ಬಿಟ್ ಕಾಯಿನ್ ದಂಧೆಯ ವಾಸನೆ
ಮಂಗಳೂರು ಗ್ರಾಮಾಂತರ ಠಾಣಾ ವ್ಯಾಪ್ತಿಯ ಮಲ್ಲೂರಿನ ಮನೆಯೊಂದಕ್ಕೆ ಕೇರಳ ಮೂಲದ ನಾಲ್ವರನ್ನು ಕರೆಯಿಸಿ ಕೂಡಿಹಾಕಿ ತಂಡವೊಂದು ಗಂಭೀರ ಹಲ್ಲೆ ನಡೆಸಿ ಲಕ್ಷಾಂತರ ರೂಪಾಯಿ ದೋಚಿದ ಪ್ರಕರಣ ಬೆಳಕಿಗೆ ಬಂದಿದ್ದು, ಸುಮಾರು ಹತ್ತರಷ್ಟು ಮಂದಿಯ ವಿರುದ್ಧ ದೂರು ದಾಖಲಾಗಿದೆ.
ಕೋಝಿಕ್ಕೋಡ್ ನಿವಾಸಿ ಅಬ್ದುಲ್ ಮನಾಫ್ ಹಾಗೂ ಅವರ ಸ್ನೇಹಿತರಾದ ಅರ್ಶಕ್ ಅಹಮ್ಮದ್, ಯಾಸರ್ ಅರಾಫತ್, ಮುಹಮ್ಮದ್ ಸಾಹಿರ್ ದುಬೈನಲ್ಲಿ ವ್ಯವಹಾರ ಮಾಡಿಕೊಂಡಿದ್ದು, ಇತ್ತೀಚೆಗೆ ಊರಿಗೆ ಬಂದು ನೆಲೆಸಿದ್ದರು. ಮಂಗಳೂರಿನ ಸರ್ಫಾರಾಝ್ ಎಂಬಾತನೊಂದಿಗೆ ಕೇರಳದ ನಾಲ್ವರಿಗೆ ವ್ಯವಹಾರವಿತ್ತು. ಜುಲೈ 11 ರಂದು ಮಂಗಳೂರಿಗೆ ಬಂದಿದ್ದರು ನಾಲ್ವರು. ಸರ್ಫರಾಜ್ ಎಂಬಾತ ಅವರನ್ನು ಕಾರಿನಲ್ಲಿ ಮಲ್ಲೂರಿನ ವ್ಯಕ್ತಿಯೊಬ್ಬನ ಜೊತೆ ಮಾತನಾಡಲಿಕ್ಕಿದೆ ಎಂದು ಕರೆಯಿಸಿಕೊಂಡು ಮಲ್ಲೂರು ಬದ್ರಿಯಾನಗರದ ಮನೆಯೊಂದರಲ್ಲಿ ಸಂಜೆಯಿಂದ ರಾತ್ರಿಯವರೆಗೆ ಅಕ್ರಮ ಬಂಧನದಲ್ಲಿರಿಸಿ ಹತ್ತರಷ್ಟು ಮಂದಿ ಗಂಭೀರ ಹಲ್ಲೆ ಮಾಡಿರುವುದಾಗಿ ದೂರಿನಲ್ಲಿ ತಿಳಿಸಲಾಗಿದೆ.
ಯಾಸರ್ ಕಿಸೆಯಲ್ಲಿದ್ದ 90,000 ರೂಪಾಯಿ ನಗದು, ಮುಹಮ್ಮದ್ ಸಾಹಿರ್ ಗೂಗಲ್ ಪೇ ನಿಂದ 10,000 ರೂಪಾಯಿ ವರ್ಗಾಯಿಸಿದ್ದಾರೆ. ತಂಡದಲ್ಲಿದ್ದ ವ್ಯಕ್ತಿಯೊಬ್ಬ ಯಾಸರ್ ಅರಾಫತ್ ಗೆ ತಲವಾರು ತೋರಿಸಿ ಬೆದರಿಸಿ ರುವುದಾಗಿ ದೂರಿನಲ್ಲಿ ತಿಳಿಸಲಾಗಿದೆ. ಘಟನೆಯಲ್ಲಿ ಅರ್ಷಾದ್ ಅಹಮ್ಮದ್ ಗಾಯಗೊಂಡು ನಗರದ ಖಾಸಗಿ ಆಸ್ಪತ್ರೆಗೆ ದಾಖಲಾಗಿದ್ದಾರೆ.
ಪ್ರಕರಣದ ಹಿಂದೆ ಬಿಟ್ ಕಾಯಿನ್ ದಂಧೆಯ ವಾಸನೆ ಬಡಿಯುತ್ತಿದೆ. ಆರೋಪಿಗಳು ಕ್ರಿಮಿನಲ್ ಹಿನ್ನೆಲೆ ಹೊಂದಿದವರು, ತಲೆಮರೆಸಿಕೊಂಡಿರುವುದಾಗಿ ಪೊಲೀಸ್ ಮೂಲಗಳಿಂದ ತಿಳಿದು ಬಂದಿದೆ.
