಮನೆಂಟ್ ತಹಶೀಲ್ದಾರ್ ಆಗಿ ಬಂದರೆ ಬೆದ್ರದ ತಾಲೂಕು ಆಡಳಿತದ ಜಾತಕವನ್ನು ಬದಲಿಸಿಯಾರು ಅನ್ನುವ ನಿರೀಕ್ಷೆ ಸಾರ್ವಜನಿಕರದ್ದು . ಸರಕಾರ, ಶಾಸಕರು ಇತ್ತ ಕಡೆ ಗಮನಹರಿಸಿದರೆ ಒಳ್ಳೆಯದು.
